ಬೆಂಗಳೂರಿನಲ್ಲಿ ಭೂ ಒತ್ತುವರಿ, ಲೋಕಸತ್ತಾದಿಂದ ಪಟ್ಟಿ ಬಿಡುಗಡೆ
ಬೆಂಗಳೂರು, ಜೂ.10 : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 927 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಲೋಕಸತ್ತಾ ಪಕ್ಷ ಆರೋಪ ಮಾಡಿದೆ. ಭೂ ಒತ್ತುವರಿ ಮಾಡಿಕೊಂಡ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಿದೆ.
ಮಂಗಳವಾರ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ರಾಜ್ಯಾಧ್ಯಕ್ಷ ಎನ್.ಎಸ್. ಮುಕುಂದ ಹಾಗೂ ಪ್ರಧಾನ ಕಾರ್ಯದರ್ಶಿ ಸಿ.ಎನ್. ದೀಪಕ್ ಪಟ್ಟಿಯನ್ನು ಬಿಡುಗಡೆ ಮಾಡಿದರು. ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡ ಪ್ರತಿಷ್ಠಿತರ ಪಟ್ಟಿಯನ್ನು ಸರ್ಕಾರ 2013ರಲ್ಲಿ ಸಿದ್ಧಪಡಿಸಿದೆ. ಆದರೆ, ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಪ್ರತಿಷ್ಠಿತ ವ್ಯಕ್ತಿಗಳು, ಪ್ರಭಾವಿ ಸಚಿವರು, ರಾಜಕಾರಣಿಗಳು, ಉದ್ಯಮಿಗಳು, ಡೆವೆಲಪರ್‌ಗಳು ಸೇರಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 927 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮುಕುಂದ ಅವರು ದೂರಿದರು. [ಕೆರೆ ಒತ್ತುವರಿ ಸಂತ್ರಸ್ತರಿಗೆ ಸಿದ್ಧವಾಗಿದೆ 400 ಮನೆಗಳು]
ಬಡವರು ಕೆರೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ತೆರವುಗೊಳಿಸುವ ಸರ್ಕಾರ ಪ್ರಭಾವಿಗಳ ವಿಚಾರದಲ್ಲಿ ಏಕೆ ಸುಮ್ಮನಿದೆ ಎಂದು ಪ್ರಶ್ನಿಸಿದರು. ಸರ್ಕಾರ ಪಟ್ಟಿಯನ್ನು ಬಿಡುಗಡೆ ಮಾಡದ ಕಾರಣ ಪಕ್ಷ ಬಿಡುಗಡೆ ಮಾಡುತ್ತಿದೆ ಎಂದು ಸಿ.ಎನ್.ದೀಪಕ್ ಹೇಳಿದರು.[ಬೆಂಗಳೂರಿಗರ ಆತಂಕ ದೂರ ಮಾಡಿದ ಸರ್ಕಾರ]
ಪಟ್ಟಿಯಲ್ಲಿ ಯಾರ ಹೆಸರಿದೆ? : ಲೋಕಸತ್ತಾ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ವಾಮನ ಆಚಾರ್ಯ ಮುಂತಾದವರ ಹೆಸರಿದೆ.
ಶಾಸಕ ವರ್ತೂರು ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ರಹೀಂ ಪಾಷಾ, ಮಂಜುನಾಥ್, ಶೋಭಾ ಡೆವೆಲಪರ್, ಆದಿಚುಂಚನಗಿರಿ ಸೇವಾ ಟ್ರಸ್ಟ್, ಐಟಿಸಿ ಕಾರ್ಖಾನೆ, ಐಡಿಯಲ್ ಹೋಂ ಸೊಸೈಟಿ, ಉದ್ಯಮಿ ದಯಾನಂದ ಪೈ ಅವರ ಹೆಸರುಗಳು ಇವೆ.
ಎಲ್ಲೆಲ್ಲಿ ಒತ್ತುವರಿ? : ಡಾ. ವಾಮನ ಆಚಾರ್ಯ ಅವರು ಕೊಡಿಗೇನಹಳ್ಳಿ ಸರ್ವೆ ನಂ.53 ರಲ್ಲಿ 5 ಎಕರೆ ಗೋಮಾಳ ಜಮೀನು, ಆದಿಚುಂಚನಗಿರಿ ಸೇವಾ ಟ್ರಸ್ಟ್ ಕೆಂಗೇರಿಯ ರಾಮೋಹಳ್ಳಿ ಸರ್ವೆ ನಂ.43 ರಲ್ಲಿ 5.20 ಎಕರೆ ಜಮೀನು, ಸಚಿವ ದಿನೇಶ್ ಗುಂಡೂರಾವ್ ನವರತ್ನ ಅಗ್ರಹಾರ ಸರ್ವೆ ನಂ.3 ರಲ್ಲಿ 2.14 ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಪಟ್ಟಿಯಲ್ಲಿ ತಿಳಿಸಲಾಗಿದೆ.












Click it and Unblock the Notifications