ಕೈಲಾಗದವರು ಎಂದು ರಾಜ್ಯಪಾಲರು ಹೇಳಿದ್ದು ಯಾರಿಗೆ?
ಬೆಂಗಳೂರು, ಜೂ 6: ಬೆಂಗಳೂರು ನಗರವನ್ನು ಪೆಡಂಭೂತದಂತೆ ಕಾಡುತ್ತಿರುವ ಕಸದ ಸಮಸ್ಯೆಯ ಬಗ್ಗೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಕೈಲಾದವರಿಗೆ ಏನು ಮಾಡಲು ಸಾಧ್ಯ ಎಂದು ಬಿಬಿಎಂಪಿ ಅಧಿಕಾರಿಗಳನ್ನು ಸಮಾ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದಲ್ಲಿ ಶುಕ್ರವಾರ (ಜೂ 6) ಬಿಎಸ್ಎನ್ಎಲ್ ಸಂಸ್ಥೆಯ ' ಪೆಂಟಾ ಭಾರತ್' ಫೋನ್ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಭಾರದ್ವಾಜ್, ನಗರದ ಕಸದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಪರ್ಯಾಯ ಮಾರ್ಗವನ್ನು ಹುಡುಕದೇ ಹೀಗೇ ಇರುತ್ತೇವೆ ಎನ್ನುವವರಿಗೆ ಏನು ಮಾಡಲು ಸಾಧ್ಯ ಎಂದು ಕಿಡಿಕಾರಿದ್ದಾರೆ. (ಮಂಡೂರು: ಒನ್ ಇಂಡಿಯಾ ಕನ್ನಡ ರಿಪೋರ್ಟ್)

ಬೆಂಗಳೂರು ಕಸದ ಸಮಸ್ಯೆಗೆ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಸ್ಪಂಧಿಸಬೇಕು, ಕಸವನ್ನು ಹೊರಹಾಕಿ ನಗರವನ್ನು ಸ್ವಚ್ಛಗೊಳಿಸಬೇಕು. ನಾವು ಹಾಗೇ ಮಾಡುವುದಿಲ್ಲ, ಹೀಗೇ ಬದುಕುತ್ತೇವೆ ಎನ್ನುವ ಕೈಲಾಗದವರಿಗೆ ನಾನು ಏನು ಹೇಳಲು ಸಾಧ್ಯವೆಂದು ರಾಜ್ಯಪಾಲರು ಬೇಸರ ವ್ಯಕ್ತ ಪಡಿಸಿದ್ದಾರೆ.
ಕಾವೇರಿ ಸಮಸ್ಯೆಗೆ ಎರಡೂ ರಾಜ್ಯದ ಮುಖ್ಯಮಂತ್ರಿಗಳು ಕೂತು ಚರ್ಚಿಸಿ ಪರಿಹಾರ ಕೊಂಡುಕೊಳ್ಳಬೇಕು. ಆದರೆ ಅದನ್ನೇ ದೊಡ್ಡದು ಮಾಡಿದರೆ ಸಮಸ್ಯೆ ಇನ್ನಷ್ಟು ಉಲ್ಭಣವಾಗುತ್ತದೆ ಎಂದು ರಾಜ್ಯಪಾಲರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ರಾಜ್ಯಪಾಲರು, ಈ ರಾಜ್ಯದ ಜನತೆ ನನಗೆ ಉತ್ತಮ ಸಹಕಾರ ನೀಡಿದ್ದಾರೆ. ರಾಜ್ಯದಲ್ಲಿ ಇದ್ದಷ್ಟು ದಿನ ಚೆನ್ನಾಗಿಯೇ ಇರುತ್ತೇನೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದಿದ್ದಾರೆ.











Click it and Unblock the Notifications