ಅಧಿಕಾರಿಗಳ ಲಂಚಾವತಾರ: ಸಂಬಳಕ್ಕಿಂತ ಮೂರು ಪಟ್ಟು ಹಣ UPIನಲ್ಲಿ ಟ್ರಾನ್ಸ್‌ಫರ್!
ಸರ್ಕಾರಿ ಇಲಾಖೆಗಳಲ್ಲಿ ಲಂಚಾವತಾರ ಮಿತಿಮೀರಿದೆ ಎಂದು ಸಾರ್ವಜನಿಕರು ದೂರುವುದನ್ನು ನೋಡಿದ್ದೇವೆ. ಕೆಲವರು ಲಂಚ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆಗಳೂ ಇವೆ. ಏನೇ ಆದರೂ ಸರ್ಕಾರಿ ಕಚೇರಿಗಳಲ್ಲಿ ʼಕಾಸಿಲ್ಲದೆ ಕೆಲಸ ನಡೆಯಲ್ಲʼ ಅನ್ನೋ ಸ್ಥಿತಿಯಂತೂ ಇದೆ.
ಈ ಲಂಚವನ್ನು ನಾನಾ ರೀತಿಯಲ್ಲಿ ಪಡೆಯುತ್ತಿದ್ದಾರೆ ಎನ್ನುವ ಆರೋಪವೂ ಇದ್ದು, ಇದೀಗ ತಂತ್ರಜ್ಞಾನಕ್ಕೆ ತಕ್ಕಂತೆ ಲಂಚ ಪಡೆಯುವ ಸ್ಟೈಲ್ ಕೂಡ ಬದಲಾಗಿದೆ. ಈಗೆಲ್ಲ ಡಿಜಿಟಲ್ ಯುಗ ಆಗಿರುವುದರಿಂದ ಕ್ಷಣಮಾತ್ರದಲ್ಲಿ ದುಡ್ಡು ವರ್ಗಾವಣೆ ಮಾಡುವ ತಂತ್ರಜ್ಞಾನ ಚಾಲ್ತಿಯಲ್ಲಿದೆ. ಗೂಗಲ್ ಪೇ, ಫೋನ್ ಪೇ ಬಳಕೆದಾರರಿಗೆ ಇದು ಗೊತ್ತೇ ಇರುತ್ತೆ. ಈಗ ಲಂಚ ಪಡೆಯುವುದಕ್ಕೂ ಇದೇ ತಂತ್ರಜ್ಞಾನ ಬಳಕೆಯಾಗುತ್ತಿದೆ ಎಂದರೆ ನಂಬಲೇಬೇಕು.

ನೆಲಮಂಗಲ ವ್ಯಾಪ್ತಿಯಲ್ಲೂ ಸರ್ಕಾರಿ ಕಚೇರಿಗಳ ಸಿಬ್ಬಂದಿ ಇದೇ ರೀತಿ ಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆಯುತ್ತಿದ್ದಾರೆ ಎನ್ನುವ ವಿಚಾರ ಹೊರಬಿದ್ದಿದೆ. ನೆಲಮಂಗಲ ನಗರಸಭೆ ಕಚೇರಿ, ತಾಲ್ಲೂಕು ಕಚೇರಿ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸಿಬ್ಬಂದಿ ಗೂಗಲ್‌ಪೇ, ಫೋನ್‌ಪೇನಂತಹ ಯುಪಿಐ ಆ್ಯಪ್‌ಗಳ ಮೂಲಕ ಲಂಚ ಪಡೆಯುತ್ತಿದ್ದಾರೆ ಎಂದು ದೂರುಗಳು ಬಂದಿವೆ. ಮಾಹಿತಿಯ ಪ್ರಕಾರ ಅಧಿಕಾರಿಗಳ ಸಂಬಳಕ್ಕಿಂತ ಮೂರು ಪಟ್ಟು ಹೆಚ್ಚಿನ ಹಣ ಇವರ ಖಾತೆಗಳಿಗೆ ಟ್ರಾನ್ಸ್‌ಫರ್ ಆಗಿದೆ ಎನ್ನುವ ಶಾಕಿಂಗ್ ವಿಚಾರ ಹೊರಬಿದ್ದಿದೆ.
ಈ ಬಗ್ಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ವಿಚಾರಣೆ ನಡೆಸಲಿದ್ದಾರೆ. ನೆಲಮಂಗಲ ತಾಲ್ಲೂಕಿನ ವಿವಿಧ ಸರ್ಕಾರಿ ಕಚೇರಿಗಳು, ಹಾಸ್ಟೆಲ್‌ಗಳು, ಆರೋಗ್ಯ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೆಲಮಂಗಲ ನಗರಸಭೆ, ಭೂ ದಾಖಲೆಗಳ ಕಚೇರಿ, ತಾಲ್ಲೂಕು ಕಚೇರಿಗಳಲ್ಲಿ ಅಧಿಕಾರಿಗಳು ಲಂಚ ಪಡೆಯುತ್ತಿರುವ ಕುರಿತು ದೂರು ಬಂದಿದ್ದ ಹಿನ್ನೆಲೆ ದಿಢೀರ್ ಭೇಟಿ ನೀಡಿದ್ದಾರೆ.
ದೂರಿನ ಮೇರೆಗೆ ಪರಿಶೀಲನೆ ನಡೆಸಿದಾಗ ಸರ್ಕಾರಿ ಅಧಿಕಾರಿಗಳ ಮೊಬೈಲ್ ಫೋನ್‌ಗಳಲ್ಲಿ ಹಣ ಟ್ರಾನ್ಸ್‌ಫರ್ ಆಗಿರುವ ಕುರಿತು ಚೆಕ್ ಮಾಡಿದ್ದಾರೆ. ಈ ವೇಳೆ ಯುಪಿಐ ಆ್ಯಪ್‌ಗಳಾದ ಫೋನ್ ಪೇ, ಗೂಗಲ್ ಪೇ ಮೂಲಕ ಭಾರಿ ಮೊತ್ತದ ಹಣ ಟ್ರಾನ್ಸ್‌ಫರ್ ಆಗಿರುವುದು ಪತ್ತೆಯಾಗಿದೆ. ಅಚ್ಚರಿಯ ವಿಚಾರವೆಂದರೆ, ಸಿಬ್ಬಂದಿಯ ಒಂದು ತಿಂಗಳ ವೇತನಕ್ಕಿಂತಲೂ ಮೂರು ಪಟ್ಟು ಹೆಚ್ಚು ಹಣ ಈ ಆಪ್‌ಗಳ ಮುಖಾಂತರ ಟ್ರಾನ್ಸ್‌ಫರ್ ಆಗಿದೆ.

ಈ ಸಂಬಂಧ ಲೋಕಾಯುಕ್ತ ಕಾಯ್ದೆಯಡಿ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆ ಎಲ್ಲ ಸಿಬ್ಬಂದಿಯ ಯುಪಿಐ ಆ್ಯಪ್‌ಗಳಲ್ಲಿ ಹಣ ಟ್ರಾನ್ಸ್‌ಫರ್ ವಿವರ ಹಾಗೂ ಅವರಿಗೆ ಯಾರು ಹಣ ಕಳಿಸಿದ್ದಾರೆ ಎಂಬುದರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ಮಿತಿಮೀರಿದ್ದು, ಇದರ ನಿಯಂತ್ರಣಕ್ಕೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದೇ ರೀತಿ ಡಿಜಿಟಲ್ ವ್ಯವಸ್ಥೆಯ ಮೂಲಕವೂ ಎಲ್ಲೆಡೆ ಲಂಚ ಪಡೆಯುತ್ತಿರುವುದು ನಡೆಯುತ್ತಲೇ ಇದೆ. ಈ ಬಗ್ಗೆ ಸರ್ಕಾರಿ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಡಬೇಕು ಎಂದೂ ಹೇಳಿದ್ದಾರೆ.












Click it and Unblock the Notifications