ದೇವನಹಳ್ಳಿ: ಅಸಮರ್ಪಕ ರಸ್ತೆ ಕಾಮಗಾರಿಗೆ ಬಾಲಕಿ ಬಲಿ, ಪ್ರತಿಭಟನೆ
ದೇವನಹಳ್ಳಿ, ಜನವರಿ 06: ಶಾಲೆಗೆ ಹೋಗಲೆಂದು ರಸ್ತೆ ದಾಟುತ್ತಿದ್ದ ದೇವನಹಳ್ಳಿ ಸಮೀಪದ ಬೀರಸಂದ್ರ ಗ್ರಾಮದ ಹರ್ಶಿತಾ (14)ಗೆ ವೇಗವಾಗಿ ಬಂದ ಟಾಟಾ ಸುಮೊ ಡಿಕ್ಕಿ ಹೊಡೆದ ಕಾರಣ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಗೆ ಕಳಪೆ ರಸ್ತೆ ನಿರ್ವಹಣೆಯೇ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ.
ರಸ್ತೆಯ ಮಧ್ಯೆ ಮೃತ ಬಾಲಕಿ ಹರ್ಷಿತಾ ಶವವನ್ನು ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿರುವ ಬೀರಸಂದ್ರ ಹಾಗೂ ಸುತ್ತಲಿನ ಗ್ರಾಮಸ್ಥರು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಶವ ತೆಗೆಯುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.
ಇಂದು ಬೆಳಿಗ್ಗೆ 8.45 ಸಮಯಕ್ಕೆ ಹರ್ಷಿತಾ ಶಾಲೆಗೆ ತೆರಳಲು ಬಸ್ ಹಿಡಿಯಲೆಂದು ರಸ್ತೆ ದಾಟುತ್ತಿರುವ ಸಮಯದಲ್ಲಿ ಆಂದ್ರಪ್ರದೇಶ ನೊಂದಣಿ ಸಂಖ್ಯೆ ಹೊಂದಿರುವ ಟಾಟಾ ಸುಮೊ ಒಂದು ವೇಗವಾಗಿ ಬಂದು ಹರ್ಷಿತಾಗೆ ಡಿಕ್ಕಿ ಹೊಡೆದ ಪರಿಣಾಮ ಹರ್ಷಿತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಶವ ಇಟ್ಟು ಪ್ರತಿಭಟನೆ
ಹರ್ಷಿತಾ ಸಾವಿನಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು ರಸ್ತೆ ಮಧ್ಯೆ ಟೈರ್‌ಗಳನ್ನಿಟ್ಟು ಬೆಂಕಿ ಹಚ್ಚಿ ರಸ್ತೆ ಬಂದ್ ಮಾಡಿರುವ ಗ್ರಾಮಸ್ಥರು, ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ, ಹಾಗೂ ಮೃತ ಹರ್ಷಿತಾ ಕುಟುಂಬಕ್ಕೆ ಹೆದ್ದಾರಿ ಪ್ರಾಧಿಕಾರವು ನಷ್ಟ ಪಾವತಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಅರ್ಧ ನಡೆಸಿರುವ ಕಾಮಗಾರಿ
ನಾಲ್ಕು ವರ್ಷದ ಹಿಂದೆ ಪ್ರಾರಂಭ ಮಾಡಿದ್ದ ದೊಡ್ಡಬಳ್ಳಾಪುರ-ಹೊಸೂರು ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವ ಕಾರಣ, ರಸ್ತೆಯಲ್ಲಿ ಸ್ಪೀಡ್ ಬ್ರೇಕರ್‌ಗಳು, ವೈಟ್ ಟಾಪ್‌ಗಳು, ರಸ್ತೆ ಬದಿ ಸುರಕ್ಷತಾ ಚಿಹ್ನೆಗಳು ಯಾವುವೂ ಇಲ್ಲದ ಕಾರಣ ವಾಹನ ಸವಾರರು ಅತಿಯಾದ ವೇಗವಾಗಿ ವಾಹನ ಚಲಾಯಿಸುತ್ತಾರೆ ಹಾಗಾಗಿ ಇದು ಅಪಾಯಕಾರಿ ರಸ್ತೆಯಾಗಿ ಪರಿಣಮಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಗಲೂ ಪ್ರತಿಭಟನೆ
ಎರಡು ತಿಂಗಳುಗಳ ಹಿಂದೆಯಷ್ಟೆ ಬೀರಸಂದ್ರ ಗ್ರಾಮದ ಬಳಿಯ ಚಪ್ಪರಕಲ್ಲು ಗ್ರಾಮದ ನಿವಾಸಿಯೊಬ್ಬರು ಇದೇ ಕಾರಣಕ್ಕೆ ಅಸುನೀಗಿದ್ದರು ಆಗಲೂ ಕೂಡ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು. ಅಷ್ಟೆ ಅಲ್ಲದೆ ಹೆದ್ದಾರಿ ಪ್ರಾಧಿಕಾರಕ್ಕೆ ರಸ್ತೆ ಉಬ್ಬುಗಳನ್ನು ನಿರ್ಮಿಸುವಂತೆ ಮನವಿ ಸಹ ಮಾಡಲಾಗಿತ್ತು. ಮನವಿ ಸ್ವೀಕರಿಸಿದ್ದ ಅಧಿಕಾರಿಗಳು ಆ ನಂತರ ಮನವಿಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು.

ಪ್ರತಿಭಟನಾಕಾರರ ಮನವೊಲಿಕೆ
ಸ್ಥಳಕ್ಕೆ ಆಗಮಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್‌ಪಿ ಮತ್ತು ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ಅವರು ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಕೈಬಿಡುವಂತೆ ಮಾಡಿದ್ದಾರೆ. ಅಪಘಾತ ಕುರಿತು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications