ಸೋನಿಯಾ ಗಾಂಧಿ ಸೂಚನೆ: ರಾಜ್ಯಕ್ಕೆ ಬಂದ ಕಾಂಗ್ರೆಸ್ ಟಾಪ್ ನಾಯಕರು
ಬೆಂಗಳೂರು, ಜುಲೈ 09: ಕರ್ನಾಟಕ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆಗಳು ಆಗುತ್ತಿದ್ದು, ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಇಲ್ಲಿನ ಕಾಂಗ್ರೆಸ್ ನಾಯಕರು ವಿಫಲರಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ಟಾಪ್ ನಾಯಕರು ರಾಜ್ಯಕ್ಕೆ ಬಂದಿದ್ದಾರೆ.
ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸೂಚನೆ ಮೇರೆಗೆ ಸರ್ಕಾರವನ್ನು ಶತಾಯಗತಾಯ ಉಳಿಸಿಕೊಳ್ಳುವ ಕಾರಣದಿಂದ ಕಾಂಗ್ರೆಸ್ ಹಿರಿಯ ಗುಲಾಂ ನಬಿ ಆಜಾದ್, ಕಾನೂನು ತಜ್ಞ ಮತ್ತು ಹಿರಿಯ ಸದಸ್ಯ ಕಪಿಲ್ ಸಿಬಲ್ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ.
ಮೈತ್ರಿ ಸರ್ಕಾರ ರಚನೆ ಆಗುವಲ್ಲಿ ಗುಲಾಂ ನಬಿ ಆಜಾದ್ ಅವರೇ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು, ಈಗ ಮೈತ್ರಿ ಸರ್ಕಾರ ಅತ್ಯಂತ ಸಂಕಷ್ಟದಲ್ಲಿದೆ, ಹಾಗಾಗಿ ಈಗ ಅವರೇ ತೇಪೆ ಹಾಕಿ ಸಂಕಷ್ಟದಿಂದ ಸರ್ಕಾರವನ್ನು ಪಾರು ಮಾಡಲು ಬಂದಿದ್ದಾರೆ.

ಕಾನೂನು ಸಲಹೆ ನೀಡಲಿದ್ದಾರೆ ಕಪಿಲ್ ಸಿಬಲ್
ಕಪಿಲ್ ಸಿಬಲ್ ಅವರು ಕಾನೂನು ತಜ್ಞರಾಗಿದ್ದು, ಅತೃಪ್ತರ ಮೇಲೆ ಕಾಂಗ್ರೆಸ್ ಯಾವ ಕ್ರಮ ಜರುಗಿಸಬೇಕು, ಸ್ಪೀಕರ್ ಅವರು ಶಾಸಕರನ್ನು ಅನರ್ಹಗೊಳಿಸುವುದಾದರೆ ಹೇಗೆ ಮಾಡಬೇಕು ಎಂಬಿತ್ಯಾದಿ ಸಲಹೆಗಳನ್ನು ಅವರು ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಅತೃಪ್ತರ ಮನವೊಲಿಕೆಗೆ ಯತ್ನ
ಇವರಿಬ್ಬರೊಂದಿಗೆ ಬೆಂಗಳೂರಿನವರೇ ಆದ ಹಾಗೂ ರಾಮಲಿಂಗಾ ರೆಡ್ಡಿ ಅವರಿಗೆ ಆಪ್ತರಾಗಿರುವ ಬಿ.ಕೆ.ಹರಿಪ್ರಸಾದ್ ಅವರು ಸಹ ಇರಲಿದ್ದು, ಅತೃಪ್ತರ ಮನವೊಲಿಕೆಗೆ ಯತ್ನ ಮಾಡಲಿದ್ದಾರೆ.

ದೇವೇಗೌಡ, ಕುಮಾರಸ್ವಾಮಿ ಜೊತೆ ಚರ್ಚೆ
ಅತೃಪ್ತರ ಜೊತೆ ಮಾತನಾಡಿದ ನಂತರ, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೊಂದಿಗೆ ಸಹ ಗುಲಾಂ ನಬಿ ಆಜಾದ್ ಮತ್ತು ಕಪಿಲ್ ಸಿಬಲ್ ಅವರು ಮಾತುಕತೆ ನಡೆಸಲಿದ್ದಾರೆ. ಇವರೊಂದಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಸಹ ಇರಲಿದ್ದಾರೆ.

ಕೆ.ಸಿ.ವೇಣುಗೋಪಾಲ್ ರಾಜ್ಯದಲ್ಲಿಯೇ ಇದ್ದಾರೆ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಈಗಾಗಲೇ ಕೆಲವು ದಿನಗಳಿಂದ ರಾಜ್ಯದಲ್ಲಿ ಬೀಡುಬಿಟ್ಟಿದ್ದಾರೆ. ಲಂಡನ್ ಪ್ರವಾಸಕ್ಕೆ ತೆರಳಿದ್ದ ದಿನೇಶ್ ಗುಂಡೂರಾವ್ ಅವರು ಸಹ ವಾಪಸ್ ಬಂದಿದ್ದು, ಸರ್ಕಾರವನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನ ನಡೆದಿದೆ.












Click it and Unblock the Notifications