Bengaluru Property: ಬೆಂಗಳೂರಿನ ಆಸ್ತಿದಾರರಿಗೆ ಜಿಬಿಎ ಶಾಕ್: ಆಸ್ತಿ ತೆರಿಗೆ ವಿಚಾರದಲ್ಲಿ ಜಿಬಿಎ ಕಮೀಷನರ್ ಖಡಕ್ ವಾರ್ನಿಂಗ್
Bengaluru Property: ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಶಾಕ್ ನೀಡುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮುಂದಾಗಿದ್ದಾರೆ. ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳನ್ನು ಪಟ್ಟಿ ಮಾಡಿ ಆಸ್ತಿ ತೆರಿಗೆ ವಸೂಲಿ ಮಾಡುವುದಕ್ಕೆ ಬೆಂಗಳೂರು ಆಡಳಿತ ಮುಂದಾಗಿದೆ.
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳನ್ನು ಪಟ್ಟಿ ಮಾಡಿ ಆಸ್ತಿ ತೆರಿಗೆ ವಸೂಲಿ ಮಾಡಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಬಿಎ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ, ಇ-ಖಾತಾ, ಬಿ ಖಾತಾಯಿಂದ ಎ-ಖಾತಾಗೆ ಪರಿವರ್ತನೆ ಮಾಡುವ ಕುರಿತು ಸೋಮವಾರ (ನವೆಂಬರ್ 24) ನಡೆದ ವರ್ಚ್ಯುವಲ್ ಸಭೆಯಲ್ಲಿ ಅವರು ಈ ಸೂಚನೆಗಳನ್ನು ನೀಡಿದ್ದಾರೆ. ಆಯಾ ನಗರ ಪಾಲಿಕೆಗಳಲ್ಲಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು, ಆಸ್ತಿ ತೆರಿಗೆ ಪರಿಷ್ಕರಣೆ ಪ್ರಕರಣಗಳನ್ನು ಪತ್ತೆ ಹಚ್ಚಿ ಅದರಿಂದ ಬಾಕಿ ಬರಬೇಕಿರುವ ಆಸ್ತಿ ತೆರಿಗೆಯನ್ನು ವಸೂಲಿ ಮಾಡಲು ಸೂಚನೆ ನೀಡಿದ್ದಾರೆ.

ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದವರನ್ನು ಹುಡುಕಿ, ಅವರನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವ ಕೆಲಸ ಮಾಡಬೇಕು. ಆಯಾ ನಗರ ಪಾಲಿಕೆಗಳ ಆಯುಕ್ತರುಗಳು ಆಸ್ತಿ ತೆರಿಗೆ ಸಂಗ್ರಹಿಸುವ ಸಲುವಾಗಿ ಹೆಚ್ಚು ಗಮನ ನೀಡಬೇಕು. ಈ ಸಂಬಂಧ ಪ್ರತಿನಿತ್ಯ ಕಂದಾಯ ಅಧಿಕಾರಿಗಳ ಜೊತೆ ಪರಿಶೀಲನೆ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಿ, ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಲು ಕ್ರಮವಹಿಸಲು ತಿಳಿಸಲಾಗಿದೆ.
ಇನ್ನು ಆಯಾ ನಗರ ಪಾಲಿಕೆಗಳಲ್ಲಿ ವಿಭಾಗವಾರು 100 ಪರಿಷ್ಕರಣೆ ಪ್ರಕರಣಗಳು, 100 ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರನ್ನು ಪಟ್ಟಿ ಮಾಡಿಕೊಂಡು, ಕಂದಾಯ ಪರಿವೀಕ್ಷಕರು/ಕಂದಾಯ ವಸೂಲಿಗಾರರಿಗೆ ನಿಗದಿತ ಗುರಿ ನೀಡಿ ವಾಣಿಜ್ಯ ಸ್ವತ್ತುಗಳನ್ನು ಸೀಲ್ ಮಾಡಿ ಬಾಕಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡಬೇಕೆಂದು ಹೇಳಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಖಾತಾಗಳನ್ನು ಪಡೆಯಲು ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಅವುಗಳಿಗೆ ಕೂಡಲೆ ಖಾತೆ ನೀಡುವ ಕಾರ್ಯವಾಗಬೇಕು. ಇದರಿಂದ ಪಾಲಿಕೆಗೆ ಹೆಚ್ಚು ಆದಾಯ ಬರಲಿದೆ. ಅದಲ್ಲದೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆಗೆ ಬಂದಿರುವಂತಹ ಅರ್ಜಿಗಳನ್ನು ಪರಿಶೀಲಿಸಿ ಕಾಲಮಿತಿಯೊಳಗಾಗಿ ಎ-ಖಾತಾ ನೀಡುವ ಕೆಲಸ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರಾದ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್, ರಮೇಶ್ ಕೆ.ಎನ್, ಡಾ. ರಾಜೇಂದ್ರ ಕೆ.ವಿ, ಕಂದಾಯ ವಿಭಾಗದ ಅಪರ ಆಯುಕ್ತರು, ಜಂಟಿ ಆಯುಕ್ತರು, ಎನ್.ಐಸಿಯ ತಾಂತ್ರಿಕ ನಿರ್ದೇಶಕರು ಸೇರಿದಂತೆ ಹಲವರು ಇದ್ದರು.












Click it and Unblock the Notifications