KR Market: ಕೆ.ಆರ್. ಮಾರುಕಟ್ಟೆ ಸ್ವಚ್ಛತೆಗೆ ಮಾಸ್ಟರ್ ಪ್ಲಾನ್, ಬಾಡಿಗೆ ನೀಡದವರಿಗೆ GBA ಶಾಕ್
ಬೆಂಗಳೂರು, ಸೆಪ್ಟಂಬರ್ 20: ಸದಾ ಜನರಿಂದ ಮತ್ತು ವ್ಯಾಪಾರಿಗಳಿಂದ ತುಂಬಿ ತುಳುಕುವ ನಗರದ ಹೃದಯಭಾಗದಲ್ಲಿರುವ ಕೆ.ಆರ್. ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಾಸ್ಟರ್ ಪ್ಲಾನ್ ಮಾಡಿದೆ. ಬಾಡಿಗೆ ಪಾವತಿಸದ ಮಳಿಗೆಗಳಿಂದ ಬಾಕಿ ಹಣ ವಸೂಲಿ ಮಾಡಲು ಮುಂದಾಗಿದೆ. ಇದರ ಸ್ವಚ್ಚತಾ ಯೋಜನೆಗೆ ಪ್ಲಾನ್ ತಯಾರಿಸಲು ಅಧಿಕಾರಿಗಳು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ನಗರದ ಕೆ.ಆರ್. ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಕೆ.ಆರ್ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಸುಮಾರ 70 ಟನ್ ತ್ಯಾಜ್ಯ ಉತ್ಪತ್ತಿ ಆಗುತ್ತಿದೆ. ಅದನ್ನು ಪರಿಣಾಮಕಾರಿ ಹಾಗೂ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡಲು ಮಾಸ್ಟರ್ ಪ್ಲಾನ್ ತಯಾರಿಸಲು ಸೂಚನೆ ನೀಡಲಾಯಿತು.

ಕೆ.ಆರ್. ಮಾರ್ಕೆಟ್: ಬಾಡಿಗೆ ಕಟ್ಟದವರಿಗೆ ಜಿಬಿಎ ಶಾಕ್
ಮಾರುಕಟ್ಟೆ ವ್ಯಾಪ್ತಿಯಲ್ಲಿ ಒಟ್ಟು ಎಷ್ಟು ಮಳಿಗೆಗಳಿವೆ, ಬಾಡಿಗೆ ಬಾಕಿ ಉಳಿಸಿಕೊಂಡಿರುವ ಮಳಿಗೆಗಳಿಂದ ವಸೂಲಿ ಮಾಡುವ ಸಲುವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ನೆಲ ಮಹಡಿಯಲ್ಲಿ 529, ಮೊದಲನೇ ಮಹಡಿಯಲ್ಲಿ 494 ಹಾಗೂ ಎರಡನೇ ಮಹಡಿಯಲ್ಲಿ 265 ಸೇರಿದಂತೆ ಒಟ್ಟು 1,288 ಮಳಿಗೆಗಳಿವೆ. ಬಾಡಿಗೆ ಪಾವತಿಸುವ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಪ್ರಕರಣವನ್ನು ತ್ವರತವಾಗಿ ಇತ್ಯರ್ಥಪಡಿಸಿಕೊಂಡು ಪಾಲಿಕೆಗೆ ಮಳಿಗೆಗಳಿಂದ ಬರಬೇಕಿರುವ ಬಾಕಿ ಹಣವನ್ನು ವಸೂಲಿ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಾರುಕಟ್ಟೆಯಲ್ಲಿ ದಿನದ 24 ಗಂಟೆಯೂ ಸ್ವಚ್ಛತೆ ಮಾಡುತ್ತಿರುಬೇಕು. ಪ್ರತಿಯೊಂದು ಮಳಿಗೆಯೂ ಕಡ್ಡಾಯವಾಗಿ ತ್ಯಾಜ್ಯ ಹಾಕಲು ಬಿನ್ ಗಳನ್ನು ಇಟ್ಟುಕೊಳ್ಳಬೇಕು. ಮಾರ್ಷಲ್ ಗಳು ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವವರಿಗೆ ದಂಡ ವಿಧಿಸಿ, ನಿಗದಿತ ಸ್ಥಳದಲ್ಲಿಯೇ ತ್ಯಾಜ್ಯ ಹಾಕಲು ಜಾಗೃತಿ ಮೂಡಿಸಬೇಕು.

ಅತಿಕ್ರಮಣದಾರರಿಗೆ ದಂಡ ಹೇರಿಕೆ
ಇಲ್ಲಿನ ಮಳಿಗೆಗಳಿಗೆ ನೀಡಿರುವ ಜಾಗದಲ್ಲಿ ಮಾತ್ರ ವ್ಯಾಪಾರ ಮಾಡಬೇಕು. ಅದಕ್ಕಿಂದ ಹೆಚ್ಚುವರಿ ಜಾಗ ಅತಿಕ್ರಮಣ ಮಾಡಿಕೊಂಡು ಮಾರಾಟ ಮಾಡುವ ಮಳಿಗೆಗಳಿಗೆ ಕೂಡಲೇ ದಂಡ ವಿಧಿಸಿ ಅತಿಕ್ರಮಣವನ್ನು ತೆರವುಗೊಳಿಸಬೇಕು. ಮತ್ತೆ ಅತಿಕ್ರಮಣ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಮೂಲಭೂತ ಸಮಸ್ಯೆ ಪರಿಹರಿಸಿ
ಮಾರುಕಟ್ಟೆ ಆವಣದಲ್ಲಿರುವ ಮೆಟ್ಟಿಲುಗಳ ಬಳಿ ಗ್ರಾನೈಟ್ ಹಾಳಾಗಿದ್ದು, ಅದರಿಂದ ಗ್ರಾಹಕರಿಗೆ ಸಮಸ್ಯೆ ಆಗಲಿದೆ. ಆದ್ದರಿಂದ ಕೂಡಲೆ ಎಲ್ಲೆಲ್ಲಿ ಹಾಳಾಗಿದೆ ಎಂಬುದನ್ನು ಪರಿಶೀಲನೆ ಮಾಡಿ ಅಗತ್ಯ ದುರಸ್ತಿ ಕಾರ್ಯವನ್ನು ನಡೆಸಬೇಕು. ಜೊತೆಗೆ ರೂಫ್ ಶೀಟ್ ಹಾಳಾಗಿರುವುದರಿಂದ ನೀರು ಸುರಿಯುವುತ್ತಿದ್ದು, ಇದರಿಂದ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಅದನ್ನು ದುರಸ್ಥಿಗೊಳಿಸಬೇಕು. ಮಳೆ ನೀರು ನಿಲ್ಲುವ ಕಡೆ ನೀರು ನಿಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆಯುಕ್ತರು ನಿರ್ದೇಶಿಸಿದರು.
ಕೆ.ಆರ್. ಮಾರುಕಟ್ಟೆಯ 1ನೇ ಮಹಡಿಯಲ್ಲಿರುವ ಶೌಚಾಲಯ ಬಳಕೆಯಾಗದೇ ಗಲೀಜಾಗಿವೆ. ಜೊತೆಗೆ ಬೀಗ ಹಾಕಿರುವುದನ್ನು ಗಮನಿಸಿದ ಮುಖ್ಯ ಆಯುಕ್ತರು, ಅದನ್ನು ಇಂದು ಸಂಜೆಯೊಳಗೆ ಸ್ವಚ್ಛಗೊಳಿಸಿ, ನಾಗರಿಕರ ಬಳಕೆಗೆ ಅನುವು ಮಾಡಿಕೊಬೇಕು.
ಮಾರುಕಟ್ಟೆಯಲ್ಲಿರುವ ಮತ್ತೊಂದು ಶೌಚಾಲಯ ಸರಿಯಾಗಿ ನಿರ್ವಹಣೆ ಮಾಡದೇ ಸಾರ್ವಜನಿಕರ ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದು, ಇದಕ್ಕೆ ಪರ್ಯಾಯವಾಗಿ ಪಕ್ಕದದಲ್ಲಿನ ಖಾಲಿ ಸ್ಥಳದಲ್ಲಿದ್ದು ಇನ್ನೊಂದು ಶೌಚಾಲಯ ನಿರ್ಮಿಸಲು ಸೂಚಿಸಿದರು. ಹೊಸದಾಗಿ ಶೌಚಾಲಯ ನಿರ್ಮಿಸುವವರೆಗೆ ಇರುವ ಶೌಚಾಲಯವನ್ನು ಸರಿಯಾಗಿ ನಿರ್ವಹಣೆ ಮಾಡಬೇಕೆಂದರು.
ಅನಧಿಕೃತ ವಸ್ತುಗಳ ತೆರವು
ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಎರಡನೇ ಮಹಡಿಯಲ್ಲಿ ಅನಧಿಕೃತವಾಗಿ ವಸ್ತುಗಳನ್ನು ಹಾಕಿರುವುದನ್ನು ನೋಡಿ ಕೂಡಲೇ ಅದನ್ನು ತೆರವುಗೊಳಿಸಬೇಕು. ತ್ಯಾಜ್ಯ ಹಾಕುವ ಸ್ಥಳದಲ್ಲಿ ಖಾಲಿ ಇರುವ ಜಾಗದ ಬಗ್ಗೆ ಪರಿಶೀಲಿಸಿ, ಆ ಜಾಗವನ್ನು ಬಳಸಿಕೊಳ್ಳಬೇಕು.ಇನ್ನೂ ಮಾರುಕಟ್ಟೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಲ್ಲಿ ಸಮನ್ವಯತೆ ಇಲ್ಲದಿರುವುದನ್ನು ಗಮನಿಸಿದ ಅವರು ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ. ಎಲ್ಲಾ ವಿಭಾಗದ ಆಧಿಕಾರಿಗಳು ಮಾರುಕಟ್ಟೆಯ ಸ್ವಚ್ಛತೆಗಾಗಿ ಸಮನ್ವಯದೊಂದಿಗೆ ಕೆಲಸ ಮಾಡುವಂತೆ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದರು.












Click it and Unblock the Notifications