ORR: ಬೆಂಗಳೂರು ಹೊರವರ್ತುಲ ರಸ್ತೆ ಸುಧಾರಣೆಗೆ GBA ಆದ್ಯತೆ: ಸವಾರರು ಗಮನಿಸಿ
ಬೆಂಗಳೂರು, ಅಕ್ಟೋಬರ್ 13: ರಸ್ತೆಗುಂಡಿ ಮುಚ್ಚುತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಒತ್ತುವರಿ ತೆರವು, ರಸ್ತೆ ಸುಸ್ಥಿತಿಯಲ್ಲಿಡುವುದು, ಪಾದಾಚಾರಿ ಮಾರ್ಗ ಸುಧಾರಣೆ ಕೆಲಸ ಮಾಡುತ್ತಿದೆ. ಇದೀಗ ನಗರದ ಹೊರ ವರ್ತುಲ ರಸ್ತೆ ಮೇಲೆ ಕಾಳಜಿ ವಹಿಸಿರುವ GBA ಸೂಕ್ತ ರೀತಿಯ ಕ್ರಮ ಕೈಗೊಳ್ಳುವಂತೆ, ದಟ್ಟಣೆಗೆ ಅವಕಾಶ ನೀಡದಂತೆ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಸೂಚಿಸಿದ್ದಾರೆ.
ಹೊರ ವರ್ತುಲ ರಸ್ತೆಯಲ್ಲಿ ಓಡಾಡುವವರಿಗೆ ಇದೊಂದು ಗುಡ್ ನ್ಯೂಸ್ ಅಂತಲೇ ಹೇಳಬಹುದು. ಹೆಬ್ಬಾಳ ಜಂಕ್ಷನ್‌ನಿಂದ ನಾಯಂಡಹಳ್ಳಿ ಜಂಕ್ಷನ್‌ವರೆಗಿನ ಹೊರ ವರ್ತುಲ ರಸ್ತೆಯನ್ನು ಸುಸ್ಥಿತಿಯಲ್ಲಿಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ಅವರು ನೀಡಿದರು.

ಹೊರ ವರ್ತುಲ ರಸ್ತೆ ಹಾಗೂ ಸರ್ವೀಸ್ ರಸ್ತೆಗಳನ್ನು ಪರಿಶೀಲಿಸುವ ಸಲುವಾಗಿ ಸೋಮವಾರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಹೆಬ್ಬಾಳ ಜಂಕ್ಷನ್ ಕೆಳಭಾಗದಲ್ಲಿ ವೈಟ್ ಮಿಕ್ಸ್ ಹಾಕಲಾಗಿದ್ದು, ತಕ್ಷಣ ಅದಕ್ಕೆ ಡಾಂಬರೀಕರಣ ಮಾಡಬೇಕು. ಜೊತೆಗೆ, ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಹೈ ರೈಸ್ ಪಾದಚಾರಿ ಕ್ರಾಸಿಂಗ್ ನಿರ್ಮಿಸಲು ಸೂಚಿಸಿದರು.
ಹೆಬ್ಬಾಳ ಜಂಕ್ಷನ್‌ನಲ್ಲಿ ಪೊಲೀಸ್ ಠಾಣೆಯ ಬಳಿಕ ಬಸ್ ನಿಲ್ದಾಣಕ್ಕಾಗಿ ಮೀಸಲಾಗಿರುವ ಜಾಗ ಉಪಯೋಗವಾಗದೇ ಇರುವುದನ್ನು ಗಮನಿಸಿ, ಆ ಜಾಗದಲ್ಲಿ ಏನು ಮಾಡುವುದು ಸೂಕ್ತ ಎಂಬುದನ್ನು ಪರಿಶೀಲಿಸಿ, ಅದರ ವಿನ್ಯಾಸ ರೂಪಿಸಿ ಅನುಷ್ಠಾನಕ್ಕೆ ತರಬೇಕು ಎಂದರು.

ಭದ್ರಪ್ಪ ಲೇಔಟ್ ಮೇಲ್ಸೇತುವೆ ಬಳಿಯ ಸರ್ವಿಸ್ ರಸ್ತೆ ಹಾಳಾಗಿದೆ. ಹೈ ಡೆನ್ಸಿಟಿ ಕಾರಿಡಾರ್ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಇದೇ ಸ್ಥಳದಲ್ಲಿ ಕೆ-ರೈಡ್ ವತಿಯಿಂದ ಕಾಮಗಾರಿ ನಡೆಯುತ್ತಿರುವುದರಿಂದ, ಆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಸರ್ವಿಸ್ ರಸ್ತೆಯ ದುರಸ್ಥಿ ಮಾಡಬೇಕು. ಹೊರ ವರ್ತುಲ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ರಸ್ತೆ ಬದಿಯ ಡಕ್ಟ್‌ಗಳ ಚೇಂಬರ್‌ಗಳು ರಸ್ತೆ ಮಟ್ಟಕ್ಕಿಂತ ಕೆಳಗಿರುವುದನ್ನು ಗಮನಿಸಿದರು. ಅವುಗಳನ್ನು ತಕ್ಷಣ ರಸ್ತೆ ಮಟ್ಟಕ್ಕೆ ತೆರವುಗೊಳಿಸಬೇಕು. ಪಾದಚಾರಿ ಮಾರ್ಗಗಳನ್ನು ಸ್ವಚ್ಛವಾಗಿಡಲು ಹಾಗೂ ನಿರಂತರ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು.
ಹೊರ ವರ್ತುಲ ರಸ್ತೆಯ ಶ್ರೀನಿವಾಸನಗರ (80 ಅಡಿ ರಸ್ತೆ)ದ ಮುತ್ತುರಾಜ್ ರಸ್ತೆಯಿಂದ ವಿದ್ಯಾಪೀಠ ವೃತ್ತದವರೆಗೆ 1.8 ಕಿ.ಮೀ ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 1 ಕಿ.ಮೀ ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಪಾದಚಾರಿ ಮಾರ್ಗ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಉಳಿದ ಭಾಗವನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು. ಕಾಮಗಾರಿ ಪೂರ್ಣಗೊಳ್ಳುವವರೆಗೆ ರಸ್ತೆ ಗುಂಡಿಗಳಿಲ್ಲದಂತೆ ಸುಸ್ಥಿತಿಯಲ್ಲಿ ಇಟ್ಟು ಕಾಯ ನಿರ್ವಹಿಸಲು ಗುತ್ತಿಗೆದಾರರಿಗೆ ಹೇಳಿದರು.
ಬಿಇಎಲ್ ಜಂಕ್ಷನ್ ಅಭಿವೃದ್ಧಿ: ವೈಟ್ ಟಾಪಿಂಗ್
ಬಿಇಎಲ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಬಿಇಎಲ್ ಜಂಕ್ಷನ್‌ನಲ್ಲಿ ರಸ್ತೆ ಮೇಲ್ಮೈ ಹಾಳಾಗಿರುವುದನ್ನು ವೈಟ್ ಟಾಪಿಂಗ್ ಗುತ್ತಿಗೆದಾರರಿಂದಲೇ ಮುಚ್ಚಿಸಬೇಕು. ಇದೇ ಜಂಕ್ಷನ್‌ನಲ್ಲಿ ಮತ್ತಿಕೆರೆ ಕಡೆಗೆ ಹೋಗುವ ಭಾಗದಲ್ಲಿ ಪಾದಚಾರಿ ಮಾರ್ಗವನ್ನು ಅಗಲೀಕರಣ ಮಾಡಬೇಕು. ಹೊರ ವರ್ತುಲ ರಸ್ತೆಯಲ್ಲಿರುವ ಎಲ್ಲ ಗುಂಡಿಗಳನ್ನು ತಕ್ಷಣ ಮುಚ್ಚಬೇಕು. ರಾಜ್ ಕುಮಾರ್ ಸಮಾಧಿಯಿಂದ ನಾಗರಭಾವಿ ಜಂಕ್ಷನ್‌ವರೆಗಿನ ಸರ್ವಿಸ್ ರಸ್ತೆಗಳಲ್ಲಿರುವ ಗುಂಡಿಗಳನ್ನು ಮತ್ತು ಹಾಳಾದ ಮೇಲ್ಮೈಯನ್ನು ಸರಿಪಡಿಸಬೇಕು. ಗೊರಗುಂಟೆ ಪಾಳ್ಯ ಕೈಗಾರಿಕಾ ಪ್ರದೇಶದ ಕಡೆಗಿನ ಹಾಳಾದ ರಸ್ತೆಯನ್ನು ಶೀಘ್ರವೇ ದುರಸ್ತಿಗೊಳಿಸಬೇಕು ಎಂದು ಸೂಚಿಸಿದರು.
ರಸ್ತೆ ಬದಿ ಕಸ ಹಾಕದಂತೆ ನಿಯಂತ್ರಿಸಿ
ಹೊರ ವರ್ತುಲ ರಸ್ತೆ ಬದಿಗಳಲ್ಲಿ ಕೆಲವು ಕಡೆ ಕಸ ಬಿಸಾಡಲಾಗಿದೆ. ಹೀಗಾಗದಂತೆ ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ಸರ್ವಿಸ್ ರಸ್ತೆಗಳಲ್ಲಿಯೂ ಕಸ ಬಿಸಾಡಿರುವುದನ್ನು ಕಂಡು ಬ್ಲಾಕ್ ಸ್ಪಾಟ್‌ಗಳನ್ನು ನಿರ್ಮೂಲನೆಗೊಳಿಸಿ. ಪಾದಾಚಾರಿ ಒತ್ತುವರಿ ಆಗದಂತೆ ನೋಡಿಕೊಳ್ಳಿ. ಇನ್ನೂ ಕಂಠೀರವ ಸ್ಟುಡಿಯೋ ಜಂಕ್ಷನ್ ಬಳಿ ಜಲಮಂಡಳಿಯ ಕಾಮಗಾರಿ ನಡೆಯುತ್ತಿದೆ. ಒಳಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಜಲಮಂಡಳಿಗೆ ಕರೆ ಮಾಡಿ ಕಾಮಗಾರಿ ತ್ವರಿತ ಪೂರ್ಣಗೊಳಿಸಲು ತಿಳಿಸಿದರು.
ಕಸ ವರ್ಗಾವಣೆ ಘಟಕ ಸ್ಥಳಾಂತರ
ಸುಮ್ಮನಹಳ್ಳಿ ಜಂಕ್ಷನ್ ಮೇಲ್ಸೇತುವೆ ಕೆಳಭಾಗದಲ್ಲಿ ಇರುವ ಕಸ ವರ್ಗಾವಣೆ ಘಟಕದಲ್ಲಿ ಸ್ವಚ್ಛತೆ ಕಾಪಾಡಲಾಗುತ್ತಿಲ್ಲ. ಜೊತೆಗೆ ಲೀಚೇಟ್‌ನಿಂದ ದುರ್ವಾಸನೆ ಉಂಟಾಗಿದೆ. ಜೆಟ್ ಸ್ಪ್ರೇಯರ್ ಮೂಲಕ ಸ್ವಚ್ಛಗೊಳಿಸಬೇಕು. ರಾಜಕಾಲುವೆ ಪಕ್ಕದ ಖಾಲಿ ಜಾಗದಲ್ಲಿ ಕಸ ವರ್ಗಾವಣೆಯ ಪರ್ಯಾಯ ವ್ಯವಸ್ಥೆ ಮಾಡಬೇಕು.












Click it and Unblock the Notifications