ಗೌರಿ ಲಂಕೇಶ್ ಹತ್ಯೆ: ಸನಾತನ ಸಂಸ್ಥೆಯ ಐವರ ವಿಚಾರಣೆ
ಬೆಂಗಳೂರು, ಅಕ್ಟೋಬರ್ 07 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಿಂದೆ ಸನಾತನ ಸಂಸ್ಥೆಗೆ ಸೇರಿದ ಐವರ ಕೈವಾಡವಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಕೊಲ್ಹಾಪುರದ ಪ್ರಮೀಣ್ ಲಿಮ್ಕರ್, ಮಂಗಳೂರಿನ ಜಯಪ್ರಕಾಶ್ ಅಲಿಯಾಸ್ ಅಣ್ಣ, ಪುಣೆ ಮೂಲದ ಸಾರಂಗ್ ಅಕೋಲ್ಕರ್, ಸಾಂಗ್ಲಿಯ ರುದ್ರ ಪ್ರವಾರ್ ಹಾಗೂ ಸತಾರಾದ ವಿನಯ್ ಪವಾರ್ ಹೆಸರು ಕೇಳಿ ಬಂದಿದೆ. ಸೆಪ್ಟೆಂಬರ್ 5ರಂದು ನಡೆದ ಗೌರಿ ಲಂಕೇಶ್ ಹತ್ಯೆಯ ಹಿಂದೆ ಇವರೇ ಇರಬಹುದು ಎಂದು ಶಂಕಿಸಲಾಗಿದೆ

ಗೋವಾದ ಮಡಗಾಂವ್ ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈ ಐವರ ಹೆಸರು ಕೇಳಿ ಬಂದಿತ್ತು. ಗೌರಿ ಲಂಕೇಶ್ ಹತ್ಯೆಗೆ ಸಂಬಂಧಪಟ್ಟಂತೆ ಎಸ್ ಐಟಿ ತಂಡ ಈ ಐವರನ್ನ ತನಿಖೆ ನಡೆಸುತ್ತಿದೆ.
ವಿಚಾರವಾದಿ ನರೇಂದ್ರ ಧಾಬೋಲ್ಕರ್ ಹತ್ಯೆ ಪ್ರಕರಣದಲ್ಲೂ ಸಾರಂಗ್ ಅಕೋಲ್ಕರ್ , ರುದ್ರ ಪಾಟೀಲ್ ಹಾಗೂ ವಿನಯ್ ಪವಾರ್ ಈ ಮೂವರನ್ನು ತನಿಖೆಗೆ ಒಳಪಡಿಸಲಾಗಿತ್ತು.
ಎಂ.ಎಂ.ಕಲ್ಬುರ್ಗಿ ಮತ್ತು ಗೋವಿಂದ್ ಪನ್ಸರೆ ಹತ್ಯೆ ತನಿಖೆ ವೇಳೆ ಸಹ ಇವರ ಹೆಸರು ಕೇಳಿ ಬಂದಿತ್ತು. ಎಂ.ಎಂ.ಕಲ್ಬುರ್ಗಿ ಹಾಗೂ ಗೌರಿ ಹತ್ಯೆಗೆ ಬಳಸಿದ ಬುಲೆಟ್ ಒಂದೇ ತರವಾಗಿವೆ ಎಂದು ಹೇಳಲಾಗುತ್ತಿದೆ.












Click it and Unblock the Notifications