ಬೆಂಗಳೂರು; ವಾರಾಂತ್ಯ ಕಸ ಸಂಗ್ರಹ ಸ್ಥಗಿತ, ಪ್ರತಿಭಟನೆ
ಬೆಂಗಳೂರು, ಫೆಬ್ರವರಿ 18; ಬೆಂಗಳೂರು ನಗರದಲ್ಲಿ ಕಸ ಸಂಗ್ರಹ ಮಾಡುವ ಸುಮಾರು 10 ಸಾವಿರ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ಶುಕ್ರವಾರದಿಂದ ಸೋಮವಾರದ ತನಕ ಕಸ ಸಂಗ್ರಹ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಿದ್ದಾರೆ.
ವೇತನ ಪಾವತಿಯಾಗದ ಕಾರಣ ಕಸ ಸಂಗ್ರಹ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ. ಇದರಿಂದಾಗಿ ನಗರದಲ್ಲಿ ಕಸದ ರಾಶಿಯೇ ಕಾಣುವ ಸಾಧ್ಯತೆ ಇದೆ. ಒಂದು ದಿನ ನಗರದಲ್ಲಿ ಸುಮಾರು 4 ಮೆಟ್ರಿಕ್ ಟನ್ ಕಸ ಸಂಗ್ರಹವಾಗುತ್ತದೆ.
ಬಿಬಿಎಂಪಿ ಕಸ ಸಂಗ್ರಹಣೆ ಅಸೋಶಿಯೇಷನ್ ಈ ಪ್ರತಿಭಟನೆಗೆ ಕರೆ ನೀಡಿದೆ. ಕಳೆದ 6 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಶುಕ್ರವಾರದಿಂದ ಸೋಮವಾರದ ತನಕ ಕಸ ಸಂಗ್ರಹ ಸಂಪೂರ್ಣ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಕಸ ಸಂಗ್ರಹ ಮಾಡುವವರ ಸಂಘದ ಅಧ್ಯಕ್ಷ ಎಸ್. ಎನ್. ಬಾಲಸುಬ್ರಮಣ್ಯ ಈ ಕುರಿತು ಮಾಹಿತಿ ನೀಡಿದರು, "10 ಸಾವಿರ ಎರಡನೇ ದರ್ಜೆಯ ಕಸ ಸಂಗ್ರಹಕಾರರು ಇದ್ದಾರೆ. ಒಂದು ವಾರ್ಡ್‌ಗೆ ಸುಮಾರು 60 ಜನರಿದ್ದಾರೆ. ಅವರಿಗೆ 14 ಸಾವಿರ ರೂ. ವೇತನ ನೀಡಲಾಗುತ್ತಿದೆ" ಎಂದರು.
"ನಮ್ಮ ಕೆಲಸ ಬಹಳ ಸವಾಲಿನದ್ದು ಗಾಜಿನ ಚೂರುಗಳು, ವೈದ್ಯಕೀಯ ತ್ಯಾಜ್ಯ, ಕಬ್ಬಿಣದ ವಸ್ತುಗಳು, ಹಸಿ ಕಸವನ್ನು ನಾವು ಸಂಗ್ರಹ ಮಾಡುತ್ತೇವೆ. ಆದರೆ ವೇತನ ಪಾವತಿ ವಿಚಾರದಲ್ಲಿ ಮಾತ್ರ ಸರಿಯಾದ ಕ್ರಮ ಕೈಗೊಂಡಿಲ್ಲ" ಎಂದು ದೂರಿದ್ದಾರೆ.
ಎರಡು ವರ್ಷದಲ್ಲಿ ನಾಲ್ಕನೇ ಬಾರಿಗೆ ಕಸ ಸಂಗ್ರಹ ಮಾಡುವವರ ವೇತನ ಸರಿಯಾಗಿ ಪಾವತಿಯಾಗಿಲ್ಲ. ವೇತನಕ್ಕಾಗಿ ಅನುದಾನವನ್ನು ಬಿಬಿಎಂಪಿ ಬಿಡುಗಡೆ ಮಾಡಿಲ್ಲ. ಕೋವಿಡ್ ಸಂದರ್ಭದಲ್ಲಿ ನಮ್ಮ ಜೀವವನ್ನು ಒತ್ತೆಯಿಟ್ಟು ಕಸ ಸಂಗ್ರಹ ಮಾಡಿದ್ದೇವೆ ಎಂದು ಪೌರ ಕಾರ್ಮಿಕರು ಹೇಳಿದ್ದಾರೆ.
ಪ್ರತಿಬಾರಿ ನಾವು ಪ್ರತಿಭಟನೆ ನಡೆಸುವುದಾಗಿ ಹೇಳಿದಾಗ ಬಿಬಿಎಂಪಿ ಅಧಿಕಾರಿಗಳು ಹಣ ಬಿಡುಗಡೆ ಮಾಡುವ ಭರವಸೆ ನೀಡುತ್ತಾರೆ. ಆದ್ದರಿಂದ ಎರಡು ಬಾರಿ ಪ್ರತಿಭಟನೆ ವಾಪಸ್ ಪಡೆದಿದ್ದೇವೆ. ಆದರೆ ಈ ಬಾರಿ ನಾವು ಶುಕ್ರವಾರದಿಂದ ಸೋಮವಾರದ ತನಕ ಪ್ರತಿಭಟನೆ ನಡೆಸುತ್ತೇವೆ ಎಂದು ಕಾರ್ಮಿಕರು ತಿಳಿಸಿದ್ದಾರೆ.
ಪೌರ ಕಾರ್ಮಿಕರು, ಕಸ ಸಂಗ್ರಹ ಗುತ್ತಿಗೆ ಪಡೆದಿರುವವರು ಬಿಬಿಎಂಪಿ ವಿಶೇಷ ಆಯುಕ್ತೆ (ಹಣಕಾಸು) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಕಸ ಸಂಗ್ರಹ ಮಾಡುವವರಿಗೆ ಆಯುಕ್ತರೇ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಲಾಗಿದೆ.
ಈ ಬಾರಿಯ ಹಣಕಾಸು ವರ್ಷದಲ್ಲಿ ಕಸ ಸಂಗ್ರಹ ಮಾಡಲು 626 ಕೋಟಿ ನೀಡಬೇಕಿದೆ. ಆದರೆ ಸೆಪ್ಟೆಂಬರ್ ಬಳಿಕ ಅನುದಾನ ಬಿಡುಗಡೆಯೇ ಆಗಿಲ್ಲ ಎಂದು ಕಸ ಸಂಗ್ರಹ ಗುತ್ತಿಗೆ ಮಾಡುವವರು ಆರೋಪಿಸಿದ್ದಾರೆ.
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಈ ಬಗ್ಗೆ ನಮಗೆ ಮಾಹಿತಿ ಇದೆ. ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಲಾಗಿದೆ" ಎಂದು ಹೇಳಿದ್ದಾರೆ.
ಕಸ ಸಂಗ್ರಹ ಮಾಡುವ ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ ಮಾಡಲಾಗಿದೆ. ಜಿಪಿಎಸ್ ಟ್ರಾಕ್ ಸರಿ ಇಲ್ಲದ ವಾಹನಗಳಿಗೆ ವೇತನ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಗೊಂದಲ ಉಂಟಾಗಿದ್ದು, ಕಾರ್ಮಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೇ ಎರಡು ವರ್ಷಗಳು ಕಳೆದಿವೆ. ಪಾಲಿಕೆಯ ಆಡಳಿತವನ್ನು ಅಧಿಕಾರಿಗಳೇ ನೋಡಿಕೊಳ್ಳುತ್ತಿದ್ದಾರೆ. ಆದರೆ ಈಗ ಅಧಿಕಾರಿಗಳ ವಿರುದ್ಧವೇ ಪ್ರತಿಭಟನೆ ನಡೆಸಲಾಗುತ್ತಿದೆ.
ಶುಕ್ರವಾರ, ಶನಿವಾರ ಮತ್ತು ಭಾನುವಾರ ಕಸ ಸಂಗ್ರಹ ಮಾಡದಿದ್ದರೆ ನಗರದಲ್ಲಿ ಕಸದ ರಾಶಿಯೇ ಸಂಗ್ರಹವಾಗುವ ನಿರೀಕ್ಷೆ ಇದೆ. ಶುಕ್ರವಾರ ಬೆಳಗ್ಗೆ 10 ಗಂಟೆಯಾದರೂ ಹಲವಾರು ಬಡಾವಣೆಗಳಲ್ಲಿ ಮನೆ ಮನೆ ಕಸ ಸಂಗ್ರಹ ಮಾಡಲು ಆಟೋಗಳು ಆಗಮಿಸಿಲ್ಲ.












Click it and Unblock the Notifications