ಬೆಂಗಳೂರಿನಲ್ಲಿ ಪ.ಬಂಗಾಳದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ನಾಲ್ವರ ಬಂಧನ
ಬೆಂಗಳೂರು, ಮಾರ್ಚ್ 29: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ನಾಲ್ವರನ್ನು ಬಂಧನ ಮಾಡಲಾಗಿದೆ.
ಸಾಮೂಹಿಕ ಆತ್ಯಾಚಾರ ಸಂಬಂಧ ದೆಹಲಿ ಮೂಲದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ಸಂಜಯ ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳಾದ ರಜತ್, ಶಿವರಾಣ್, ದೇವ್ ಸರೋಯಿ ಹಾಗೂ ಯೊಗೇಶ್ ಕುಮಾರ್ ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ದೆಹಲಿ ಮೂಲದವರಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಈಜುಗಾರರಾಗಿ (ಸ್ವಿಮ್ಮರ್ಸ್) ಗುರುತಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆರೋಪಿಗಳ ಪೈಕಿ ರಜತ್ ಡೇಟಿಂಗ್ ಆ್ಯಪ್ ಮೂಲಕ ಯುವತಿಯನ್ನು ಪರಿಚಯಿಸಿಕೊಂಡಿದ್ದ.

ಪರಿಚಯ ಸ್ನೇಹಕ್ಕೆ ತಿರುಗಿದ್ದು, ಇಬ್ಬರು ಮೊಬೈಲ್ ನಂಬರ್ಅನ್ನು ಸಹ ವಿನಿಮಯ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಹೀಗೆ ಇಬ್ಬರ ಮಧ್ಯೆ ಸಲುಗೆ ಹೆಚ್ಚಾದ ಹಿನ್ನೆಲೆ ಇದೇ ತಿಂಗಳು 24ರಂದು ಯುವತಿಯನ್ನು ರಜತ್ ಮನೆಗೆ ಆಹ್ವಾನಿಸಿದ್ದನಂತೆ.
ಆರೋಪಿಯ ಸ್ನೇಹಿತರೆಲ್ಲರೂ ಯುವತಿಯೊಂದಿಗೆ ಪಾರ್ಟಿ ಮಾಡಿದ್ದಾರೆ. ತಡರಾತ್ರಿಯಾಗಿದ್ದ ರಜತ್ ರೂಮಿನಲ್ಲಿ ಯುವತಿ ಉಳಿದುಕೊಂಡಿದ್ದಳು. ಈ ವೇಳೆ ಇಚ್ಛೆಗೆ ವಿರುದ್ಧವಾಗಿ ತನ್ನೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ ಎಂದು ಸಂತ್ರಸ್ತ ಯುವತಿ ದೂರು ನೀಡಿದ್ದಾಳೆ. ಈ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Recommended Video













Click it and Unblock the Notifications