GIMS: ಸೋರುವ ಜಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ನರಕ ದರ್ಶನ, ಬೆಡ್‌ಗಳ ಮೇಲೆ ಮಳೆ ನೀರು..!
ಕರ್ನಾಟಕ ರಾಜ್ಯದಲ್ಲಿ ಒಂದು ಕಡೆ ಎಲ್ಲ ಜಿಲ್ಲಾಸ್ಪತ್ರೆಗಳಿಗೂ ಉತ್ತಮ ಸೌಕರ್ಯ ಒದಗಿಸುತ್ತಿರುವುದಾಗಿ ರಾಜ್ಯ ಸರ್ಕಾರ ಹೇಳುತ್ತದೆ. ಮತ್ತೊಂದೆಡೆ 'ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (GIMS)' ಶಿಥಿಲಗೊಂಡಿದ್ದು, ಬಾನಂಣತಿಯರು, ಶಿಶುಗಳಿಗೆ ಸಮಸ್ಯೆ ಆಗುತ್ತಿದೆ. ರೋಗಿಗಳು, ಸಾರ್ವಜನಿಕರು ಇಲ್ಲಿ ನರಕ ಅನುಭವಿಸುವಂತಾಗಿದೆ. ವಾರ್ಡ್‌ಗಳಲ್ಲಿ ಬೆಡ್‌ಗಳ ಮೇಲೆ ಸಹ ಮಳೆ ನೀರು ನಿಂತಿದೆ.
ಇದೇ ವಿಚಾರವಾಗಿ ಜೆಡಿಎಸ್ ಟ್ವೀಟ್ ಮಾಡಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರಾಜ್ಯ ಆರೋಗ್ಯ ಇಲಾಖೆಯನ್ನು ಹದಗೆಡೆಸಿದ್ದಾರೆ. ಗದಗ ಜಿಲ್ಲೆಯ ಜಿಮ್ಸ್ ಆಸ್ಪತ್ರೆ ಕಟ್ಟಡ ಸಣ್ಣ ಮಳೆಗೆ ಸೋರುತ್ತಿದೆ. ಬಾಣಂತಿಯರು ಹಾಗೂ ನವಜಾತ ಶಿಶುಗಳ ವಾರ್ಡ್‌ನಲ್ಲಿ ಮಳೆ ನೀರು ತುಂಬಿದೆ. ರೋಗಿಗಳು ಈ ಆಸ್ಪತ್ರೆಯಲ್ಲಿ ನಿತ್ಯ ನರಕ ಅನುಭವಿಸುತ್ತಿದ್ದಾರೆ. ಆರೋಗ್ಯ ಸಚಿವರೇ, ಇಲ್ಲಿ ಕನಿಷ್ಠ ಮೂಲಸೌಕರ್ಯ ಕಲ್ಪಿಸುವ ಮೂಲಕ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿಬೇಕು ಎಂದು ಆಗ್ರಹಿಸಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಅದಕ್ಷ ಆಡಳಿತದಲ್ಲಿ ಸರ್ಕಾರಿ ಆಸ್ಪತ್ರೆಗಳು ಅವ್ಯವಸ್ಥೆಯ ಗೂಡಾಗಿವೆ ಎಂದು ಸರ್ಕಾರ ಹಾಗೂ ಆರೋಗ್ಯ ಸಚಿವರನ್ನು ತರಾಟೆಗೆ ತೆಗೆದುಕೊಂಡಿದೆ. ಗದಗ ಆಸ್ಪತ್ರೆ ಕುರಿತು ಮಾಧ್ಯಮಗಳ ವರದಿಯ ವಿಡಿಯೋ ಜೆಡಿಎಸ್ ಶೇರ್ ಮಾಡಿಕೊಂಡಿದೆ.
ಮಾತ್ರವಲ್ಲದೇ ಕೇರಳದಲ್ಲಿ ನೆರೆಹಾನಿಯಾದರೇ ಹತ್ತಾರು ಕೋಟಿ ತಕ್ಷಣವೇ ಬಿಡುಗಡೆ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಮ್ಮ ರಾಜ್ಯದ ಸರ್ಕಾರಿ ಶಾಲೆಗಳ ದುಸ್ಥಿತಿ ಬಗ್ಗೆ ಯಾಕಿಷ್ಟು ತಾತ್ಸರ ಹೊಂದಿದ್ದಾರೆ?. ವಿದ್ಯಾಮಂತ್ರಿ ಮಧು ಬಂಗಾರಪ್ಪ ಅವರೇ ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ? ಎಂದು ಜೆಡಿಎಸ್ ಪ್ರಶ್ನಿಸಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ಗಜಗಿಹಾಳು ಸರ್ಕಾರಿ ಶಾಲೆ ದುಸ್ತಿತಿ ವಿರುದ್ಧ ಕಿಡಿ ಕಾರಿದೆ.
ಆಸ್ಪತ್ರೆ ದುಸ್ತಿತಿ: ಸಾರ್ವಜನಿಕರು ಹೇಳುವುದೇನು?
ಗದಗ ಜಿಲ್ಲೆಯ 'ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (GIMS)' ಕಟ್ಟಡ ಸುಸ್ಥಿತಿಯಲ್ಲಿ ಇಲ್ಲ. ಇಲ್ಲಿನ ಬಾಣಂತಿಯರ ವಾರ್ಡ್‌ಗಳು ಸೇರಿದಂತೆ ಎಲ್ಲ ಕಡೆಗಳಲ್ಲಿ ಮಳೆ ನೀರು ಸೋರುತ್ತದೆ. ಬೆಡ್‌ಗಳ ಮೇಲೆ ಮಳೆ ನೀರು ನಿಂತುಕೊಂಡಿದೆ. ಜಿಮ್ಸ್ ನಲ್ಲಿ ಪರಿಸ್ಥಿತಿ ಹಾಳಾಗಿದೆ. ಮೂಲಸೌಕರ್ಯಕ್ಕೆ ನೀರು ಸಿಗುತ್ತಿಲ್ಲ. ಬಿಸಿ ನೀರು ಬರುತ್ತಿಲ್ಲ. ಸೊಳ್ಳೆಗಳ ಕಾಟ ಇದ್ದೆ. ಸಣ್ಣ ಮಳೆಗೂ ಆಸ್ಪತ್ರೆಗಳಲ್ಲಿ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿ ಬಿಡುತ್ತವೆ ಎಂದು ಬಾಣಂತಿಯ ಜೊತೆ ಬಂದ ಮಹಿಳೆಯೊಬ್ಬರು ಅಲ್ಲಿನ ವಾಸ್ತವ ಸ್ಥಿತಿ ಬಿಚ್ಚಿಟ್ಟಿದ್ದಾರೆ.
ಆಸ್ಪತ್ರೆ ಒಳಗೆ ನಾಯಿಗಳು ಬರುತ್ತವೆ. ಬಾಣಂತಿಯರು, ಶಿಶುಗಳಿಗೆ ನಿತ್ಯ ಸೊಳ್ಳೆ ಕಾಟ ತಪ್ಪಿದ್ದಲ್ಲ. ಇದಕ್ಕೆ ಪರಿಹಾರ ಇಲ್ಲವೆ. ಸಾವಿರಾರು ಜನರು ಇಲ್ಲಿದ್ದಾರೆ. ಯಾರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಲ್ಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ ಎಂದು ಮಾಹಿತಿ ಅಳಲು ತೋಡಿಕೊಂಡಿದ್ದಾರೆ. ಅದನ್ನು ಜೆಡಿಎಸ್ ಶೇರ್ ಮಾಡಿಕೊಂಡು ರಾಜ್ಯ ಸರ್ಕಾರ ಹಾಗೂ ಸಚಿವರ ಆಡಳಿತ ವಿರುದ್ಧ ಆಕ್ರೋಶ ಹೊರ ಹಾಕಿದೆ.












Click it and Unblock the Notifications