ಕೆಂಪೇಗೌಡ ಬಡಾವಣೆ: ಫಲಾನುಭವಿಗಳಿಂದ ನಿವೇಶನ ವಾಪಸ್
ಬೆಂಗಳೂರು, ನವೆಂಬರ್ 13: ಸೆಪ್ಟೆಂಬರ್ ತಿಂಗಳಲ್ಲಿ ಕೆಂಪೇಗೌಡ ಬಡಾವಣೆಯ ಎರಡನೇ ಹಂತದ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು ಆದರೆ ಎರಡೇ ತಿಂಗಳಲ್ಲಿ ನಿವೇಶನ ಫಲಾನುಭವಿಗಳು ನಿವೇಶನ ವಾಪಸ್ ನೀಡಲು ಮುಂದಾಗಿದ್ದಾರೆ.
ಹಂಚಿಕೆ ಪತ್ರ ಪಡೆದವರಲ್ಲಿ ಕೆಲವರು ಬಾಕಿ ಹಣ ಪಾವತಿಗೆ ಹೆಚ್ಚುವರಿ ಸಮಯ ನಿಗದಿ ಮಾಡದಿರುವುದು, ಸೈಟ್ ಮೌಲ್ಯ ಹೆಚ್ಚಳ ಇತ್ಯಾದಿ ಕಾರಣ ನೀಡಿ ನಿವೇಶನ ವಾಪಸ್ ಮಾಡಲು ಮುಂದಾಗಿದ್ದಾರೆ.
20/30 ಅಳತೆಯ ನಿವೇಶನ ಹಂಚಿಕೆ ಪತ್ರವನ್ನು ವಾಪಸ್ ಮಾಡಲು ಕೆಲವು ಫಲಾನುಭವಿಗಳು ಮುಂದಾಗಿದ್ದಾರೆ. ಇದೇ ರೀತಿ ಇನ್ನೂ ಕೆಲವು ಜನರು ನಿವೇಶನವನ್ನು ವಾಪಸ್ ಮಾಡುವ ಕುರಿತು ಮಾತನಾಡಿದ್ದಾರೆ.

ಬಾಕಿ ಹಣ ಪಾವತಿಸಲು 60 ದಿನಗಳು ಮಾತ್ರ ಕಾಲಾವಕಾಶ
ಬಾಕಿ ಹಣ ಪಾವತಿಸಲು 60 ದಿನಕ್ಕಿಂತ ಹೆಚ್ಚಿನ ಅವಧಿ ನಿಗದಿ ಮಾಡದಿರುವುವ ಕುರಿತು ಹಂಚಿಕೆದಾರರಲ್ಲೇ ಬೇಸರ ಮೂಡಿದೆ. ಜತೆಗೆ ಸೈಟು ಮೌಲ್ಯ ಅಧಿಕ ಎಂಬ ಮಾತುಗಳನ್ನು ಕೇಳಿ ಇದೀಗ ನಿವೇಶನ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಬಿಡಿಎ ವಿಲ್ಲಾಗಳಿಗೆ ಭಾರಿ ಬೇಡಿಕೆ
ಡಿಎ ದಾಸನಪುರ ಬಳಿ ನಿರ್ಮಿಸಲಿರುವ 4 ಬಿಎಚ್‌ಕೆ ವಿಲ್ಲಾಗಳಿಗೆ ಈಗಲೇ ಬೇಡಿಕೆ ಆರಂಭವಾಗಿದೆ. ದಾಸನಪುರ ಬಿಡಿಎ ನಿರ್ಮಿಸಲು ಉದ್ದೇಶಿಸಿರುವ 320 ವಿಲ್ಲಾಗಳ ಪೈಕಿ 200 ಕ್ಕೂ ವಿಲ್ಲಾಗಳಿಗೆ ಈಗಲೇ ಭಾರಿ ಬೇಡಿಕೆ ಬಂದಿದೆ.
ಕಳೆದ ಎರಡು ವರ್ಷಗಳಿಂದ ಬಹುತೇಕ ಬಿಡಿಎ ಅಪಾರ್ಟ್ ಮೆಂಟ್‌ಗಳು ಖಾಲಿ ಇವೆ, ರಿಯಾಯ್ತಿಯನ್ನು ಘೋಷಿಸಿದರೂ ಪ್ರಯೋಜನವಾಗುತ್ತಿಲ್ಲ, ಏಕೆಂದರೆ ಮೈಸೂರು ರಸ್ತೆ ಬಳಿ ಇನ್ನಿತರೆ ಕಡೆಗಳಲ್ಲಿ ಬಿಡಿಎ ನಿರ್ಮಿಸಿರುವ ಪ್ಲಾಟ್‌ಗಳು ಕಡಿಮೆ ವಿಸ್ತೀರ್ಣವನ್ನು ಹೊಂದಿದೆ ಎನ್ನುವುದು ಒಂದು ಕಾರಣವಾಗಿದೆ.

ಕಳೆದ ವರ್ಷ 500 ಮಂದಿ ನಿವೇಶನ ಹಿಂದಿರುಗಿಸಿದ್ದರು
ಮೊದಲ ಹಂತದಲ್ಲಿ ಹಂಚಿಕೆ ಪಡೆದಿದ್ದವರ ಪೈಕಿ 500 ಮಂದಿ ನಿವೇಶನವನ್ನು ಹಿಂದಿರುಗಿಸಿದ್ದರು. ಆಗ ಬಹುತೇಕ ಮಂದಿ ಸೈಟು ಮೌಲ್ಯ ಪಾವತಿಸಲು ಹಣದ ಕೊರತೆ ಕಾರಣ ನೀಡಿದ್ದರು. ಈ ಸಮಸ್ಯೆಯನ್ನು ತಡವಾಗಿ ಗ್ರಹಿಸಿದ್ದ ಅಧಿಕಾರಿಗಳು ಬಾಕಿ ಹಣ ಪಾವತಿಗೆ ಗಡುವು ವಿಸ್ತರಿಸಿದ್ದರು.

5 ಸಾವಿರ ಮಂದಿಗೆ ನಿವೇಶನ ನೀಡಲಾಗಿತ್ತು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೆಂಪೇಗೌಡ ಬಡಾವಣೆಯ ಎರಡನೇ ಹಂತದ 4,971 ನಿವೇಶನವನ್ನು ಸಿಎಂ ಗೃಹಕಚೇರಿ ಕೃಷ್ಣದಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹಂಚಿಕೆ ಮಾಡಿದ್ದಾರೆ.
ಪ್ರಸ್ತುತ ಹಂಚಿಕೆ ಮಾಡಿದ ನಿವೇಶನದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.20 ನಷ್ಟು ನಿವೇಶನಕ್ಕೆ ಶೇ.50 ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಈ ಭಾಗದಲ್ಲಿ ಮೂಲಸೌಕರ್ಯಕ್ಕೆ 2770ಕೋಟಿ ರೂ.ನೀಡಲಾಗಿದೆ.












Click it and Unblock the Notifications