ಬೆಂಗಳೂರಿನ ರಸ್ತೆಗೆ ಬಿ. ಎಸ್. ಯಡಿಯೂರಪ್ಪ ಹೆಸರು?
ಬೆಂಗಳೂರು, ಮಾರ್ಚ್ 10: ಉದ್ಯಾನ ನಗರಿ ಬೆಂಗಳೂರಿನ ರಸ್ತೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೆಸರಿಡಲು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡಲು ಯಡಿಯೂರಪ್ಪ ನಿರಾಕರಿಸಿದ್ದರು.
ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಈ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಖಾತೆ ಸಚಿವ ಹೆಚ್. ಕೆ. ಪಾಟೀಲ್‌ಗೆ ಮನವಿ ಮಾಡಿದ್ದಾರೆ.

ಸಚಿವರ ಪತ್ರ: ಮಲ್ಲೇಶ್ವರಂ ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿ. ಎನ್. ಅಶ್ವತ್ಥ ನಾರಾಯಣಗೆ ಸಚಿವ ಹೆಚ್. ಕೆ. ಪಾಟೀಲ್ ಪತ್ರವೊಂದನ್ನು ಬರೆದಿದ್ದರು. ಈ ಪತ್ರಕ್ಕೆ ಉತ್ತರ ನೀಡಿ ಅಶ್ವತ್ಥ ನಾರಾಯಣ ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ.
ಸಚಿವರು ಪತ್ರದಲ್ಲಿ ಕನ್ನಡ ನಾಡು ಕಂಡ ಬಲು ಅಪರೂಪದ ರಾಜಕಾರಣಿ, ಸಹಕಾರಿ ರಂಗದ ಭೀಷ್ಮ ಎಂದೇ ಖ್ಯಾತರಾದ ಕೆ. ಹೆಚ್. ಪಾಟೀಲರು ಕನ್ನಡ ನಾಡಿಗೆ ನೀಡಿದ ಕೊಡುಗೆಗಳನ್ನು ಮನಗಂಡು ಅವರ ಹೆಸರನ್ನು ಅವಿಸ್ಮರಣೀಯಗೊಳಿಸುವ ಉದ್ದೇಶದಿಂದ ಕೆ. ಹೆಚ್. ಪಾಟೀಲ ಅಭಿಮಾನಿ ಬಳಗದವರು ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಸಂ.18, ರಾಧಾಕೃಷ್ಣ ವಾರ್ಡ್‌ನ ಎಂ. ಎಸ್. ರಾಮಯ್ಯ ಸಿಗ್ನಲ್‌ನಿಂದ ಅಶ್ವಥ್ ನಗರದ ರಸ್ತೆಗೆ 'ಸಹಕಾರ ರಂಗದ ಭೀಷ್ಮ ಶ್ರೀ ಕೆ. ಹೆಚ್. ಪಾಟೀಲ್ ರಸ್ತೆ'ಯ ನಾಮಕರಣದ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಹೇಳಿದ್ದಾರೆ.
ದಿನಾಂಕ 11/03/2024ರ ಸೋಮವಾರದಂದು ಸಾಯಂಕಾಲ 4ಗಂಟೆಗೆ 'ಸಹಕಾರಿ ರಂಗದ ಭೀಷ್ಮ ಶ್ರೀ ಕೆ. ಹೆಚ್. ಪಾಟೀಲ್ ರಸ್ತೆ' ನಾಮಕರಣ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ದಯವಿಟ್ಟು ತಾವು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.
ಫೇಸ್‌ಬುಕ್ ಪೋಸ್ಟ್: ಸಚಿವರ ಪತ್ರಕ್ಕೆ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 'ಬೆಂಗಳೂರಿನ ಎಂ. ಎಸ್. ರಾಮಯ್ಯ ಸಿಗ್ನಲ್‌ನಿಂದ ಅಶ್ವಥ್ ನಗರ ರಸ್ತೆಗೆ ಈಗಾಗಲೇ ಶ್ರೀ ಬಿ. ಎಸ್. ಯಡಿಯೂರಪ್ಪ ಅವರ ಹೆಸರು ಇಡುವ ಬಗ್ಗೆ ಪ್ರಸ್ತಾವನೆ ಇದೆ. ನಾಗರಿಕರ ಹಾಗೂ ಸ್ಥಳೀಯರ ಅಭಿಪ್ರಾಯವೂ ಇದೇ ಆಗಿದೆ. ಈ ರಸ್ತೆ ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ಅವರ ನಿವಾಸದ ಬಳಿ ಇದೆ. ಇದಕ್ಕೆ ಬೇರೆ ಹೆಸರಿಡುವುದು ಸಮಂಜಸವಲ್ಲ' ಎಂದು ಹೇಳಿದ್ದಾರೆ.
'ಮಾನ್ಯ ಕೆ. ಹೆಚ್. ಪಾಟೀಲ್ ಅವರ ಹೆಸರು ಬೇರೆ ರಸ್ತೆಗೆ ಇಡಬೇಕಾಗಿ ನಮ್ಮ ಮನವಿ. ದಯವಿಟ್ಟು ಈ ಸೂಕ್ಷ್ಮತೆಯನ್ನು ಗಮನದಲ್ಲಿಡಬೇಕೆಂದು ಮಾನ್ಯ ಮುಖ್ಯಮಂತ್ರಿ Siddaramaiah ಹಾಗೂ H.K.Patil ಅವರಲ್ಲಿ ನನ್ನ ಸವಿನಯ ಕೋರಿಕೆ' ಎಂದು ಡಾ. ಸಿ. ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ನಿಯಮಗಳೇನು?; ನಿಯಮಗಳ ಪ್ರಕಾರ ಬೆಂಗಳೂರು ನಗರದ ಯಾವುದೇ ರಸ್ತೆಗೆ ಹೆಸರು ಇಡಬೇಕಾದರೆ ಮೊದಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಕೆ ಮಾಡಿ ಒಪ್ಪಿಗೆ ಪಡೆಯಬೇಕು.
ಕೌನ್ಸಿಲ್ ಸಭೆಯ ಒಪ್ಪಿಗೆ ಪಡೆದ ಬಳಿಕ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಬೇಕು. ಆಕ್ಷೇಪಣೆಗಳನ್ನು ಸ್ವೀಕರಿಸಿ, ವಿಲೇವಾರಿ ಮಾಡಿದ ಬಳಿಕ ಹೆಸರನ್ನು ಅಂತಿಮಗೊಳಿಸಬೇಕಿದೆ.
ಬಿ. ಎಸ್. ಯಡಿಯೂರಪ್ಪ ನಿವಾಸ 'ಧವಳಗಿರಿ' ಡಾಲರ್ಸ್ ಕಾಲೋನಿಯಲ್ಲಿದೆ. ಇದು ರಾಜ್ಯ ರಾಜಕೀಯದ ಕೇಂದ್ರಬಿಂದು. 2019ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದಾಗ ಯಡಿಯೂರಪ್ಪ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿಯೂ ಕೆಲಸ ಮಾಡಿದ್ದರು.












Click it and Unblock the Notifications