ಬೆಂಗಳೂರಲ್ಲಿ ಚಿರತೆ ಹಾವಳಿ ತಡೆಯಲು ಮಾಸ್ಟರ್ ಪ್ಲ್ಯಾನ್! ಏನು ಗೊತ್ತಾ?
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಚಿರತೆ ಹಾವಳಿ ಜೋರಾಗುತ್ತಿದ್ದು, ಜನ ಜೀವ ಭಯದಲ್ಲೇ ರಾತ್ರಿ ಸಮಯದಲ್ಲಿ ಓಡಾಡುವ ಪರಿಸ್ಥಿತಿ ಬಂದಿದೆ. ಹೀಗಿದ್ದಾಗ ಇದಕ್ಕೆ ಒಂದು ಮುಕ್ತಿ ಕಾಣಿಸೋಕೆ ಅರಣ್ಯ ಇಲಾಖೆ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಬೆಂಗಳೂರಿನ ಹೊರವಲಯದಲ್ಲೀಗ ಚಿರತೆ ಕಾಟಕ್ಕೆ ಈ ಮೂಲಕ ಶಾಶ್ವತ ಪರಿಹಾರ ಹುಡುಕಲು ಅರಣ್ಯ ಇಲಾಖೆ ಮುಂದಾಗಿದೆ. ಅರೆ ಏನದು ಚಿರತೆ ವಿರುದ್ಧ ಮಾಸ್ಟರ್ ಪ್ಲ್ಯಾನ್? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಚಿರತೆ ಸಂಕೋಚ ಸ್ವಭಾವದ ಪ್ರಾಣಿ, ಹೀಗಾಗಿ ಹೆಚ್ಚಾಗಿ ಜನರ ಕಣ್ಣಿಗೆ ಬೀಳುವುದಿಲ್ಲ. ಈ ಹಿನ್ನೆಲೆ ಹಗಲು ಸಮಯ ದಟ್ಟವಾದ ಪೊದೆ ಒಳಗೆ ಅಥವಾ ಅರಣ್ಯದಲ್ಲಿ ಅವಿತು ಕುಳಿತು ವಿಶ್ರಾಂತಿ ಪಡೆಯುತ್ತೆ. ಹಾಗೇ ರಾತ್ರಿ ವೇಳೆ ಅಲರ್ಟ್ ಆಗುವ ಚಿರತೆಗಳು ಆಹಾರ ಅರಸಿ, ಊರೂರು ಸುತ್ತುತ್ತವೆ. ಹೀಗೆ ಬೆಂಗಳೂರು ಹೊರವಲಯದಲ್ಲಿ, ಆಹಾರ ಅರಸಿ ಹೋಗುವ ಚಿರತೆಗಳು ಜನಗಳ ಕಣ್ಣಿಗೆ ಬಿದ್ದು ಭಾರಿ ಆತಂಕ ಸೃಷ್ಟಿಯಾಗುತ್ತಿದೆ. ಹೀಗೆ ಕಾಡು ಬಿಟ್ಟು ಬೆಂಗಳೂರು ನಗರಕ್ಕೆ ಬರುವ ಚಿರತೆಗಳಿಗೆ ಒಂದು ವ್ಯವಸ್ಥೆ ಮಾಡಲು ಅರಣ್ಯಾಧಿಕಾರಿಗಳು ಹೊಸ ಐಡಿಯಾ ಹುಡುಕಿದ್ದಾರೆ.

ಚಿರತೆ ಬಂತು ಚಿರತೆ!
ಬೆಂಗಳೂರು ನಗರದ ಹೊರವಲಯ ಪ್ರದೇಶಗಳಾದ ಕಗ್ಗಲಿಪುರ, ಆನೇಕಲ್, ಯಲಹಂಕ, ಹೊಸಕೋಟೆ ಸೇರಿ ಕೆ.ಆರ್. ಪುರ ಸುತ್ತಮುತ್ತ ಆಗಾಗ ಚಿರತೆ ಹೆಚ್ಚಾಗಿ ಕಂಡುಬರುತ್ತಿವೆ. ಈ ಜಾಗಗಳಲ್ಲಿ ಅರಣ್ಯ ಪ್ರದೇಶ ಆವರಿಸಿರುವ ಕಾರಣಕ್ಕೆ ಚಿರತೆ ಸೇರಿದಂತೆ ಕಾಡು ಪ್ರಾಣಿ ಹಾವಳಿ ಕೂಡ ಹೆಚ್ಚು. ಆದರೆ ಇದಕ್ಕೆ ಒಂದು ಮುಕ್ತಿ ಕಾಣಿಸಲು ಅರಣ್ಯ ಇಲಾಖೆಗೆ ಈಗ ಸರ್ಕಾರದ ಅಧೀನ ಕಾರ್ಯದರ್ಶಿಗಳು ಪತ್ರ ಬರೆದಿದ್ದಾರೆ. ಈ ಮೂಲಕ ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರು ನಗರ ಸುತ್ತಮುತ್ತಲು ಕಂಡುಬರುವ ಚಿರತೆಗಳಿಗೆ ಬ್ರೇಕ್ ಹಾಕಲು ಚಿರತೆ ಕಾರ್ಯಪಡೆ ರಚನೆಗಾಗಿ ಸೂಚಿಸಲಾಗಿದೆ.
20 ವರ್ಷದಲ್ಲಿ ಕಾಡು ನಾಶ
ಬೆಂಗಳೂರು ದೊಡ್ಡದಾಗಿ ಬೆಳೆದಂತೆಲ್ಲಾ ಕಾಡು ನಾಶವಾಗುತ್ತಿದೆ. ಅದರಲ್ಲೂ ಈ ಮಹಾನಗರಿ ಬೆಂಗಳೂರು ಬೆಳೆಸಲು, ಕಳೆದ 20 ವರ್ಷದಲ್ಲಿ ಬೆಂಗಳೂರು ಹೊರವಲಯದ ಕಾಡುಗಳನ್ನೂ ನಾಶ ಮಾಡಲಾಗಿದೆ. ಇದರ ಪರಿಣಾಮ ಕಾಡು ಪ್ರಾಣಿಗಳು ನಗರಕ್ಕೆ ಬಂದು ಕಾಟ ಕೊಡುತ್ತಿವೆ. ಕಳೆದ ಕೆಲವು ವರ್ಷಗಳಿಂದ ಹೀಗೆ ಚಿರತೆ ಹಾವಳಿಗೆ ಬೆಂಗಳೂರಿಗರು ಬೆಚ್ಚಿದ್ದಾರೆ. ಪರಿಸ್ಥಿತಿ ಕೈಮೀರಿದರೆ ಹೇಗಪ್ಪಾ ಅನ್ನೋ ಚಿಂತೆಯಲ್ಲಿದ್ದಾರೆ. ಅದ್ರಲ್ಲೂ ಅರಣ್ಯ ಪ್ರದೇಶ ಅಕ್ಕಪಕ್ಕ ಮನೆಯಿದ್ದವರು ನಿತ್ಯವೂ ಹೆದರು ಪರಿಸ್ಥಿತಿ ಇದೆ.
ವೈರಲ್ ಆಗಿತ್ತು ವಿಡಿಯೋ
ಕೆಲ ವರ್ಷಗಳ ಹಿಂದೆ ಚಿರತೆ ಸೀದಾ ಅಪಾರ್ಟ್‌ಮೆಂಟ್‌ಗೆ ನುಗ್ಗಿತ್ತು. ಅದಕ್ಕೂ ಮೊದಲು ರಾತ್ರಿ ವೇಳೆ ಸ್ಕೂಲ್ ಒಳಗಡೆ, ಚಿರತೆ ಓಡಾಡಿದ್ದ ದೃಶ್ಯ ಕಂಡು ಜಗತ್ತೇ ಶಾಕ್ ಆಗಿತ್ತು. ಬೆಂಗಳೂರಲ್ಲಿ ಚಿರತೆ ಸ್ಕೂಲ್‌ಗೆ ನುಗ್ಗಿದ್ದ ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಇದು ಸಾಲದೆಂಬಂತೆ ಕೆಲ ದಿನಗಳ ಹಿಂದೆ ಬೆಂಗಳೂರಿನ ಹಲವೆಡೆ ಈ ರೀತಿ ಚಿರತೆ ಓಡಾಡಿ ಸದ್ದು ಮಾಡಿತ್ತು. ಹೀಗಾಗಿ ಚಿರತೆ ಕಾರ್ಯಪಡೆ ರಚನೆ ಮಾಡಿ ಚಿರತೆಗಳ ಹಾವಳಿಗೆ ಬ್ರೇಕ್ ಹಾಕಲು ಸರ್ಕಾರ ಸಜ್ಜಾಗಿದೆ.

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ಚಿರತೆಗಳ ಹಾವಳಿಗೆ ಮೊದಲು ಬ್ರೇಕ್ ಬೀಳಲಿ ಅನ್ನೋದೆ ಬೆಂಗಳೂರು ನಿವಾಸಿಗಳ ಆಗ್ರಹ. ಅದರಲ್ಲೂ ಬೆಂಗಳೂರು ನಗರದ ಹೊರವಲಯ ಭಾಗದ ಜನಗಳು ರಾತ್ರಿ ವೇಳೆ ಸಂಚಾರ ಮಾಡಲು 100 ಬಾರಿ ಯೋಚಿಸುವ ಸ್ಥಿತಿ ಇದ್ದು, ಹೀಗಾಗಿ ಅಗತ್ಯ ಕ್ರಮಗಳನ್ನು ಕೈಗೊಂಡರೆ ಮುಂದೆ ಆಗುವ ಅಪಾಯ ತಪ್ಪಿಸಬಹುದು ಎಂಬುದೇ ಈಗಿನ ಪ್ಲ್ಯಾನ್. ಇದೇ ಕಾರಣಕ್ಕೆ ಇದೀಗ ಬೆಂಗಳೂರಿನಲ್ಲಿ ಲಭ್ಯ ಇರುವ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸಲಕರಣೆಗಳನ್ನೇ ಬಳಸಿ ಚಿರತೆ ಕಾರ್ಯಪಡೆ ರಚನೆಗೆ ನಿರ್ಧರಿಸಲಾಗಿದೆ.












Click it and Unblock the Notifications