BMTC: ರಸ್ತೆಗಿಳಿದ ಎಸಿ ಎಲೆಕ್ಟ್ರಿಕ್ ಬಸ್, ಬದಲಾಗಲಿವೆ ವೊಲ್ವೋ ಬಸ್‌ಗಳು
ಬೆಂಗಳೂರು, ಜನವರಿ 11: ಉದ್ಯಾನ ನಗರಿ ಬೆಂಗಳೂರಿನ ಜನರ ಜೀವನಾಡಿಯಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿದೆ. ಇದೇ ಮೊದಲ ಬಾರಿಗೆ ನಗರದ ರಸ್ತೆಗಳಲ್ಲಿ ಬಿಎಂಟಿಸಿ ಎಸಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭವಾಗಿದೆ. ಸದ್ಯ 5 ಬಸ್‌ಗಳು ಮೆಜೆಸ್ಟಿಕ್‌ನಿಂದ ಕಾಡುಗೋಡಿಗೆ ಸಂಚಾರವನ್ನು ಪ್ರಾರಂಭಿಸಿವೆ.
ಬಿಎಂಟಿಸಿ ಅಧಿಕಾರಿಗಳ ಮಾಹಿತಿ ಪ್ರಕಾರ ಏಪ್ರಿಲ್ 2024ರಲ್ಲಿ ಅಶೋಕ್ ಲೈಲ್ಯಾಂಡ್‌ನ ಅಂಗ ಸಂಸ್ಥೆಯಾದ ಒಹೆಚ್‌ಎಂ ಗ್ಲೋಬಲ್ ಮೊಬಿಲಿಟಿ 320 ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಕೆ ಮಾಡಲು ಟೆಂಡರ್ ಪಡೆದಿತ್ತು. ಈ ಬಸ್‌ಗಳನ್ನು ವಾಯುವಜ್ರ ಮತ್ತು ಟೆಕ್ ಕಾರಿಡಾರ್‌ನಲ್ಲಿ ಸಂಚಾರ ನಡೆಸುವ ವೊಲ್ವೋ ಬಸ್‌ಗಳಿಗೆ ಪರ್ಯಾಯವಾಗಿ ಓಡಿಸಲು ಬಿಎಂಟಿಸಿ ಮುಂದಾಗಿದೆ.

ಸದ್ಯ 5 ಬಸ್‌ಗಳು ನಗರಕ್ಕೆ ಆಗಮಿಸಿವೆ. ಈ ಬಸ್‌ಗಳನ್ನು ಮೆಜೆಸ್ಟಿಕ್-ಕಾಡುಗೋಡಿ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಓಡಿಸಲಾಗುತ್ತಿದೆ. ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ವಾಯುವಜ್ರ ಎಸಿ ಮತ್ತು ಟೆಕ್ ಪಾರ್ಕ್‌ಗಳಿಗೆ ಸಂಚಾರ ನಡೆಸುವ ವೊಲ್ವೋ ಬಸ್‌ಗಳನ್ನು ಬದಲಾವಣೆ ಮಾಡಲಿವೆ.
ಜೂನ್‌ನಲ್ಲಿ ಬರಬೇಕಿತ್ತು: ಈ ಹಿಂದಿನ ಟೆಂಡರ್ ನಿಯಮದಂತೆ ಎಸಿ ಎಲೆಕ್ಟ್ರಿಕ್ ಬಸ್‌ಗಳು 2024ರ ಜೂನ್‌ಗೆ ಬೆಂಗಳೂರು ನಗರಕ್ಕೆ ಬರಬೇಕಿತ್ತು. ಸದ್ಯ 5 ಬಸ್‌ಗಳು ಆಗಮಿಸಿದ್ದು, ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಈಗ ಎಲ್ಲಾ ಬಸ್‌ಗಳು 2025ರ ಮಾರ್ಚ್‌ಗೆ ನಗರಕ್ಕೆ ಆಗಮಿಸಲಿವೆ ಎಂದು ಅಂದಾಜಿಸಲಾಗಿದೆ.
ಒಹೆಚ್‌ಎಂ ಗ್ಲೋಬಲ್ ಮೊಬಿಲಿಟಿ ಜೊತೆಗಿನ ಒಪ್ಪಂದದ ಅನ್ವಯ ಈ ಬಸ್‌ಗಳು ಒಟ್ಟು ವೆಚ್ಚದ ಒಪ್ಪಂದದಂತೆ ಕಾರ್ಯ ನಿರ್ವಹಣೆ ಮಾಡಲಿವೆ. ಬಿಎಂಟಿಸಿ ಈ ಬಸ್‌ಗಳ ಸಂಚಾರಕ್ಕೆ ಪ್ರತಿ ಕಿ. ಮೀ.ಗೆ 65.80 ರೂ. ನೀಡಲಿದೆ. ಕಂಪನಿಯೇ ಬಸ್‌ಗಳ ನಿರ್ವಹಣೆ, ಡ್ರೈವರ್ ನೇಮಕಾತಿ, ಬಸ್ ಚಾರ್ಜ್ ಮಾಡಲು ಬೇಕಾದ ಮೂಲ ಸೌಲಭ್ಯದ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು.
ಇದೇ ಮೊದಲ ಬಾರಿಗೆ ಬಿಎಂಟಿಸಿ ನಗರದಲ್ಲಿ ಎಲೆಕ್ಟ್ರಿಕ್ ಎಸಿ ಬಸ್ ಸಂಚಾರವನ್ನು ಆರಂಭಿಸಿದೆ. ಬಿಎಂಟಿಸಿ ಈ ಬಸ್‌ಗಳಿಗೆ ನಿರ್ವಾಹಕರನ್ನು ಮಾತ್ರ ನೀಡಲಿದೆ. ಕಂಪನಿ ಪ್ರತಿದಿನ 225 ಸಂಚಾರ ನಡೆಸುವ ಭರವಸೆ ನೀಡಬೇಕು. 12 ವರ್ಷಗಳ ಕಾಲ ವರ್ಷಕ್ಕೆ 350 ದಿನಗಳು 225 ಕಿ. ಮೀ. ಬಸ್ ಸಂಚಾರ ನಡೆಸಬೇಕು.
ಸದ್ಯ ಬಿಎಂಟಿಸಿಯಲ್ಲಿ 1,269 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳಿವೆ. ಇವುಗಳಲ್ಲಿ ಟಾಟಾ ಮೋಟಾರ್ಸ್‌ನ 921, ಸ್ವಿಚ್ ಮೊಬಿಲಿಟಿಯ 300 ಮತ್ತು 90 ಜೆಬಿಎಂ-ಎನ್‌ಟಿಪಿಸಿಯ ಬಸ್‌ಗಳು ಸೇರಿವೆ. ಈ ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳಲಾಗಿದೆ. ಟಾಟಾ ಬಸ್‌ಗಳಿಗೆ ಬಿಎಂಟಿಸಿ ಪ್ರತಿ ಕಿ. ಮೀ.ಗೆ 41 ರೂ. ನೀಡುತ್ತಿದೆ.
ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಬಿಎಂಟಿಸಿ ಜೆಬಿಎಂ-ಎನ್‌ಟಿಪಿಸಿ ಬಸ್‌ಗಳನ್ನು ಗುತ್ತಿಗೆ ಪಡೆದಿದೆ, ಇದಕ್ಕೆ ಬಿಎಂಟಿಸಿ ಪ್ರತಿ ಕಿ. ಮೀ.ಗೆ 51 ರೂ. ನೀಡುತ್ತದೆ. ಸ್ವಿಚ್ ಮೊಬಿಲಿಟಿ ಬಸ್‌ಗಳನ್ನು ಕೇಂದ್ರ ಸರ್ಕಾರದ ಫೇಮ್-2 ಯೋಜನೆಯಡಿ ಓಡಿಸಲಾಗುತ್ತಿದೆ, ಇದಕ್ಕೆ ಪ್ರತಿ ಕಿ. ಮೀ.ಗೆ 48.9 ರೂ. ನೀಡಲಾಗುತ್ತಿದೆ.
ಬಿಎಂಟಿಸಿ ನಗರದ ವಿವಿಧ ಪ್ರದೇಶಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಯುವಜ್ರ ವೊಲ್ವೋ ಬಸ್‌ಗಳನ್ನು ಓಡಿಸುತ್ತಿದೆ. ಇವು ಎಸಿ ಬಸ್‌ಗಳಾಗಿವೆ. ಅಲ್ಲದೇ ಟೆಕ್ ಪಾರ್ಕ್‌ಗಳಿಗೆ ಸಹ ವೊಲ್ವೋ ಎಸಿ ಬಸ್‌ಗಳನ್ನು ಓಡಿಸುತ್ತಿದೆ. ಈ ಬಸ್‌ಗಳಲ್ಲಿ ಹಲವು ಹಳೆಯದಾಗಿವೆ. ಈಗ ಎಲೆಕ್ಟ್ರಿಕ್ ಬಸ್‌ಗಳ ಮೂಲಕ ಇವುಗಳನ್ನು ಬದಲಾವಣೆ ಮಾಡಲಾಗುತ್ತದೆ.












Click it and Unblock the Notifications