ಬೆಂಗಳೂರಲ್ಲಿ ಹೊತ್ತಿ ಉರಿದ ಫರ್ನಿಚರ್ ಗೋದಾಮು
ಬೆಂಗಳೂರು, ಫೆಬ್ರವರಿ 14: ಫರ್ನಿಚರ್ ಗೋದಾಮು ಹೊತ್ತಿ ಉರಿದಿರುವ ಘಟನೆ ಬೆಂಗಳೂರಿನ ಹೆಗಡೆ ನಗರದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ದಾಮೋದರ್ ಎಂಬುವರಿಗೆ ಸೇರಿದ ಶ್ರೀರಂ ಫರ್ನೀಚರ್ಸ್ ಇದಾಗಿದೆ. ಕೂಡಲೇ ಸ್ಥಳಕ್ಕೆ 8 ಅಗ್ನಿಶಾಮಕ ವಾಹನಗಳು ದೌಡಾಯಿಸಿ ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
12 ಮಂದಿ ಕೆಲಸಗಾರರು ಗೋದಾಮಿನೊಳಗೆ ಮಲಗಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ. ರಾತ್ರಿ ಸುಮಾರು 2 ಗಂಟೆ ವೇಳೆಗೆ ಗೋದಾಮಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಕಾರ್ಮಿಕರು ಕೂಡಲೇ ಗೋದಾಮಿನಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

ಗೋದಾಮಿನ ಪಕ್ಕದಲ್ಲಿದ್ದ ಕಸಕ್ಕೆ ಬೆಂಕಿ ಬಿದ್ದು ಬಳಿಕ ಗೋದಾಮಿಗೆ ಆವರಿಸಿದೆ. 12 ಮಂದಿ ಗೋದಾಮಿನ ಒಳಗೆ ಮಲಗಿದ್ದರು, ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ ಎಂದು ಅಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ಒಬ್ಬರು ತಿಳಿಸಿದ್ದಾರೆ.
ಗೋದಾಮಿನ ಖಾಲಿ ಜಾಗದಲ್ಲಿ ಚಿಕ್ಕ ಹುಡುಗರು ಬಂದು ಗಾಂಜಾ, ಸಿಗರೇಟ್ ಸೇದುತ್ತಾರೆ. ಇದರಿಂದಲೇ ಬೆಂಕಿ ಬಿದ್ದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications