Fire Accident: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಹೊತ್ತಿ ಉರಿದ ಕುಂಬಾರಪೇಟೆಯ ಆಟಿಕೆ ಮಳಿಗೆ
ಬೆಂಗಳೂರು, 20: ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬೆಂಕಿ ಅವಘಡಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತೀಚಿಗೆ ಸಂಭವಿಸಿದ ಪಟಾಕಿ ದುರಂತದಲ್ಲಿ ಹತ್ತಾರು ಜನರ ಸಾವು ಸೇರಿದಂತೆ ನಗರದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.
ವಾರಕ್ಕೊಂದು ಅಗ್ನಿ ಅವಘಡ ಪ್ರಕರಣ ಎನ್ನುವಂತೆ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಭಾನುವಾರ ಸಂಭವಿಸಿದ ಬೆಂಕಿ ಅಪಘಾತ ಜನರಲ್ಲಿ ಆತಂಕ ಹೆಚ್ಚಿಸಿದೆ. ಬೆಂಗಳೂರಿನ ಕುಂಬಾರಪೇಟೆ ಮಕ್ಕಳ ಆಟಿಕೆ ಮಳಿಗೆಯಲ್ಲಿ ನಿನ್ನೆ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ಕೆಆರ್ ಮಾರುಕಟ್ಟೆ ಸಮೀಪದಲ್ಲಿರುವ ಕುಂಬಾರಪೇಟೆಯ ಕಟ್ಟಡವೊಂದರ ಮೂರನೇ ಮಹಡಿಯಲ್ಲಿದ್ದ ಮಕ್ಕಳ ಆಟದ ಸಾಮಾನು ಮತ್ತು ಎಲೆಕ್ಟ್ರಾನಿಕ್ಸ್ ವಸ್ತು ಮಾರಾಟದ ಮಳಿಗೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಲೇ ಬೆಂಕಿ ಎಲ್ಲೆಡೆ ಹಬ್ಬಿದ್ದು, ಸಂಪೂರ್ಣ ಅಂಗಡಿಗಳು ಹೊತ್ತಿ ಉರಿದಿದೆ. ಅಲ್ಲದೇ ಬೆಂಕಿಯ ಕೆನ್ನಾಲಿಗೆ 6ನೇ ಮಹಡಿವರೆಗೂ ಹಬ್ಬಿದೆ.
ಬೆಂಕಿ ದುರಂತ ಸಂಭವಿಸುತ್ತಿದ್ದಂತೆ ಸ್ಥಳೀಯರು ಕೂಡಲೇ ಅಗ್ನಿ ಶಾಮಕ ದಳ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ ಅಗ್ನಿ ಶಾಮಕ ದಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸುವುದು ತಡವಾಗಿದ್ದು, ಬೆಂಕಿಯೂ ಆರನೇ ಮಹಡಿಗೂ ಹಬ್ಬಿದೆ. ಬಳಿಕ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ಆರಿಸಲು ಹರಸಾಹಸ ಪಟ್ಟಿದ್ದಾರೆ.
ಬೆಂಕಿ ಆರಿಸುವ ಕಾರ್ಯಾಚರಣೆ ವೇಳೆ ಅಗ್ನಿ ಶಾಮಕ ದಳ ಸಿಬ್ಬಂದಿ ವಾಹನದಲ್ಲಿದ್ದ ನೀರು ಖಾಲಿಯಾಗಿದ್ದು, ಬೆಂಕಿ ಮತ್ತಷ್ಟು ವ್ಯಾಪಿಸಿದೆ. ಸತತ ಕಾರ್ಯಾಚರಣೆ ಬಳಿಕ ಬೆಂಕಿ ಆರಿಸಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಕೋರಮಂಗಲದಲ್ಲಿ ಅಗ್ನಿ ದುರಂತ
ಇನ್ನು ಇತ್ತೀಚಿಗೆ ಕೋರಮಂಗಲದ ಪಬ್‌ವೊಂದರಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿತ್ತು. ಸಿಲಿಂಡರ್ ಬ್ಲಾಸ್ಟ್‌ನಿಂದ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಕಟ್ಟಡದ ಬಳಿ ಕಾರು ಶೋ ರೂಂ ಕೂಡ ಇದ್ದು, ಅಲ್ಲಿದ್ದ ಹೊಸ ಕಾರೊಂದು ಸಂಪೂರ್ಣ ಭಸ್ಮವಾಗಿತ್ತು. ಈ ಘಟನೆಯಲ್ಲಿ ವ್ಯಕ್ತಿಯೊಬ್ಬ ಜೀವ ಉಳಿಸಿಕೊಳ್ಳಲು ನಾಲ್ಕನೇ ಅಂತಸ್ತಿನಿಂದ ಜಿಗಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಬಳಿಕ ಆರು ಅಗ್ನಿಶಾಮಕ ತಂಡದ ಸತತ ಕಾರ್ಯಾಚರಣೆಯಿಂದ ಬೆಂಕಿ ಆರಿಸಲಾಗಿತ್ತು.












Click it and Unblock the Notifications