ಆನೇಕಲ್ ಪಟಾಕಿ ದುರಂತ; 14 ಸಾವು, ಸಿದ್ದರಾಮಯ್ಯ ಭೇಟಿ
ಬೆಂಗಳೂರು, ಅಕ್ಟೋಬರ್ 08; ಆನೇಕಲ್‌ನ ಪಟಾಕಿ ಗೋಡಾನ್‌ನಲ್ಲಿ ನಡೆದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಶನಿವಾರ ರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಶನಿವಾರ ತಡರಾತ್ರಿ ತನಕ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರ ಜಿಲ್ಲೆ ಆನೇಕಲ್ ಸಮೀಪ ಅತ್ತಿಬೆಲೆಯ ಪಟಾಕಿ ಗೋಡಾನ್‌ನಲ್ಲಿ ಲಾರಿಯಿಂದ ಪಟಾಕಿ ಇಳಿಸುವಾಗ ಬೆಂಕಿ ಕಾಣಿಸಿಕೊಂಡಿತ್ತು. ಗೋಡಾನ್‌ನಲ್ಲಿ 20 ಜನರು ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ದುರಂತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿಗಳ ಭೇಟಿ; ಪಟಾಕಿ ಗೋಡಾನ್ ದುರಂತದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಭಾನುವಾರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸರ್ಕಾರ ಈಗಾಗಲೇ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.
ಸಿದ್ದರಾಮಯ್ಯ ಟ್ವೀಟ್‌ನಲ್ಲಿ, 'ಬೆಂಗಳೂರು ನಗರ ಜಿಲ್ಲೆ ಆನೇಕಲ್ ಸಮೀಪ ಅತ್ತಿಬೆಲೆಯ ಪಟಾಕಿ ಸಂಗ್ರಹ ಮಳಿಗೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 12 ಮಂದಿ ಮೃತಪಟ್ಟ ಸುದ್ದಿ ತಿಳಿದು ಅತೀವ ನೋವಾಯಿತು. ದುರ್ಘಟನೆ ನಡೆದ ಸ್ಥಳಕ್ಕೆ ನಾಳೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದೇನೆ. ಮೃತ ಕಾರ್ಮಿಕರ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದು ಶನಿವಾರ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಶನಿವಾರ ರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. "ಇದೊಂದು ಘೋರ ದುರಂತ. ಅಮಾಯಕ ಯುವಕರು ಮೃತಪಟ್ಟಿದ್ದಾರೆ. ಕೆಲವರು ವ್ಯಾಪಾರ ಮಾಡಲು ಬಂದಿದ್ದವರೂ ಇದ್ದರು. 13 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ" ಎಂದರು.
"ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ಸತ್ತವರ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು" ಎಂದು ಡಿ. ಕೆ. ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.
"ದುರಂತ ಸ್ಥಳದಲ್ಲಿ 20 ಮಂದಿ ಇದ್ದರು. ನಾಲ್ವರು ತಪ್ಪಿಸಿಕೊಂಡಿದ್ದಾರೆ. 13 ಮಂದಿಯ ಶವ ಪತ್ತೆಯಾಗಿದೆ. ಉಳಿದವರು ಏನಾದರೂ ಎಂದು ತನಿಖೆ ನಡೆಸಲಾಗುತ್ತಿದೆ. ಹಿಂದಿನ ಕಟ್ಟಡದಲ್ಲಿ ಏನಾದರೂ ಇದ್ದಾರೆಯೇ?. ಬೇರೆ ಎಲ್ಲಾದರೂ ಹೋದರೆ?. ಹಿಂದಿನ ಕಟ್ಟಡದಲ್ಲೂ ಪಟಾಕಿಗಳು ಇವೆಯಂತೆ. ಅದೂ ಅಪಾಯಕಾರಿ. ಹೀಗಾಗಿ ಎಚ್ಚರಿಕೆಯಿಂದ ಬಾಗಿಲು ತೆರೆಯಬೇಕಿದೆ" ಎಂದು ಪೊಲೀಸರು ಹೇಳಿದ್ದಾರೆ ಎಂದರು.
"ದುರಂತದ ಬಗ್ಗೆ ಪೊಲೀಸರು ಕೂಲಂಕಷ ತನಿಖೆ ನಡೆಸುತ್ತಿದ್ದಾರೆ. ಮಾಲೀಕರು ಮತ್ತಿತರರು ಕೂಡ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಅಗ್ನಿ ಅನಾಹುತ ತಡೆವ ನಿಯಮಗಳನ್ನು ಪಾಲಿಲಾಗಿದೆಯೇ?, ಲೋಪದೋಷಗಳು ಏನಾದರೂ ಇವೆಯೇ? ಎಂದು ಪರಿಶೀಲನೆ ನಡೆಸಲಾಗುತ್ತಿದೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
"ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಟಾಕಿ ಅಂಗಡಿಗಳು, ಗೋಡೌನ್‌ಗಳಲ್ಲಿ ಅಗ್ನಿ ಅನಾಹುತ ನಿಯಂತ್ರಣ ನಿಯಮಗಳ ಪಾಲನೆ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದು ತಿಳಿಸಿದರು.
ಸಾಧ್ಯವಾಗದ ರಕ್ಷಣಾ ಕಾರ್ಯ; ಪಟಾಕಿ ಗೋಡಾನ್‌ನಲ್ಲಿ ನಡೆದ ದುರಂತದಲ್ಲಿ ಮೃತಪಟ್ಟವರಲ್ಲಿ ಕಾರ್ಮಿಕರೇ ಹೆಚ್ಚು. ಇವರೆಲ್ಲ ದುಡಿಮೆ ನಂಬಿಕೊಂಡು ಬಂದಿದ್ದರು. ಶನಿವಾರ ಮಧ್ಯಾಹ್ನ3.30ರ ಸುಮಾರಿಗೆ ಲಾರಿಯಿಂದ ಪಟಾಕಿ ಇಳಿಸಿ ಗೋಡಾನ್‌ನಲ್ಲಿ ಸಂಗ್ರಹ ಮಾಡುವಾಗ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣವೇ ಬೆಂಕಿಯ ಜ್ವಾಲೆ ಅಕ್ಕಪಕ್ಕಕ್ಕೆ ಹಬ್ಬಿದ್ದು, ಕಾರ್ಮಿಕರನ್ನು ರಕ್ಷಣೆ ಮಾಡುವ ಸ್ಥಳೀಯರ ಪ್ರಯತ್ನ ಫಲ ಕೊಟ್ಟಿಲ್ಲ. ಮೃತಪಟ್ಟವರಲ್ಲಿ ಕೆಲವು ಮಕ್ಕಳು ಸಹ ಸೇರಿದ್ದಾರೆ. ಶವಗಳು ಗುರುತು ಹಿಡಿಯಲಾರದಷ್ಟು ಕರಕಲಾಗಿವೆ.
ಕರ್ನಾಟಕ-ತಮಿಳುನಾಡು ಗಡಿಯ ಅತ್ತಿಬೆಲೆಯಲ್ಲಿ ಪ್ರತಿ ದೀಪಾವಳಿ ಸಂದರ್ಭದಲ್ಲಿಯೂ ಪಟಾಕಿ ವಹಿವಾಟು ಜೋರಾಗಿ ನಡೆಯುತ್ತದೆ. ಹಬ್ಬಕ್ಕೆ ಒಂದು ತಿಂಗಳು ಮುನ್ನವೇ ಪಟಾಕಿ ಮಳಿಗೆಗಳು ತೆರದುಕೊಳ್ಳುತ್ತವೆ. ತಮಿಳುನಾಡಿನ ಶಿವಕಾಶಿಯಿಂದ ಪಟಾಕಿ ತಂದು ಇಲ್ಲಿ ದಾಸ್ತಾನು ಮಾಡಲಾಗುತ್ತದೆ.












Click it and Unblock the Notifications