ಉದ್ಯಮಿ, ನಿರ್ಮಾಪಕ ಕಪಾಲಿ ಮೋಹನ್ ಆತ್ಮಹತ್ಯೆ
ಬೆಂಗಳೂರು, ಮಾರ್ಚ್ 23: ಉದ್ಯಮಿ, ಸಿನಿಮಾ ಫೈನಾನ್ಶಿಯರ್ ಕಪಾಲಿ ಮೋಹನ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ. ಇತ್ತೀಚೆಗೆ ಅಕ್ರಮ ಮದ್ಯ ದಾಸ್ತಾನು, ಅಕ್ರಮ ಜೂಜು ಪ್ರಕರಣಗಳಲ್ಲಿ ಸಿಲುಕಿದ್ದರು.
ಡಾ.ರಾಜ್ ಕುಟುಂಬದೊಂದಿಗೆ ಸಾಕಷ್ಟು ಒಡನಾಟ ಇಟ್ಟುಕೊಂಡಿದ್ದ ಮೋಹನ್, ಪೀಣ್ಯ ಬಳಿಯ ಖಾಸಗಿ ಹೋಟೆಲ್ ನಲ್ಲಿ ನೇಣಿಗೆ ಶರಣಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವ್ಯಾಪಾರದಲ್ಲಿ ತೊಂದರೆ, ನಷ್ಟ ಅನುಭವಿಸಿ ಮಾನಸಿಕವಾಗಿ ನೊಂದಿದ್ದರು ಎಂದು ಆಪ್ತ ವಲಯ ಮಾಹಿತಿ ನೀಡಿದೆ. ಬೆಂಗಳೂರು ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದ ಹೊಟೆಲ್ ನಲ್ಲಿ ನೆಲೆಸಿದ್ದ ಮೋಹನ್, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಗಂಗಮ್ಮನಗುಡಿ ಪೊಲೀಸರ ಭೇಟಿ,ಪರಿಶೀಲನೆ ನಡೆಸುತ್ತಿದ್ದಾರೆ.
ಅಕ್ರಮವಾಗಿ ಜೂಜು ಅಡ್ಡಾ ನಡೆಸುತ್ತಿದ್ದ ಆರೋಪವನ್ನು ಮೋಹನ್ ಹೊತ್ತುಕೊಂಡಿದ್ದರು. 2018ರಲ್ಲಿ ಯಶವಂತಪುರದಲ್ಲಿರುವ ಆರ್ . ಜಿ ಹೋಟೆಲ್ ಮೇಲೆ ಸಿಸಿಬಿ ಹಿರಿಯ ಅಧಿಕಾರಿ ಗಿರೀಶ್ ನೇತೃತ್ವದ ತಂಡವು ದಾಳಿ ನಡೆಸಿತ್ತು. ನಂತರ ಕಪಾಲಿ ಮೋಹನ್ ಮನೆ ಮೇಲೆ ದಾಳಿ ನಡೆಸಿದ್ದರು. ಆದರೆ, ದಾಳಿ ಸುಳಿವು ಪಡೆದಿದ್ದ ಮೋಹನ್, ಪರಾರಿಯಾಗಿದ್ದರು.
ಜೂಜಾಟದಲ್ಲಿ ಭಾಗಿಯಾಗಿದ್ದ 47 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, 3.5 ಕೋಟಿ ರು ಮೌಲ್ಯದ ಜೂಜಾಟದ ಟೋಕನ್,9.33ಲಕ್ಷ ರು ನಗದನ್ನು ಜಪ್ತಿ ಮಾಡಲಾಗಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಇದೇ ವೇಳೆ ಮೋಹನ್ ಮನೆಯಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದ ಮದ್ಯ ದಾಸ್ತಾನು ಇರುವುದು ಪತ್ತೆಯಾಗಿತ್ತು. ಈ ಬಗ್ಗೆ ಅಬಕಾರಿ ಇಲಾಖೆಗೆ ಸಿಸಿಬಿ ಪೊಲೀಸರು ತಿಳಿಸಿದ್ದರು. ಈ ಬಗ್ಗೆ ಪರಿಶೀಲಿಸಿದ ಅಬಕಾರಿ ಇಲಾಖೆ ಇನ್ಸ್ ಪೆಕ್ಟರ್ ವಿಜಯಲಕ್ಷ್ಮಿ ಅವರಿಗೆ ಮೋಹನ್ ಮನೆಯಲ್ಲಿ 1.5 ಲಕ್ಷ ಲೀಟರ್ ಗೂ ಅಧಿಕ ಮದ್ಯವನ್ನು ಅಕ್ರಮವಾಗಿ ಇಟ್ಟುಕೊಂಡಿರುವುದು ಪತ್ತೆಯಾಗಿತ್ತು. ಈ ಪೈಕಿ 44 ಲೀಟರ್ ವಿದೇಶಿ ಬ್ರ್ಯಾಂಡ್ ಮದ್ಯ ಸೇರಿದೆ. ಕಾನೂನಿ ಪ್ರಕಾರ, 9.1 ಲೀಟರ್ ಇಟ್ಟುಕೊಳ್ಳಲು ಮಾತ್ರ ಅನುಮತಿ ಇದೆ. ಹೀಗಾಗಿ, ಅಕ್ರಮ ದಾಸ್ತಾನು ಹೊಂದಿರುವ ಮೋಹನ್ ವಿರುದ್ಧ ಇನ್ಸ್ ಪೆಕ್ಟರ್ ವಿಜಯಲಕ್ಷ್ಮಿ ಅವರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದರು.