ಸಕಾಲ ಸೇವೆಗಳು ಶೀಘ್ರದಲ್ಲೇ ಆನ್ ಲೈನ್ ನಲ್ಲಿ ಲಭ್ಯ

ಸಕಾಲ ಯೋಜನೆಯನ್ನು ಜನಸ್ನೇಹಿಯಾಗಿಲು ಆನ್ ಲೈನ್ ಮೂಲಕ ನೋಂದಣಿ ಮಾಡುವ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಈ ಕುರಿತು ಸಾರ್ವಜನಿಕ ಆಡಳಿತ ಮತ್ತು ಸುಧಾರಣೆ ಇಲಾಖೆ ಪ್ರಸ್ತಾವನೆ ರಚಿಸಿದ್ದು, ಶೀಘ್ರದಲ್ಲೇ ಈ ವ್ಯವಸ್ಥೆ ಆರಂಭಿಸಲು ಸಿದ್ಧತೆ ನಡೆಸುತ್ತಿದೆ.
ಆನ್ ಲೈನ್ ಮೂಲಕ ಕೆಲವು ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ಇಲಾಖೆ ಅರ್ಜಿಯನ್ನು ಸ್ವೀಕರಿಸಿ ನಿಮಗೆ ಬೇಕಾದ ದಾಖಲೆ ಪತ್ರಗಳನ್ನು ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಿದೆ. ಇದರಿಂದ ಕಚೇರಿಗಳಿಗೆ ಅಲೆದಾಡುವ ಕಾರ್ಯಕ್ಕೆ ತೆರೆ ಬೀಳಲಿದೆ.
ಕೆಲವು ಇಲಾಖೆಗಳ ನಾಗರೀಕ ಸೇವೆಗಳಿಗೆ ಮಾತ್ರ ಈ ಆನ್ ಲೈನ್ ವ್ಯವಸ್ಥೆ ಅನ್ವಯವಾಗಲಿದೆ. ಪ್ರಮಾಣಪತ್ರಗಳ ನವೀಕರಣ, ಭೂ ದಾಖಲಾತಿ ಮುಂತಾದವುಗಳನ್ನು ಈ ಸೇವೆ ಮೂಲಕ ನೀಡಲು ಆಡಳಿತ ಸುಧಾರಣಾ ಇಲಾಖೆ ಉದ್ದೇಶಿಸಿದೆ.
ಆದರೆ, ಕುಡಿಯುವ ನೀರಿನ ಸಂಪರ್ಕ ಮುಂತಾದ ಸೇವೆಗಳನ್ನು ಪಡೆಯಲು ಬಯಸುವ ಸಾರ್ವಜನಿಕರು ಹತ್ತಿರದ ಕಚೇರಿಗಳಿಗೆ ಭೇಟಿ ನೀಡುವುದು ಅನಿವಾರ್ಯವಾಗಿದೆ. ಆದ್ದರಿಂದ ಕೆಲವು ಸೇವೆಗಳಿಗೆ ಮಾತ್ರ ಆನ್ ಲೈನ್ ವ್ಯವಸ್ಥೆ ಅನ್ವಯಿಸಲಿದೆ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದವರಿಗೆ ದಾಖಲೆಗನ್ನು ಮನೆ ಬಾಗಿಲಿಗೆ ತಲುಪಿಸಲು ಅಂಚೆ ಇಲಾಖೆಯ ಜೊತೆ ಒಪ್ಪಂದ ಮಾಡಿಕೊಳ್ಳಲು ಆಡಳಿತ ಸುಧಾರಣಾ ಇಲಾಖೆ ಚಿಂತನೆ ನಡೆಸಿದೆ. ಆನ್ ಲೈನ್ ನಲ್ಲಿ ಯಾವ ಸೇವೆಗಳನ್ನು ಒದಗಿಸಬಹುದು ಎಂದು ಎಲ್ಲಾ ಇಲಾಖೆಗಳಿಂದ ಮಾಹಿತಿ ನೀಡುವಂತೆ ಸೂಚನೆ ಕಳುಹಿಸಲಾಗಿದೆ.
ಆನ್ ಲೈನ್ ಮೂಲಕ ಸೇವೆ ಒದಗಿಸುವುದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಜನರು ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿ, ನಂತರ ಮತ್ತೆ ಕಚೇರಿಗೆ ದಾಖಲೆ ತೆಗೆದುಕೊಂಡು ಹೋಗಲು ಆಗಮಿಸುವುದಕ್ಕೆ ತಡೆ ಬೀಳಲಿದೆ.












Click it and Unblock the Notifications