ಆಸ್ತಿ ಕಲಹ : ತಂದೆಯ ಕಣ್ಣನ್ನು ಕಿತ್ತು ಹಾಕಿದ ಪುತ್ರ!
ಬೆಂಗಳೂರು, ಆಗಸ್ಟ್ 28 : ಮಕ್ಕಳು ವೃದ್ದಾಪ್ಯದಲ್ಲಿ ನಮಗೆ ನೆರವಾಗುತ್ತಾರೆ ಎಂಬುದು ಪೋಷಕರು ಆಶಯ. ಆದರೆ, 65 ವರ್ಷದ ವೃದ್ದರೊಬ್ಬರ ಕಣ್ಣನ್ನು ಪುತ್ರನೇ ಕಿತ್ತುಹಾಕಿದ್ದಾನೆ. ಮಗನಿಂದಾಗಿ ಎರಡೂ ಕಣ್ಣುಗಳನ್ನು ಕಳೆದುಕೊಂಡಿರು ಹಿರಿಯ ಜೀವ ಆಸ್ಪತ್ರೆ ಸೇರಿದೆ.
ಬೆಂಗಳೂರಿನ ಬನಶಂಕರಿ ಸಮೀಪದ ಶಾಕಾಂಬರಿ ನಗರದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಆಸ್ತಿ ವಿಚಾರಕ್ಕೆ ಪರಮೇಶ್ ಮತ್ತು ಪುತ್ರ ಚೇತನ್ ನಡುವೆ ಜಗಳವಾಗಿದೆ. ಚೇತನ್ ತನ್ನ ಬೆರಳಿನಿಂದ ತಂದೆಯ ಕಣ್ಣಿನ ಗುಡ್ಡೆಯನ್ನು ಕಿತ್ತು ಹಾಕಿದ್ದಾನೆ. ಮತ್ತೊಂದು ಕಣ್ಣಿಗೂ ಹಾನಿ ಮಾಡಿದ್ದಾನೆ.
ಪರಮೇಶ್ ವಿಧಾನಸೌಧದ ಮುಖ್ಯ ಕಾರ್ಯದರ್ಶಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ಅವರು ನಿವೃತ್ತಿಯ ಜೀವನ ನಡೆಸುತ್ತಿದ್ದು, ಶಾಕಾಂಬರಿ ನಗರದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.

ಪರಮೇಶ್ ಅವರ 2ನೇ ಮಗ ಚೇತನ್ ಮಾದಕ ವಸ್ತುಗಳ ದಾಸನಾಗಿದ್ದ. ಹಣ ನೀಡುವಂತೆ ಪೋಷಕರನ್ನು ಆಗಾಗ ಪೀಡಿಸುತ್ತಿದ್ದ. ಇಂದು ಸಹ ಹಣ ಮತ್ತು ಆಸ್ತಿ ವಿಚಾರಕ್ಕೆ ಅಪ್ಪ-ಮಗನ ನಡುವೆ ಜಗಳ ನಡೆದಿದೆ.
ಚೇತನ ಪರಮೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಕಣ್ಣಿಗೆ ಕೈ ಹಾಕಿ ಗುಡ್ಡೆಯನ್ನು ತೆಗೆದಿದ್ದಾರೆ. ಮತ್ತೊಂದು ಕಣ್ಣಿಗೂ ಹಲ್ಲೆ ಮಾಡಿದ್ದಾರೆ. ನಂತರ ಮನೆಯಿಂದ ಪರಾರಿಯಾಗಲು ಯತ್ನಿಸಿದ ಅವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಪರಮೇಶ್ ಅವರನ್ನು ಜೆ.ಪಿ.ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡಿದ್ದಾರೆ. ಚೇತನ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.












Click it and Unblock the Notifications