'ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ'ಗೆ ಅಕ್ಕಯ್ ಪದ್ಮಶಾಲಿ, ಡಾ. ಮನೋಹರಚಂದ್ರ ಆಯ್ಕೆ
ಕರ್ನಾಟಕ
ಬೆಂಗಳುರು, ಏಪ್ರಿಲ್ 21 : ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಮಾಜಿಕ ಕಾರ್ಯಕರ್ತರಾದ ಡಾ. ಅಕ್ಕಯ್ ಪದ್ಮಶಾಲಿ ಹಾಗೂ ರೆವರೆಂಡ್ ಡಾ. ಡಿ. ಮನೋಹರಚಂದ್ರ ಪ್ರಸಾದ್ ಅವರಿಗೆ 'ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 2022ರ ಸಾಲಿನ 'ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ'ಗೆ ಸಾಮಾಜಿಕ ಕಾರ್ಯಕರ್ತರಾದ ಡಾ. ಅಕ್ಕಯ್ ಪದ್ಮಶಾಲಿ ಹಾಗೂ ರೆವರೆಂಡ್ ಡಾ. ಡಿ. ಮನೋಹರಚಂದ್ರ ಪ್ರಸಾದ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಯಾವ ರೀತಿಯ ಪ್ರಶಸ್ತಿ ನೀಡಲಾಗುತ್ತದೆ.
ಪ್ರಶಸ್ತಿಯು ತಲಾ ರೂ. 10 ಸಾವಿರಗಳ ನಗದು ಜೊತೆಗೆ ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನೂ ಒಳಗೊಂಡಿರುತ್ತದೆ.
ಡಾ. ಅಕ್ಕಯ್ ಪದ್ಮಶಾಲಿ ಪೂರ್ವಾಪರ ಮತ್ತು ಸಾಧನೆಗಳೇನು ?
ಡಾ. ಅಕ್ಕಯ್ ಪದ್ಮಶಾಲಿ ಅವರು ಪುರುಷನಾಗಿ ಹುಟ್ಟಿ ಮಹಿಳೆಯಾಗಿ ಪರಿವರ್ತೆನೆಯಾದವರು, ಅವರ ಬದುಕಿನ ಪಯಣ ದಿಟ್ಟ ನಡೆನುಡಿಗೆ ಸಾಕ್ಷಿ. ಬೀದಿಯಲ್ಲಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸಲು ಹೆಣಗಾಡಿದ್ದವರು. ಮಧ್ಯಮ ವರ್ಗದ ಕುಟುಂಬದಲ್ಲಿ ಗಂಡಸಾಗಿ ಹುಟ್ಟಿ ಹತ್ತನೆಯ ತರಗತಿಯವರೆಗೂ ಓದಿ ವ್ಯವಸ್ಥೆಯ ಕಿರುಕುಳಕ್ಕೆ ಒಳಗಾಗಿ ಮಹಿಳೆಯಾಗಿ ಬದಲಾದರು. ವಿಶ್ವದಾದ್ಯಂತ ಲೈಂಗಿಕತೆ ಮತ್ತು ಲಿಂಗ ವ್ಯವಸ್ಥೆ ಕುರಿತು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ರಾಜಕೀಯ ನಾಯಕರು, ಅಧಿಕಾರಿಗಳು, ನ್ಯಾಯಾಧೀಶರು ಮತ್ತು ಸಾಮಾಜಿಕ ಕಾರ್ಯಕರ್ತರೊಂದಿಗೆ ಜಾಗೃತಿ ಮೂಡಿಸಿ ಅವರ ಬದುಕಿಗೆ ಘನತೆಯನ್ನು ತಂದು ಕೊಟ್ಟಿದ್ದಾರೆ. ಕರ್ನಾಟಕ ರಾಜ್ಯವು ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಸರ್ಕಾರದ ನೀತಿಯೊಂದನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಐ.ಎ.ಎಸ್. ಅಧಿಕಾರಿಗಳಿಗೆ ಕಾರ್ಯಾಗಾರಗಳನ್ನು ನಡೆಸಿ ಸಮುದಾಯದ ಬಗ್ಗೆ ತಿಳುವಳಿಕೆಯನ್ನು ನೀಡಿದ್ದಾರೆ.

2014ರಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನ ಕುರಿತು ಅಂತರರಾಷ್ಟ್ರೀಯ ಸಮ್ಮೇಳನವೊಂದು ಜಪಾನ್ ದೇಶದ ಟೋಕಿಯೊದಲ್ಲಿ ಜರುಗಿತು. ಅದರಲ್ಲಿ ಭಾಗವಹಿಸಿದ ಏಕೈಕ ಭಾರತೀಯರು ಎಂಬ ಕೀರ್ತಿಗೆ ಅಕ್ಕಯ್ ಪದ್ಮಶಾಲಿ ಭಾಜನರಾಗಿದ್ದಾರೆ.

ಅಮೆರಿಕಾ ಸಂಯುಕ್ತ ಸಂಸ್ಥಾನವು ಲಿಂಗಾಧಾರಿತ ಹಿಂಸೆಯನ್ನು ವಿರೋಧಿಸುವ ನಾಯಕತ್ವ ಶಿಬಿರಕ್ಕೆ ಅಕ್ಕಯ್ಯ ಅವರನ್ನು ಆಹ್ವಾನಿಸಿತ್ತು. ಅಮೆರಿಕಾ ಸಂಯುಕ್ತ ಸಂಸ್ಥಾನದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬಂದಾಗ ಅವರ ಜೊತೆ ಸಂವಾದ ನಡೆಸುವ ಅವಕಾಶವೂ ಇವರಿಗೆ ಲಭ್ಯವಾಗಿತ್ತು. ಪಾರ್ಲಿಮೆಂಟನಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಕುರಿತ ಚರ್ಚೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಸೋನಿಯಾಗಾಂಧಿ ಮತ್ತು ಆಸ್ಕರ್ ಫರ್ನಾಂಡೀಸ್ ಅವರು ಪಾಲ್ಗೊಂಡು ಅದನ್ನು ಬೆಂಬಲಿಸುವಲ್ಲಿ ಅಕ್ಕಯ್ ಪ್ರಮುಖ ಪಾತ್ರ ವಹಿಸಿದ್ದರು.
ಡಾ. ಅಕ್ಕಯ ಪದ್ಮಶಾಲಿಗೆ ಒಲಿದುಬಂದಿವೆ ಸಾಲು ಸಾಲು ಪ್ರಶಸ್ತಿ
ಅಕ್ಕಯ ಅವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ಗಾಯನಕ್ಕಾಗಿ ಲಿಮ್ಕಾ ಅವಾರ್ಡ್, ಬಿಸಿನೆಸ್ ಲೈನ್ ಪತ್ರಿಕೆಯ ಚೇಂಚ್ ಮೇಕರ್ ಪ್ರಶಸ್ತಿ, ಇಂಡಿಯ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಷನ್, ಸ್ವಿಜರ್‌ಲ್ಯಾಂಡ್ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ. ಅಕ್ಕಯ ಪದ್ಮಶಾಲಿ ಅವರ ಆತ್ಮಕಥೆ ಕನ್ನಡ ಸಾರಸ್ವತ ಲೋಕದಲ್ಲಿ ಲಿಂಗಸಮಾನತೆಯನ್ನು ಕುರಿತ ಹೊಸ ವಾಗ್ದಾದವನ್ನು ಹುಟ್ಟು ಹಾಕಿದೆ. ಇವರ ಜನಪರ ಮತ್ತು ಲಿಂಗ ಸಮಾನತೆಯ ಕಾಳಜಿಯನ್ನು ಗೌರವಿಸಿ ಕನ್ನಡ ಸಾಹಿತ್ಯ ಪರಿಷತ್ತು ಫಾದರ್ ಚಸರಾ ಸಂಸ್ಕೃತಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸುತ್ತಿದೆರ.
ರೆವರೆಂಡ್ ಡಾ. ಡಿ. ಮನೋಹರ ಚಂದ್ರ ಪ್ರಸಾದ್
ರೆವರೆಂಡ್ ಡಾ. ಡಿ. ಮನೋಹರ ಚಂದ್ರ ಪ್ರಸಾದ್ ಶಿವಮೊಗ್ಗ ಜಿಲ್ಲೆಯ ಸಾಗರದವರು. ತಂದೆ ದೇವಪ್ರಸಾದ್ ಮತ್ತು ತಾಯಿ ಮ್ಯಾಗ್ದಲೀನ್ ಪುಷ್ಪ ಮೇರಿ. ಸದ್ಯ ಸಿಎಸ್‌ಐ, ಕರ್ನಾಟಕ ಸೆಂಟ್ರಲ್ ಡಯಾಸಿಸ್‌ನ ಮಾಜಿ ಮುಖ್ಯಸ್ಥರು. ಪ್ರಕಾಶ್ ಅಂಬೇಡ್ಕರ್ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಜೊತೆ ಗುರುತಿಸಿಕೊಂಡಿರುವ ದಲಿತ ಕ್ರಿಶ್ಚಿಯನ್ ಒಕ್ಕೂಟದ ಸಂಚಾಲಕರಾಗಿರುವ ಮಹೋಹರ್‌ಚಂದ್ರ ಪ್ರಸಾದ್, ಕರ್ನಾಟಕದ ಬೈಬಲ್ ಯೂನಿಯನ್‌ನ ಅಧ್ಯಕ್ಷರು ರಚನಾ ಪ್ರಕಾಶನ ಸಂಸ್ಥೆಯ ಮುಖ್ಯಸ್ಥರು.
ಮನೋಹರ್ ರವರು ಸೊಸೈಟಿ ಫಾರ್ ಏಷ್ಯನ್ ಮತ್ತು ಆಫ್ರಿಕನ್ ಥಿಯಾಲಜಿಸ್‌ನ ಉಪಾಧ್ಯಕ್ಷರು. ಮಿಗಿಲಾಗಿ ತಮ್ಮ ಜೀವನದುದ್ದಕ್ಕೂ ಕ್ರೈಸ್ತ ಧರ್ಮದಲ್ಲಿರುವ ಜಾತಿ ಪದ್ಧತಿಯೊಡನೆ ಸೆಣಸಿದವರು. ದಲಿತ ಕ್ರಿಶ್ಚಿಯನ್ನರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟದಲ್ಲಿ ತೊಡಗಿದ್ದ ಮನೋಹರಚಂದ್ರ ಪ್ರಸಾದ್, ತಳಸಮುದಾಯಗಳ ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ. ದಲಿತ ಕ್ರೈಸ್ತ ಪ್ರಜ್ಞೆ, ಸುಣ್ಣ ಹಚ್ಚಿದ ಸಮಾಧಿಗಳು, ಪ್ರತಿ ಸಂಸ್ಕೃತಿ: ಅಂಟೊನಿಯಾಗ್ರಾಷಿಯ ಚಿಂತನೆಗಳು ಮೊದಲಾದ ಸಬಾಲ್ಟನ್ ಚಿಂತನೆಗಳನ್ನು ಕನ್ನಡಕ್ಕೆ ಪರಿಚಯಿಸಿದ ಮುಂಗೋಳಿಗಳಲ್ಲಿ ಒಬ್ಬರು. ಸಿಎಸ್‌ಐ ಚರ್ಚುಗಳಲ್ಲಿ ಕನ್ನಡ ಮತ್ತು ಕನ್ನಡಿಗರ ಹಕ್ಕುಗಳಿಗಾಗಿ ದೀರ್ಘಕಾಲದ ಹೋರಾಟದಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದವರಲ್ಲಿ ಮನೋಹರಚಂದ್ರ ಪ್ರಸಾದ್ ಪ್ರಮುಖರು.
ಈ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿಯ ಸಭೆಯಲ್ಲಿ ಕನ್ನಡಪರ ಚಿಂತಕರಾದ ರೀಟಾ ರೀನಿ, ರಫಾಯಲ್ ರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ ನೇ.ಭ.ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್‌ಪಾಂಡು ಉಪಸ್ಥಿತರಿದ್ದರು.












Click it and Unblock the Notifications