ರೈತ ಮುಖಂಡ ಕುರುಬೂರು ಶಾಂತಕುಮಾರ್‌ಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ
ಬೆಂಗಳೂರು, ಫೆಬ್ರವರಿ 16: ಅಪಘಾತಕ್ಕೆ ಒಳಗಾಗಿದ್ದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾಟಿಯಾಲದಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಇಂದು (ಫೆಬ್ರವರಿ 16) ಅವರನ್ನು ಪಂಜಾಬ್‌ನ ಪಟಿಯಾಲದಿಂದ ಏರ್ ಆಂಬುಲೆನ್ಸ್ ಮೂಲಕ ಕರೆ ತರಲಾಗಿದೆ. ಕೇಂದ್ರ ಸರ್ಕಾರ ಕೃಷಿ ಬೆಳೆಗಳಿಗೆ ಎಂಎಸ್‌ಪಿ ಗ್ಯಾರಂಟಿ ಕಾನೂನು ಜಾರಿ ಬಗ್ಗೆ ಕೇಂದ್ರ ಸರ್ಕಾರದ ಸಭೆಯಲ್ಲಿ ಭಾಗವಹಿಸಲು ಕಾರಿನಲ್ಲಿ ಚಂಡಿಗಡಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು.
ಪಂಜಾಬ್‌ನ ಪಟಿಯಾಲದ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಇದೀಗ ಬೆಂಗಳೂರಿಗೆ ಕರೆ ತರಲಾಗಿದ್ದು, ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ದೆಹಲಿಯ ಕನೋಲಿ ಬಾರ್ಡರ್‌ನಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಸಂಬಂಧಿಸಿದ ಸಭೆಗೆ ಕುರುಬೂರು ಶಾಂತಕುಮಾರ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಪಟಿಯಾಲ ಬಳಿ ಈ ಅಪಘಾತ ಸಂಭವಿಸಿದೆ. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರಲ್ಲಿದ್ದ ತಮಿಳುನಾಡಿನ ರೈತ ಮುಖಂಡರೊಬ್ಬರಿಗೂ ಗಾಯವಾಗಿದ್ದು, ಕೂಡಲೇ ಅವರನ್ನು ಸರ್ಕಾರಿ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಇನ್ನು ಈ ಕಾರ್ಯಕ್ಕೆ ಸಹಕರಿಸಿದ ಸಚಿವ ವಿ.ಸೋಮಣ್ಣ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಪಂಜಾಬ್ ರಾಜ್ಯ ಸರ್ಕಾರದ ಸಿಎಂ ಸಲಹೆಗಾರ ಬಲ್ತೆಜ್ ಪನ್ನು ಅವರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಆರ್ ಅಶೋಕ್ ಸೇರಿದಂತೆ ಹಲವರು ತಿಳಿಸಿದ್ದಾರೆ. ಇನ್ನು ಕುರುಬೂರು ಶಾಂತ್‌ಕುಮಾರ್ ಅವರು ಸದ್ಯ ಈಗ ಬೆಂಗಳೂರಿನ ಎಚ್ಎಎಲ್ ಪಕ್ಕದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇವರ ಚಿಕಿತ್ಸೆಯ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ ಎಂದು ಭರವಸೆ ನೀಡಿದ್ದಾರೆ.
ಮೂರು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಶಾಂತಕುಮಾರ್ ಅವರು ಗಾಯಗೊಂಡು ಪಟಿಯಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಷಯ ತಿಳಿದ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ಏರ್ ಆಂಬುಲೆನ್ಸ್ ಮೂಲಕ ಶಾಂತಕುಮಾರ್ ಅವರನ್ನು ಬೆಂಗಳೂರಿಗೆ ಕರೆತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಈ ಹಿನ್ನೆಲೆ ದೆಹಲಿ ನಿವಾಸಿ ಆಯುಕ್ತರಾದ ಇಂಕೊಂಗ್ಲ ಜಮೀರ್ ಅವರು ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪಟಿಯಾಲದ ಆಸ್ಪತ್ರೆ ವೈದ್ಯರ ಜೊತೆ ಸತತ ಸಂಪರ್ಕದಲ್ಲಿದ್ದರು. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅಧಿಕಾರಿಗಳು ನಿನ್ನೆ ಏರ್ ಆಂಬುಲೆನ್ಸ್ ಸಜ್ಜುಗೊಳಿಸಿದ್ದರು. ಇಬ್ಬರು ಸಹಾಯಕರು ಹಾಗೂ ವೈದ್ಯರ ತಂಡದೊಂದಿಗೆ ಇಂದು ಶಾಂತಕುಮಾರ್ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.
ಕುರುಬೂರು ಶಾಂತಕುಮಾರ್ ಅವರನ್ನು ಬೆಂಗಳೂರಿಗೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಿರುವುದಾಗಿ ಸಿಎಂ ಸಿದ್ದರಾಮಯ್ಯ ಭಾನುವಾರ ಬೆಳಗ್ಗೆ ಟ್ವೀಟ್ ಮಾಡಿದ್ದರು. ಇದೀಗ ಶಾಂತಕುಮಾರ್ ಅವರನ್ನು ಕರೆತಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕುರುಬೂರು ಶಾಂತ್‌ಕುಮಾರ್ ಅವರು ಶೀಘ್ರವೇ ಗುಣಮುಖರಾಗಿ ಬರಲಿದೆ ಎಂದು ಆರೈಸಿದ್ದಾರೆ.
"ಪಂಜಾಬಿನ ಪಟಿಯಾಲ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರಲು ನಮ್ಮ ಸರ್ಕಾರ ವ್ಯವಸ್ಥೆ ಮಾಡಿದೆ. ಏರ್ ಆಂಬುಲೆನ್ಸ್ ಮೂಲಕ ಶಾಂತಕುಮಾರ್ ಅವರನ್ನು ಚಂಡೀಗಡದಿಂದ ಬೆಂಗಳೂರಿಗೆ ಕರೆತಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ," ಎಂದು ಸಿಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದರು.
ರಸ್ತೆ ಅಪಘಾತದಲ್ಲಿ ಶಾಂತಕುಮಾರ್ ಅವರ ಬೆನ್ನು ಮೂಳೆಗೆ ಗಂಭೀರ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದರು. ಶಾಂತಕುಮಾರ್ ಅವರಿಗೆ ಪಟಿಯಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬೆಳಗ್ಗೆ ತಿಳಿದುಬಂದಿತ್ತು. ಇದೀಗ ಅವರನ್ನು ಬೆಂಗಳೂರಿಗೆ ಕರೆತಂದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.












Click it and Unblock the Notifications