ಸರ್ಕಾರದ ವಿರುದ್ಧ ಕಪ್ಪು ಬಾವುಟ: ರೈತ ನಾಯಕ ಕುರುಬೂರು ಶಾಂತಕುಮಾರ್ ಪೊಲೀಸ್ ವಶಕ್ಕೆ
ಬೆಂಗಳೂರು, ಡಿ. 13: ರಾಜ್ಯ ಸರ್ಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ ರೈತ ಮುಖಂಡ, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಜಿ20 ಶೃಂಗಸಭೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲು ರೈತರು ಮುಂದಾಗಿದ್ದರು. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಬ್ಬು ಬೆಳೆಗಾರರ ನಿರಂತರ ಧರಣಿ 22ನೇ ದಿನಕ್ಕೆ ಕಾಲಿಟ್ಟಿದೆ.

ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡಬೇಕಾದ ಭಾರಿ ಮೊತ್ತದ ಹಣ ಬಾಕಿ ಉಳಿಸಿಕೊಂಡಿವೆ ಎಂದು ರೈತರು ಆರೋಪಿಸಿದ್ದಾರೆ. ರಾಜ್ಯದ 50ರಷ್ಟು ಕಬ್ಬು ಬೆಳೆಯುವ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ ರೈತರ ಕಬ್ಬು ದರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸುವ ನೈತಿಕತೆ ಸರ್ಕಾರಕ್ಕೆ ಇಲ್ಲ ಎಂದು ಏಕೆ ಎಂದು ಕುರುಬೂರು ಶಾಂತಕುಮಾರ್ ಕಿಡಿಕಾರಿದ್ದಾರೆ.
ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚವನ್ನು, ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ ಸುಲಿಗೆ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲವೇ? ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಸರ್ಕಾರದ ತೆರಿಗೆ ಹಣದಿಂದ ಹೆಚ್ಚುವರಿ ಮಾಡಲಿ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಸಾಂತಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

"ಚಿಕ್ಕ ಚಿಕ್ಕ ತಪ್ಪುಗಳಿಗೆ ಜನರನ್ನ ಜೈಲಿಗೆ ಕಳಿಸುವ ಸರ್ಕಾರಕ್ಕೆ ರೈತರಿಗೆ ಹಣ ಪಾವತಿಯಲ್ಲಿ ಮೋಸ, ತೂಕದಲ್ಲಿ ಮೋಸ, ಇಳುವರಿಯಲ್ಲಿ ಮೋಸ ಮಾಡುವ ಸಕ್ಕರೆ ಕಾರ್ಖಾನೆಗಳ ಮಾಲಿಕರ ವಿರುದ್ಧ ದೂರು ದಾಖಲಿಸಲು ಏಕೆ ಆಗುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications