ಕುಮಾರಸ್ವಾಮಿ ಸುಳ್ಳು ಆಸ್ತಿ ಪ್ರಮಾಣ ಪತ್ರ ಸಲ್ಲಿಸಿದ್ದಾರಂತೆ
ಬೆಂಗಳೂರು, ಜ.20: ಆಸ್ತಿಯ ಬಗ್ಗೆ ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷ ನಾಯಕ ಮತ್ತು ರಾಮನಗರ ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗಕ್ಕೆ ನಾಗಲಕ್ಮೀ ಬಾಯಿ ಎಂಬುವವರು ದೂರು ಸಲ್ಲಿಸಿದ್ದಾರೆ. ಜನಪ್ರತಿನಿಧಿ ಕಾಯ್ದೆ 125/ಎ ಅನ್ನು ಕುಮಾರಸ್ವಾಮಿ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸೋಮವಾರ ಪತ್ರಕರ್ತೆ ನಾಗಲಕ್ಮೀ ಬಾಯಿ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ದೂರು ಸಲ್ಲಿಸಿದ್ದಾರೆ. 2013ರ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಕುಮಾರಸ್ವಾಮಿ ಅವರು ಸುಳ್ಳು ಆಸ್ತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕುಮಾರಸ್ವಾಮಿ ಅವರು ರಾಧಿಕಾ ಕುಮಾರಸ್ವಾಮಿ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಆದರೆ, ಅವುಗಳನ್ನು ಮುಚ್ಚಿಟ್ಟು ತಮಗೆ ಕಡಿಮೆ ಆಸ್ತಿ ಇದೆ ಎಂದು ಚುನಾವಣಾ ಆಯೋಗಕ್ಕೆ ಪ್ರಮಾ ಪತ್ರ ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕುಮಾರಸ್ವಾಮಿ ಅವರು ಆಯೋಗಕ್ಕೆ ಸುಳ್ಳು ಪ್ರಮಾಣ ಪತ್ರ ನೀಡುವ ಮೂಲಕ ಜನಪ್ರತಿನಿಧಿ ಕಾಯ್ದೆ 125/ಎ ಅನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ನಾಗಲಕ್ಷ್ಮೀ ಬಾಯಿ ಹೇಳಿದ್ದಾರೆ.
ಚುನಾವಣಾ ಆಯೋಗ ಕುಮಾರಸ್ವಾಮಿ ಅವರ ಆಸ್ತಿ ಪ್ರಮಾಣ ಪತ್ರದ ಬಗ್ಗೆ ತನಿಖೆ ನಡೆಸಬೇಕು ಮತ್ತು ಸರಿಯಾದ ಪ್ರಮಾಣ ಪ್ರತ ಸಲ್ಲಿಸುವಂತೆ ಸೂಚನೆ ನೀಡಬೇಕು. ಜನಪ್ರತಿನಿಧಿ ಕಾಯ್ದೆ ಉಲ್ಲಂಘಿಸಿದ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗಲಕ್ಮೀ ಬಾಯಿ ಒತ್ತಾಯಿಸಿದ್ದಾರೆ. []
ರಾಧಿಕಾ ಅವರನ್ನು ತಮ್ಮ ಎರಡನೇ ಪತ್ನಿ ಎಂದು ಕುಮಾರಸ್ವಾಮಿ ಅವರು ಒಪ್ಪಿಕೊಂಡಿದ್ದಾರೆ. ರಾಧಿಕಾ ಅವರಿಗೆ ಎರಡನೇ ಪತ್ನಿಯ ಸ್ಥಾನವನ್ನು ನೀಡಿರುವ ಅವರು, ಇತ್ತೀಚೆಗಷ್ಟೇ ಮಗಳಾದ ಶಮಿಕಾ ಕುಮಾರಸ್ವಾಮಿಯ ಹುಟ್ಟುಹಬ್ಬವನ್ನು ಆಚರಿಸಿದ್ದರು. ಹೀಗಾಗಿ ಎರಡನೇ ಪತ್ನಿ ಆಗಿರುವ ರಾಧಿಕಾ ಕುಮಾರಸ್ವಾಮಿ ಅವರ ವ್ಯವಹಾರಗಳ ಕುರಿತಾಗಿ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿಲ್ಲ. ಇದು ಕಾನೂನು ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಎಷ್ಟು ಆಸ್ತಿ ಘೋಷಿಸಿದ್ದರು : 2013ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ದಂಪತಿ ತಮ್ಮ ಬಳಿ 123 ಕೋಟಿ ಆಸ್ತಿ ಇದೆ ಎಂದು ಘೋಷಿಸಿದ್ದರು.