Fake News: ಗರ್ಭಿಣಿ ಸಾವು, ESI ಆಸ್ಪತ್ರೆ ಸಂಪೂರ್ಣ ಬಂದ್?
ಬೆಂಗಳೂರು, ಏಪ್ರಿಲ್ 21: ನಗರದ ಪ್ರತಿಷ್ಠಿತ ESI ಆಸ್ಪತ್ರೆ ಮತ್ತೆ ಸುದ್ದಿಯಲ್ಲಿದೆ. ಆಸ್ಪತ್ರೆ ವೈದ್ಯರ ದಿಢೀರ್ ವರ್ಗಾವಣೆ ನಂತರ ಒಂದು ವರ್ಗದ ವೈದ್ಯರು, ನರ್ಸ್ ಆಸ್ಪತ್ರೆಯಲ್ಲೇ ಕ್ವಾರಂಟೈನ್ ನಲ್ಲಿರಲು ಮನವಿ ಮಾಡಿದ್ದರು. ಇದೆಲ್ಲವನ್ನು ಬಲ್ಲವರು ಯಾರೋ ಬೇಕಂತಲೇ ಸುಳ್ಳು ಸುದ್ದಿಯನ್ನು ಹೆಣೆದು ವಾಟ್ಸಾಪ್ ಗಳಲ್ಲಿ ಹಂಚಿದ್ದಾರೆ.
ಇಎಸ್‌ಐ(ಎಂಪ್ಲಾಯೀಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೊರೇಷನ್) ಆಸ್ಪತ್ರೆಯ ವೈದ್ಯರು, ನರ್ಸ್ ಗಳು ಕ್ವಾರಂಟೈನ್ ನಲ್ಲಿದ್ದಾರೆ ಎಂಬ ಸುದ್ದಿ ಹಬ್ಬಿ ಸಹಜವಾಗಿ ರಾಜಾಜಿನಗರ ಸುತ್ತ ಮುತ್ತಲ ಪ್ರದೇಶಗಳಲ್ಲಿ ಆತಂಕ ಮೂಡಿತ್ತು. ಆದರೆ, ಇದೆಲ್ಲವೂ ಸುಳ್ಳು ಎಂದು ರೋಗಿಗೆ ಸಂಬಂಧಪಟ್ಟ ವ್ಯಕ್ತಿ ಹಾಗೂ ಆಸ್ಪತ್ರೆ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.
ಸುಳ್ಳು ಸುದ್ದಿ : Rajajinagar ESI hospital doctors n staff , nearly 40 plus under quarantine n part of the hospital, has been closed...They have come in contact with a lady who's expired now n her husband is found to be covid positive...🤷♂️

ರಾಜಾಜಿನಗರದ ಇಎಸ್ಐ ಆಸ್ಪತ್ರೆಯ 40ಕ್ಕೂ ಅಧಿಕ ವೈದ್ಯರು, ನರ್ಸ್ ಆಸ್ಪತ್ರೆಯಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ. ನಿನ್ನೆ ರಾತ್ರಿ ಕೊವಿಡ್19 ಪಾಸಿಟಿವ್ ಆಗಿದ್ದ ಮಹಿಳೆ ಮೃತ ಪಟ್ಟಿದ್ದು, ಆಕೆ ಹಾಗೂ ಆಕೆಯ ಪತಿಯ ಸಂಪರ್ಕಕ್ಕೆ ವೈದ್ಯಕೀಯ ಸಿಬ್ಬಂದಿ ಬಂದಿರಬಹುದು ಎಂದು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಸತ್ಯಾಸತ್ಯತೆ: ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿರುವ ಇಎಸ್‌ಐ ಆಸ್ಪತ್ರೆ ನರ್ಸ್ ಗಳು ದಿನ ಡ್ಯೂಟಿ ಮುಗಿಸಿ ಮನೆಗೆ ಹೋಗಿ ಬಂದು ಮಾಡುತ್ತಿದ್ದರು. ಆದರೆ, ಇದರಿಂದ ಮನೆಯವರಿಗೆ ಸೋಂಕು ತಗುಲಿದರೆ ಎಂಬ ಆತಂಕ ಎದುರಾಗಿತ್ತು. ಹೀಗಾಗಿ, ಐಸೊಲೇಷನ್ ವಾರ್ಡ್ ನಲ್ಲಿರುವ ನೂರಕ್ಕೂ ಅಧಿಕ ಮಂದಿಯ ಕ್ವಾರಂಟೈನ್ ಮುಗಿಯುವ ತನಕ ಆಸ್ಪತ್ರೆಯಲ್ಲೇ ವೈದ್ಯರು, ನರ್ಸ್ ಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ, ಇದಕ್ಕೆ ಆಡಳಿತ ಮಂಡಳಿ ಒಪ್ಪಿರಲಿಲ್ಲ.
ಈಗ ಮೇಲ್ಕಂಡ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಆದರೆ, ಆ ಸಂದೇಶದಲ್ಲಿರುವಂತೆ ಗರ್ಭಿಣಿಯೊಬ್ಬರು ಮೃತರಾಗಿರುವುದು ನಿಜ. ಆದರೆ, ಆಕೆಗೆ ಚಿಕಿತ್ಸೆ ನೀಡಿದ ವೈದ್ಯೆ , ನರ್ಸ್ ಗಳು ಕ್ವಾರಂಟೈನ್ ನಲ್ಲಿಲ್ಲ. ಆಸ್ಪತ್ರೆಯೂ ಮುಚ್ಚಿಲ್ಲ.
ಸತ್ಯಾಸತ್ಯತೆ: ಮೃತ ಗರ್ಭಿಣಿಯ ಶವಕ್ಕಾಗಿ ಕಾದಿರುವ ಆಕೆ ಪತಿ ನೋವಿನಲ್ಲೇ ತಮ್ಮ ಕುಟುಂಬದ ಬಗ್ಗೆ ಬಂದಿರುವ ಈ ಸುಳ್ಳು ಸುದ್ದಿ ಬಗ್ಗೆ ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡುತ್ತಾ ಸ್ಪಷ್ಟನೆ ನೀಡಿದ್ದಾರೆ. ಡಾ. ನಂದಿನಿ ಅವರು ನನ್ನ ಪತ್ನಿಗೆ ಚಿಕಿತ್ಸೆ ನೀಡುತ್ತಿದ್ದರು. ಕಳೆದ ಕೆಲವು ತಿಂಗಳಿನಿಂದ ಇಲ್ಲಿಗೆ ಬರುತ್ತಿದ್ದೆವು, ಆಕೆಗೆ ಉಸಿರಾಟ ತೊಂದರೆ ಇತ್ತು. ಶ್ವಾಸಕೋಶದ ತೊಂದರೆ ಅಧಿಕವಾಗಿ ಚಿಕಿತ್ಸೆ ಫಲಕಾರಿಯಾಗಲಿಲ್ಲ. ನಮ್ಮ ಹಳೆ ಮನೆ ವಿಳಾಸ ಪಾದರಾಯನ ಪುರ ಎಂದು ಆಸ್ಪತ್ರೆಯಲ್ಲಿ ನಮೂದಾಗಿದೆ. ಈಗ ನಾವಿರೋದು ಹಳೆಗುಡ್ಡದ ಹಳ್ಳಿ ಬಳಿಯಲ್ಲಿ, ಶ್ವಾಸಕೋಶದ ತೊಂದರೆ, ಪಾದರಾಯನ ಪುರ ಆಡ್ರೆಸ್ ನೋಡಿಕೊಂಡು ಕೋವಿಡ್ 19 ಟೆಸ್ಟ್ ಗೆ ಕಳಿಸಿದ್ದರು. ಆದರೆ, ಪರೀಕ್ಷೆ ಫಲಿತಾಂಶ ನೆಗಟಿವ್ ಬಂದಿದೆ. ನಾನು ಎರಡು ದಿನದಿಂದ ಶವಕ್ಕಾಗಿ ಕಾದಿದ್ದೇನೆ, ಯಾರೋ ಸುಮ್ಮನೆ ಭಯ ಹುಟ್ಟಿಸಿದ್ದಾರೆ ಎಂದರು.












Click it and Unblock the Notifications