ಮುರುಘಾ ಸ್ವಾಮೀಜಿ ಪರ ವಕಾಲತ್ತು: ಸಿಪಿಐ(ಎಂ) ನಿಂದ ವಕೀಲ ಶಂಕರಪ್ಪ ಉಚ್ಚಾಟನೆ
ಬೆಂಗಳೂರು, ಸೆಪ್ಟೆಂಬರ್ 2: ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಆರೋಪಿ ಮುರುಘಾ ಸ್ವಾಮೀಜಿ ಪರವಾಗಿ ನಿಂತ ಹಿರಿಯ ವಕೀಲರಾದ ಶಂಕರಪ್ಪರವರನ್ನು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ) ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಮುರುಘಾ ಮಠದಲ್ಲಿ ನಡೆದ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿ, ಪಕ್ಷದ ಸದಸ್ಯರು ಹಾಗೂ ಹಿರಿಯ ವಕೀಲರಾದ ಶಂಕರಪ್ಪರವರು ಆರೋಪಿ ಪರ ನಿಂತುಕೊಂಡು ಪಕ್ಷದ ನಿಲುಮೆಗೆ ಹಾಗೂ ಧೋರಣೆಗೆ ವಿರುದ್ಧವಾಗಿ ನಡೆದುಕೊಂಡ ಕಾರಣದಿಂದ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿಯು, ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿದೆ.
ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶ್ರೀಗಳನ್ನು ನಿನ್ನೆ ರಾತ್ರಿ 10.30ರ ಸುಮಾರಿಗೆ ಬಂಧಿಸಲಾಗಿದೆ. ಬಂಧನದ ಬಳಿಕ ಚಳ್ಳಿಕೆರೆ ಡಿವೈಎಸ್‌ಪಿ ಕಚೇರಿಗೆ ಅವರನ್ನು ಕರೆದೊಯ್ದು ವಿಚಾರಣೆ ನಡೆಸಲಾಗುತ್ತದೆ. ಬಳಿಕ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಶ್ರೀಗಳ ವೈದ್ಯಕೀಯ ತಪಾಸಣೆ ಕೂಡ ಮಾಡಲಾಗುತ್ತದೆ. ಪ್ರಕರಣದಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈಗಾಗಲೇ ಮಠದ ಮಹಿಳಾ ವಾರ್ಡನ್ ಅನ್ನು ವಿಚಾರಣೆಗೆ ವಶಕ್ಕೆ ಪಡೆಯಲಾಗಿದ್ದು, ಶಿವಮೂರ್ತಿ ಶ್ರೀಗಳನ್ನೂ ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಮೂವರ ಹೆಸರಿದ್ದು ಅವರ ಬಂಧನವಾಗುವ ಸಾಧ್ಯತೆ ಇದೆ. ಮೂರನೇ ಆರೋಪಿ ಮಠದ ಉತ್ತರಾಧಿಕಾರಿ ಬಸವಾಧಿತ್ಯ, ನಾಲ್ಕನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ, ಇನ್ನೂ ಐದನೇ ಆರೋಪಿ ವಕೀಲ ಗಂಗಾಧರಯ್ಯ ಅವರ ಬಂಧನವಾಗಬೇಕಿದೆ.

ಶತಮಾನಗಳ ಇತಿಹಾಸ ಹೊಂದಿರುವ ಮಠಕ್ಕೆ ಸದ್ಯ ಇಂತಹ ಕಪ್ಪು ಚುಕ್ಕಿ ಬಿತ್ತಲ್ಲ ಎಂದು ಭಕ್ತಾಧಿಗಳು ಬೇಸರಗೊಂಡಿದ್ದಾರೆ. ದೇಶದೆಲ್ಲಡೆ ಹೆಸರಾದ ಮಠದ ಸ್ವಾಮಿಗಳ ವಿರುದ್ಧ ಇಂಹತ ಆರೋಪವನ್ನು ಭಕ್ತರು ಊಹಿಸಿಕೊಳ್ಲಲಾಗುತ್ತಿಲ್ಲ. ಆತಂಕ, ಬೇಸರ, ಎಲ್ಲವನ್ನೂ ಭಕ್ತರು ಅನುಭವಿಸುತ್ತಿದ್ದಾರೆ. ಹಲವಾರು ಸಂಸ್ಥೆಗಳನ್ನು ಹೊಂದಿರುವ ನೂರಾರು ಕೋಟಿಯ ವ್ಯವಹಾರಗಳೂ ಈ ಮಠದಲ್ಲಿ ನಡೆಯುತ್ತವೆ. ಆದ್ದರಿಂದ ಈ ಪ್ರಕರಣ ಅತ್ಯಂತ ಸೂಕ್ಷ್ಮತೆಯನ್ನು ಪಡೆದುಕೊಂಡಿದೆ.
ಚಿತ್ರದುರ್ಗ ಎಸ್‌ಪಿ ಪರಶುರಾಮ್ ಈ ಬಗ್ಗೆ ಮಾತನಾಡಿ, 'ಇಬ್ಬರು ಆರೋಪಿಗಳನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ' ಎಂದು ಹೇಳಿದರು. ವೈದ್ಯಕೀಯ ತಪಾಸಣೆ ಬಳಿಕ ಜಡ್ಜ್ ಮುಂದೆ ಹಾಜರುಪಡಿಸುತ್ತೇವೆ ಎಂದು ಎಸ್‌ಪಿ ಪರಶುರಾಮ್ ಹೇಳಿದ್ದಾರೆ.












Click it and Unblock the Notifications