Bengaluru Tunnel Road: ಮುಂದಿನ ತಿಂಗಳು 'ಮೊದಲ ಟನಲ್ ರಸ್ತೆ' ಯೋಜನೆ ಕಾಮಗಾರಿ ಆರಂಭ?
ಬೆಂಗಳೂರು, ಏಪ್ರಿಲ್ 17: ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಬೃಹತ್ ಟನಲ್ ರಸ್ತೆ ಯೋಜನೆಗೆ ರಾಜ್ಯ ಸರ್ಕಾರ ಕೈ ಹಾಕಿದೆ. ಒಂದಷ್ಟು ವಿರೋಧದ ನಡುವೆ ಸರ್ಕಾರ ಯೋಜನೆ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಿದೆ. ಈ ಮೂಲಕ ಯೋಜನೆಯಿಂದ ಹಿಂದೆ ಸರಿಯಲ್ಲ ಎಂದಿರುವ ಸರ್ಕಾರ, ಇದೀಗ ಡಿಪಿಆರ್ ಪರಿಶೀಲನೆಗೆ 'ತಜ್ಞರ ಸಮಿತಿ ರಚನೆ' ಮಾಡಿ ಗಡುವು ನೀಡಿವೆ. ಈ ಮೂಲಕ ಯೋಜನೆ ಕಾಮಗಾರಿ ಆರಂಭವನ್ನು ಶೀಘ್ರವೇ ಆರಂಭಿಸುವ ಸುಳಿವು ನೀಡಿದೆ.
ಬ್ರ್ಯಾಂಡ್ ಬೆಂಗಳೂರು ಉಪಕ್ರಮದಡಿ ಬೆಂಗಳೂರು ಸಂಚಾರ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಬ್ಬಾಳ ಎಸ್ಟಿಮ್ ಮಾಲ್‌ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಬರೋಬ್ಬರಿ 18 ಕಿಲೋ ಮೀಟರ್‌ನಷ್ಟು ಸುರಂಗ ರಸ್ತೆ ನಿರ್ಮಾಣ ಮಾಡಲು ಮುಂದಾಗಿದೆ. ಯೋಜನೆಗಾಗಿ ಡಿಪಿಆರ್ ಸಿದ್ದಪಡಿಸಲಾಗಿದೆ. ಒಟ್ಟು 17,000 ಕೋಟಿ ರೂಪಾಯಿ ಯೋಜನೆ ಇದಾಗಿದೆ.

ತಜ್ಞರ ಸಮಿತಿಯಿಂದ ವರದಿ..
ಇದೀಗ ತಜ್ಞರ ಸಮಿತಿ ರಚನೆಯಾಗಿದೆ. ಆ ಸಮಿತಿ ಸದಸ್ಯರೆಲ್ಲರು ಮುಂದಿನ ಮೂರು ವಾರದೊಳಗೆ ಡಿಪಿಆರ್ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿದೆ. ಸಲ್ಲಿಕೆಯಾಗುವ ವರದಿಯು ಸುರಂಗ ಯೋಜನೆಗೆ ಸದರಿ ಡಿಪಿಆರ್ ಸರಿ ಇದೆಯಾ? ಇಲ್ಲವೇ?, ಒಂದಷ್ಟು ಮಾರ್ಪಾಡು ಆಗತ್ಯವಿದೆಯೇ, ಯಾವೆಲ್ಲ ಅಂಶಗಳನ್ನು ಸೇರಿಸಬೇಕು. ಸಂಚಾರಕ್ಕೆ ಪೂರಕವಾಗುವಂತೆ ಡಿಪಿಆರ್ ಇದೆಯಾ, ಯೋಜನೆ ನಿರ್ಮಾಣ ಕಾರ್ಯಸಾಧುವೆ? ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡ ವರದಿಯನ್ನು ಸಮಿತಿ ಸಿದ್ಧಪಡಿಸಬಹುದು ಎನ್ನಲಾಗುತ್ತಿದೆ.
ರಾಜ್ಯ ಸರ್ಕಾರ ಬೆಂಗಳೂರು ಸುರಂಗ ಯೋಜನೆ ಡಿಪಿಆರ್ ಪರಿಶೀಲನೆಗೆ ನೇಮಕ ಮಾಡಿರುವ ತಜ್ಞರ ಸಮಿತಿಯಲ್ಲಿ ನಾಲ್ಕು ಮಂದಿ ಸದಸ್ಯರಿದ್ದಾರೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸಿವಿಲ್ ವಿಭಾಗದ ಅಧಿಕಾರಿ ಸಿದ್ದನಗೌಡ ಹೆಗ್ಗಾರೆಡ್ಡಿ ಅವರು ಸಮಿತಿ ಅರ್ಧಯಕ್ಷರಾಗಿದ್ದಾರೆ. ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರ ಮಾಧವ, ಸುರಂಗ ತಜ್ಞ ಕ್ಯಾಪ್ಟನ್ ವಿನೋದ ಶುಕ್ಲಾ ಮತ್ತು ಲಾರಾ ಟೆಕ್ ಇಂಜಿನಿಯರಿಂಗ್ ಸಂಸ್ಥೆ ವ್ಯವಸ್ಥಾಪಕ ಮೇಜರ್ ಬಿ.ಅಶ್ವನಾಥ್ ಅವರನ್ನು ನೇಮಕ ಮಾಡಿದೆ.
ಸಮಿತಿ ವರದಿ ಆಧಾರದಲ್ಲಿ ಕಾಮಗಾರಿ ಆರಂಭ ನಿರೀಕ್ಷೆ
ಈ ನಾಲ್ವರು ಸುರಂಗ ಯೋಜನೆ ಡಿಪಿಆರ್ ಅಂಶಗಳನ್ನು ಪರಿಶೀಲಿಸಿ ಹೊಸ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಅದಕ್ಕಾಗಿ ಸರ್ಕಾರ ಮೂರು ವಾರಗಳ ಗಡುವು ನೀಡಿದೆ. ಇವರ ವರದಿ ಆಧಾರದಲ್ಲಿ ಯೋಜನೆಯ ಕಾಮಗಾರಿ ಆರಂಭಿಸಲು ಸರ್ಕಾರ ನಿರ್ಧರಿಸಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಗಡುವಿನೊಳಗೆ ವರದಿ ಸಲ್ಲಿಕೆಯಾದರೆ ಈಗಾಗಲೇ ಯೋಜನೆಗೆ ಸಾಲ ನೀಡಲು ಮುಂದಾಗಿರುವ ಬ್ಯಾಂಕ್‌ಗಳ ಸಹಾಯದಿಂದ ಇನ್ನೊಂದು ತಿಂಗಳಲ್ಲಿ ಸಿವಿಲ್ ಕಾಮಗಾರಿ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ. ಎಲ್ಲವು ಅಂದುಕೊಂಡಂತೆ ಆದರೆ ಮುಂದಿನ ತಿಂಗಳಾಂತ್ಯಕ್ಕೆ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಅಡಿಗಲ್ಲು ಸ್ಥಾಪನೆ ಹಾಕಿದರೂ ಅಚ್ಚರಿಪಡಬೇಕಿಲ್ಲ..
ಸುರಂಗ ರಸ್ತೆ ಯೋಜನೆಗೆ ವಿರೋಧವೇಕೆ?
ಈ ಸುರಂಗ ಯೋಜನೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) ಹಳೆಯ ಯೋಜನೆವೊಂದರ ಡಿಪಿಆರ್ ಅನ್ನೇ ಕಾಪಿ ಪೇಸ್ಟ್ ಮಾಡಿದೆ. ಜೊತೆಗೆ ಡಿಪಿಎಆರ್ ಸಿದ್ಧಪಡಿಸಲ 14 ಕೋಟಿಗೂ ಹೆಚ್ಚು ರೂಪಾಯಿ ಖರ್ಚಾಗಿದೆ ಎಂದಿತ್ತು. ಇದಕ್ಕೆ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಪಿಸಿ ಮೋಹನ್ ಮತ್ತಿತರ ವಿಪಕ್ಷ ನಾಯಕರು ಆಕ್ರೋಶ ಹೊರ ಹಾಕಿದ್ದರು. ಜನರ ತೆರಿಗೆ ಹಣ ಪೋಲು ಮಾಡುತ್ತಿದೆ ಎಂದರು.
ಇಷ್ಟು ದೊಡ್ಡ ಮಟ್ಟದಲ್ಲಿ ನಗರದ ಕೆಳಗೆ ಸುರಂಗ ಕೊರೆದರೆ ಸಾಕಷ್ಟು ಸಮಸ್ಯೆ ಆಗಬಹುದು. ತಜ್ಞರು ಈ ಯೋಜನೆ ಮಾಡದಂತೆ ಸಲಹೆ ನೀಡಿದ್ದರು. ಅಲ್ಲದೇ ಹಾಲಿ ಸಂಚಾರ ಸಮಸ್ಯೆ ನಿರ್ವಹಿಸುವಂತೆ ಹೇಳಿದ್ದರು. ಇದೆಲ್ಲ ಬದಿಗೊತ್ತಿ ಸರ್ಕಾರ ಸುರಂಗ ಯೋಜನೆ ಮಾಡಿಯೇ ತೀರುವುದಾಗಿ ಹೇಳಿದೆ.












Click it and Unblock the Notifications