ಐಶ್ವರ್ಯಾ ನಾಗರಾಜ್ ಪತಿ ಲೋಹಿತ್ ವಾರಣಾಸಿಯಲ್ಲಿ ಪತ್ತೆ! ವೈರಾಗ್ಯ ಕಾರಣವೇ?
ಬೆಂಗಳೂರು, ಏ. 13: ಹದಿನೇಳು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಾಜಿ ಕಾರ್ಪೋರೇಟರ್ ಐಶ್ವರ್ಯಾ ನಾಗರಾಜ್ ಪತಿ ಲೋಹಿತ್ ಕೊನೆಗೂ ವಾರಣಾಸಿಯಲ್ಲಿ ಪತ್ತೆಯಾಗಿದ್ದಾರೆ.
ಲೋಹಿತ್ ಗಾಗಿ ಶೋಧ ನಡೆಸಲು ರಚಿಸಿದ್ದ ವಿಶೇಷ ಪಡೆ ವಾರಣಾಸಿಯಲ್ಲಿದ್ದ ಲೋಹಿತ್ ನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ಯಾವ ಕಾರಣಕ್ಕೆ ವಾರಣಾಸಿ ಹೋಗಿದ್ದರು ಎಂಬುದು ವಿಚಾರಣೆ ಬಳಿಕ ಗೊತ್ತಾಗಬೇಕಿದೆ.
ಗ್ಯಾರೇಜ್ ಗೆ ಹೋಗಿ ಬರುವುದಾಗಿ ತೆರಳಿದ್ದ ಲೋಹಿತ್ ಮಾ. 26 ರಂದು ಕಣ್ಮರೆಯಾಗಿದ್ದರು. ಬೈಕ್ ಮತ್ತು ಕಾರ್ ರೇಸ್ ಆಯೋಜನೆ ಮಾಡುತ್ತಿದ್ದ ಲೋಹಿತ್ ಗ್ಯಾರೇಜ್ ಹೊಂದಿದ್ದರು. ಆರ್ಥಿಕವಾಗಿಯೂ ಸದೃಢವಾಗಿದ್ದ. ನನಗೆ ಸ್ನೇಹಿತರು ಹಣ ಕೊಡಬೇಕಿದ್ದು, ತೆಗೆದುಕೊಂಡು ಬರುವುದಾಗಿ ಗ್ಯಾರೇಜ್ ನಲ್ಲಿ ಕೆಲಸ ಮಾಡುವ ಹುಡುಗನಿಗೆ ಹೇಳಿ ಲೋಹಿತ್ ತೆರಳಿದ್ದ.

ಆ ಬಳಿಕ ಲೋಹಿತ್ ಕಾರು ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆ ಬದಿ ಪತ್ತೆಯಾಗಿತ್ತು. ಕಾರು ರಕ್ತಸಿಕ್ತವಾಗಿತ್ತು. ಲೋಹಿತ್ ನನ್ನು ಯಾರೋ ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಕುರಿತು ಲೋಹಿತ್ ಪತ್ನಿಯ ಸಹೋದರಿ ದೂರು ದಾಖಲಿಸುತ್ತಿದ್ದಂತೆ ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧ ನಡೆಸಿದ್ದರು. ಡ್ರೋನ್ ಬಳಸಿ ಹುಡುಕಾಡಿದ್ದರೂ ಲೋಹಿತ್ ಸುಳಿವು ಸಿಕ್ಕಿರಲಿಲ್ಲ. ಯಾರೋ ದುಷ್ಕರ್ಮಿಗಳು ಅಪಹರಣ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶೋಧಕ್ಕಾಗಿ ಮೂರು ತಂಡಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೋಲೀಸರು ರಚನೆ ಮಾಡಿದ್ದರು.
ರಾಜ್ಯದೆಲ್ಲೆಡೆ ಹುಡುಕಿದರೂ ಲೋಹಿತ್ ಸುಳಿವು ಸಿಕ್ಕಿರಲಿಲ್ಲ. ಮೈಸೂರು ಕಡೆ ಲೋಹಿತ್ ಹೋಗಿರುವ ಬಗ್ಗೆ ಸಣ್ಣ ಜಾಡು ಹಿಡಿದು ತನಿಖೆ ಆರಂಭಿಸಿದ್ದರು. ಅಂತಿಮವಾಗಿ ವಾರಣಾಸಿಯಲ್ಲಿ ಲೋಹಿತ್ ಪತ್ತೆಯಾಗಿದ್ದು, ಆತನನ್ನು ಬೆಂಗಳೂರಿಗೆ ಕರೆ ತರಲಾಗುತ್ತಿದೆ. ಪತ್ನಿಯ ಜತೆ ವೈಮನಸ್ಯದಿಂದ ಬೇಸತ್ತು ಲೋಹಿತ್ ವಾರಣಾಸಿಗೆ ತೆರಳಿದ್ದ ಎಂದು ಹೇಳಲಾಗುತ್ತಿದೆ.

Recommended Video
ತನ್ನನ್ನು ಯಾರೋ ಕೊಲೆ ಮಾಡಿದ ರೀತಿ ಬಿಂಬಿಸಿ ಲೋಹಿತ್ ಪ್ಲಾನ್ ಮಾಡಿ ವಾರಣಾಸಿಗೆ ಹೊರಟರೇ? ಮನೆಯಲ್ಲಿನ ಕೌಟುಂಬಿಕ ಜಗಳದಿಂದ ಆತ ವೈರಾಗ್ಯ ಜೀವನ ಬಯಸಿ ವಾರಣಾಸಿ ಸೇರಿದ್ದನೇ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ.












Click it and Unblock the Notifications