ಆನೇಕಲ್ ರೈಲು ದುರಂತಕ್ಕೆ ಅಧಿಕಾರಿಗಳು ಕಾರಣ?
ಬೆಂಗಳೂರು, ಮಾ.10 : ಫೆ. 13ರಂದು ಆನೇಕಲ್ ಬಳಿ ನಡೆದ ಬೆಂಗಳೂರು-ಎರ್ನಾಕುಲಂ ರೈಲು ಅಪಘಾತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಅಂಶ ತನಿಖೆಯಿಂದ ಬಯಲಾಗಿದೆ. ರೈಲು ಅಪಘಾತಲ್ಲಿ 9 ಜನರು ಸಾವನ್ನಪ್ಪಿ, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ರೈಲು ಅಪಘಾತದ ಕುರಿತು ತನಿಖೆ ನಡೆಸಲು ರೈಲ್ವೆ ಸಚಿವಾಲಯ ನೇಮಿಸಿದ್ದ ಅಧಿಕಾರಿಗಳ ತಂಡ ಸಚಿವಾಲಯಕ್ಕೆ ಮಧ್ಯಂತರ ತನಿಖಾ ವರದಿ ಸಲ್ಲಿಕೆ ಮಾಡಿದೆ. ವರದಿಯಲ್ಲಿ ಅಪಘಾತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ತಿಳಿಸಲಾಗಿದೆ. [ಬೆಂಗಳೂರು-ಎರ್ನಾಕುಲಂ ರೈಲು ಅಪಘಾತ, 9 ಸಾವು]

ಹಳಿ ರಿಪೇರಿ ಮಾಡಲಾಗಿತ್ತು : ಫೆ.12ರಂದು ಈ ಮಾರ್ಗದ ರೈಲಿನ ಹಳಿಗಳ ರಿಪೇರಿ ಕೆಲಸಗಳನ್ನು ಮಾಡಲಾಗಿತ್ತು. ಈ ವಿಚಾರವನ್ನು ಅಧಿಕಾರಿಗಳು ರೈಲಿನ ಚಾಲಕನಿಗೆ ತಿಳಿಸಿರಲಿಲ್ಲ. ಚಾಲಕ ಪ್ರತಿದಿನ ಹೋಗುವ ವೇಗದಲ್ಲಿಯೇ ಚಲಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ವರದಿ ಹೇಳಿದೆ.
ಹಳಿ ದುರಸ್ತಿಯಾದ ನಂತರ ಒಂದು ವಾರಗಳ ಕಾಲ ರೈಲು 30 ಕಿ.ಮೀಗಿಂತ ಹೆಚ್ಚಿನ ವೇಗದಲ್ಲಿ ಚಲಿಸುವಂತಿರಲಿಲ್ಲ. ಆದರೆ, ಬೆಂಗಳೂರು-ಎರ್ನಾಕುಲಂ ರೈಲು 65 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಆದ್ದರಿಂದ ಈ ಅಪಘಾತ ನಡೆದಿದೆ ಎಂದು ವರದಿ ಹೇಳುತ್ತಿದೆ. [ಚಿತ್ರಗಳಲ್ಲಿ : 9 ಜನರ ಬಲಿ ಪಡೆದ ಆನೇಕಲ್ ರೈಲು ದುರಂತ]
ಘಟನೆ ನಡೆದ ಸ್ಥಳದಲ್ಲಿ ಮುರಿದು ಹೋಗಿರುವ ಹಳಿಗಳನ್ನು ಲಕ್ನೋದ ಕೋಚ್ ಫ್ಯಾಕ್ಟರಿಗೆ ತಾಂತ್ರಿಕ ಪರಿಶೀಲನೆಗಾಗಿ ಕಳುಹಿಸಲಾಗಿದೆ. ಅಲ್ಲಿಂದ ಅಂತಿಮ ವರದಿ ಬಂದ ನಂತರ ತನಿಖಾ ತಂಡ ರೈಲ್ವೆ ಇಲಾಖೆಗೆ ಅಂತಿಮ ವರದಿಯನ್ನು ಸಲ್ಲಿಕೆ ಮಾಡುವ ಸಾಧ್ಯತೆ ಇದೆ.
ಫೆಬ್ರವರಿ 13 ರಂದು ಆನೇಕಲ್ ಬಳಿ ಬೆಂಗಳೂರು-ಎರ್ನಾಕುಲಂ ರೈಲು ಹಳಿ ತಪ್ಪಿತ್ತು. ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಘಟನೆಗೆ ಹಳಿಗಳ ಮೇಲೆ ಬಂಡೆ ಬಿದ್ದದ್ದು ಕಾರಣ ಎಂದು ಹೇಳಿದ್ದರು. ಅಂತಿಮ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.












Click it and Unblock the Notifications