Namma Metro: ಜಾಲಿ ಜಾಲಿಯಾಗಿ ಪ್ರಯಾಣಿಕರು ಸಂಚರಿಸುತ್ತಿದ್ದ ನಮ್ಮ ಮೆಟ್ರೋ ಇದೀಗ ಖಾಲಿ.. ಖಾಲಿ
Namma Metro: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಬಹುತೇಕ ಮಂದಿ ಪ್ರಯಾಣಕ್ಕೆ ನಮ್ಮ ಮೆಟ್ರೋ ಸಾರಿಗೆಯನ್ನೇ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಕಳೆದ ವಾರ ಮೆಟ್ರೋ ದರ ಏರಿಕೆ ಮಾಡಿದ ಬೆನ್ನಲ್ಲೇ ದಿಢೀರ್ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಇದೀಗ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದ್ದರೂ ಸಹ ದುಬಾರಿಯೇ ಇದೆ ಅಂತಿದ್ದಾರೆ ನಗರದ ಮಂದಿ. ಅಲ್ಲದೆ, ಇಂದು (ಫೆಬ್ರವರಿ 16) ಮೆಟ್ರೋ ಖಾಲಿ ಹೊಡೆಯುತ್ತಿರುವ ದೃಶ್ಯವೊಂದು ಭಾರೀ ವೈರಲ್ ಆಗುತ್ತಿದೆ.
ಇಷ್ಟು ದಿನ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ನಗರದ ಬಹುತೇಕ ಮಂದಿ ಮೆಟ್ರೋದಲ್ಲೇ ಜಾಲಿ ಜಾಲಿಯಾಗಿ ತುಂಬಿ ತುಳುಕುವಂತೆ ಅಡ್ಡಾಡುತ್ತಿದ್ದರು. ಆದರೆ, ಇದೀಗ ದರ ಏರಿಕೆ ಹಿನ್ನೆಲೆ ಮೆಟ್ರೋ ಖಾಲಿ ಖಾಲಿಯಾಗಿ ಓಡಾಡುತ್ತಿವೆ. ಅದರಲ್ಲೂ ಇಂದು (ಫೆಬ್ರವರಿ 16) ವೀಕೆಂಡ್‌ನಲ್ಲೇ ಪ್ರಯಾಣಿಕರಿಲ್ಲದೆ ಖಾಲಿ ಮೆಟ್ರೋ ಸಂಚರಿಸಿದ್ದು, ಈ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ ಹಿನ್ನೆಲೆ ಜನರು ಇದೀಗ ಸ್ವಂತ ವಾಹನ ಹಾಗೂ ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ವಾರಾಂತ್ಯದಲ್ಲೂ ತುಂಬಿ ತುಳುಕಬೇಕಿದ್ದ ಮೆಟ್ರೋದಲ್ಲಿ ಪ್ರಯಾಣಿಕರು ಇಲ್ಲದೇ ಖಾಲಿ ಹೊಡೆಯುತ್ತಿವೆ. ಈ ಮೊದಲು ವಾರಾಂತ್ಯ ಬಂದರೆ ಸಾಕು ಶಾಪಿಂಗ್ ಮಾಲ್‌ಗೆ ಬರುವ ಜನರು ಹೆಚ್ಚಾಗಿ ಮೆಟ್ರೋದಲ್ಲಿ ಬರುತ್ತಿದ್ದರು.
ಆದರೆ, ಇಂದು ಮೆಟ್ರೋದಲ್ಲಿ ಪ್ರಯಾಣಿಕರಿಲ್ಲ. ಆದ್ದರಿಂದ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದ ಬಳಿ ಪ್ರಯಾಣಿಕರೇ ಇಲ್ಲದಂತಾಗಿದ್ದು, ಮೆಟ್ರೋದಲ್ಲಿ ಪ್ರಯಾಣ ಮಾಡಲು ಜನರ ಹಿಂಜರಿಯುತ್ತಿದ್ದಾರೆ. ಕಳೆದ ಭಾನುವಾರ ನಮ್ಮ ಮೆಟ್ರೋ ಟಿಕೆಟ್ ದರ ಶೇಕಡ 46ರಷ್ಟು ಅಂದರೆ, 30 ಕಿಲೋ ಮೀಟರ್‌ಗೆ ಮೆಟ್ರೋ ಪ್ರಯಾಣ ದರ ಗರಿಷ್ಠ 90 ರೂಪಾಯಿ, ಕನಿಷ್ಠ 10 ರೂಪಾಯಿಗೆ (0-2 ಕಿ.ಮೀ) ಏರಿಕೆ ಆಗಿತ್ತು.
ಇನ್ನೂ ಇದೀಗ ಜಾಸ್ತಿ ಮಾಡಿದ್ದಕ್ಕಿಂತ ಅದರಲ್ಲಿ ಹೆಚ್ಚೇನು ಇಳಿಕೆ ಮಾಡಿಲ್ಲ. ಆದ್ದರಿಂದ ನಾವೂ ನಮ್ಮ ವಾಹನದಲ್ಲೇ ಓಡಾಡುತ್ತೇವೆ ಎಂದು ಪ್ರಯಾಣಿಕರು ತಮ್ಮ ಸ್ವಂತ ವಾಹನಗಳ ಮೊರೆ ಹೋಗಿದ್ದಾರೆ.
ಮೆಟ್ರೋ ದರ ಏರಿಕೆ ವಿರುದ್ಧ ಆಕ್ರೋಶ: ನಮ್ಮ ಮೆಟ್ರೋ ದರ ಏರಿಸಿ, ಕೇಂದ್ರಕ್ಕೆ ಅದರ ಹಣೆಪಟ್ಟಿ ಕಟ್ಟಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಜನರೇ ಎದಿರೇಟು ಕೊಟ್ಟಿದ್ದಾರೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರತಿಕ್ರಿಯಿಸಿದ್ದಾರೆ. ಬಿಎಂಆರ್‌ಸಿಎಲ್ ಮೆಟ್ರೋ ದರ ಪರಿಷ್ಕರಣೆ ಮಾಡಿದ ಬಳಿಕ ಕೇಂದ್ರ ಸರ್ಕಾರದತ್ತ ಬೆರಳು ತೋರಿ ಆರೋಪ ಹೊರಿಸಿದ್ದ ಸಿಎಂ ಈಗ ಜನರ ವಿರೋಧ ತಾರಕಕ್ಕೇರುತ್ತಲೇ ಮಣಿದು ಬೆಲೆ ಇಳಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಜೋಶಿ ಇತ್ತೀಚೆಗಷ್ಟೇ ಹೇಳಿದ್ದರು.
ಬಿಎಂಆರ್‌ಸಿಎಲ್ ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆಯ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವೆಡೆ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಹೊರಡಿಸಿದ್ದರು.
ಮೆಟ್ರೋ ಬೆಲೆ ಏರಿಕೆಯ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
ಬೆಂಗಳೂರಿನಲ್ಲಿ ಜನ ಮೆಟ್ರೋ ರೈಲು ಸಂಚಾರ ತಿರಸ್ಕರಿಸುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಯೂಟರ್ನ್ ಹೊಡೆದಿದ್ದಾರೆ. ಇದೀಗ ಟಿಕೆಟ್ ದರ ಕಡಿಮೆ ಮಾಡುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸಚಿವ ಪ್ರಲ್ಹಾದ್ದ ಜೋಶಿ ಟೀಕಿಸಿದ್ದರು.












Click it and Unblock the Notifications