ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಎಂಬಸಿ ನೆರವು
ಬೆಂಗಳೂರು, ಜುಲೈ 11: ಕೋವಿಡ್-19 ಪಿಡುಗಿನ ಸಮಯದಲ್ಲಿ ನಡೆಯುತ್ತಿರುವ ಈ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಮತ್ತು ಪರೀಕ್ಷೆಗಳ ಮೇಲ್ವಿಚಾರಕರ ಆರೋಗ್ಯ ಮತ್ತು ಸುರಕ್ಷತೆ ಖಚಿತಪಡಿಸಿಕೊಳ್ಳುವ ಶಿಕ್ಷಣ ಇಲಾಖೆಯ ಪ್ರಯತ್ನವನ್ನು ಹೆಚ್ಚಿಸಲು ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯಾಗಿರುವ ಎಂಬಸಿ ಗ್ರೂಪ್ ಎರಡನೇ ವರ್ಷವೂ ಕೈಜೋಡಿಸಿದೆ. ಜುಲೈ 19 ಮತ್ತು ಜುಲೈ 22 ರಂದು ನಡೆಯಲಿರುವ ಪರೀಕ್ಷೆಗಳ ಎರಡೂ ದಿನವೂ 9.6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಮೇಲ್ವಿಚಾರಕರಿಗೆ ಅನುಕೂಲತೆ ಕಲ್ಪಿಸಲು ಸಾಕಷ್ಟು ಪ್ರಮಾಣದಲ್ಲಿ ಸ್ಯಾನಿಟೈಸರ್‍ಗಳನ್ನು ಒದಗಿಸಲಿದೆ.
ಕರ್ನಾಟಕದಾದ್ಯಂತ ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಬೆಂಬಲಿಸುವ ಎಂಬಸಿ ಗ್ರೂಪ್‍ನ ದೊಡ್ಡ ಪ್ರಯತ್ನಗಳ ಒಂದು ಭಾಗವಾಗಿದೆ. ಇದಕ್ಕೆ ಹೆಚ್ಚುವರಿಯಾಗಿ, ಎಂಬಸಿ ಗ್ರೂಪ್ ಮತ್ತು ಅದರ ಕಾರ್ಪೊರೇಟ್ ಪಾಲುದಾರರು ರಾಜ್ಯದ 9,347 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 59,887 ಶಿಕ್ಷಕರಿಗೆ ಮುಖ ಕವಚ ಮತ್ತು ತಾಪಮಾನ ಮಾನಿಟರ್‍ಗಳನ್ನು ದೇಣಿಗೆಯನ್ನಾಗಿ ನೀಡಿದ್ದಾರೆ. ಎಂಬಸಿ ಗ್ರೂಪ್ ದತ್ತು ಪಡೆದ ಶಾಲೆಗಳನ್ನು ಸಂಪೂರ್ಣವಾಗಿ ಶುಚಿಗೊಳಿಸುವ ಉದ್ದೇಶದಿಂದ ನೈರ್ಮಲ್ಯೀಕರಣದ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಅವುಗಳ ದೈನಂದಿನ ನಿರ್ವಹಣೆಯನ್ನೂ ಒದಗಿಸುತ್ತದೆ. ವೈರಸ್ ಹರಡುವ ಸಾಧ್ಯತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸುಮಾರು 30,000 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎಂಬಸಿ ಗ್ರೂಪ್ ಆರೋಗ್ಯ ಕಿಟ್‍ಗಳನ್ನು ಒದಗಿಸಿ ಅಗತ್ಯ ಜಾಗೃತಿ ಮೂಡಿಸಿದೆ.
ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ನಗರದಲ್ಲಿ ನಡೆದ ಸಮಾರಂಭದಲ್ಲಿ ಎಂಬಸಿ ಗ್ರೂಪ್‍ನ ಸಹಯೋಗಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ''ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಹಿತ ಮತ್ತು ಆರೋಗ್ಯ ರಕ್ಷಿಸುವಲ್ಲಿ ಎಂಬಸಿ ಗ್ರೂಪ್‍ನ ಕೊಡುಗೆಗಳು ತುಂಬ ಮಹತ್ವ ಪಡೆದಿವೆ. ಎಂಬಸಿ ಗ್ರೂಪ್‍ನಂತಹ ಕಾರ್ಪೊರೇಟ್‍ಗಳು ಸರ್ಕಾರಿ ಶಾಲೆಗಳನ್ನು ನಿರ್ಮಿಸಲು ಮತ್ತು ನವೀಕರಿಸಲು, ಆರೋಗ್ಯ ಮತ್ತು ಶಿಕ್ಷಣದ ಉಪಕ್ರಮಗಳನ್ನು ಒದಗಿಸಲು ಮಾತ್ರವಲ್ಲದೆ ಕೋವಿಡ್ ಪಿಡುಗಿನ ಸಮಯದಲ್ಲಿ ಅಗತ್ಯ ಬೆಂಬಲವನ್ನೂ ನೀಡಲು ಸರ್ಕಾರದೊಂದಿಗೆ ಸಹಭಾಗಿತ್ವವನ್ನು ಮುಂದುವರಿಸುತ್ತಿರುವುದನ್ನು ಕಂಡು ನಮಗೆ ತುಂಬ ಸಂತೋಷವಾಗುತ್ತದೆ. ಕೋವಿಡ್-19 ಮುಂದುವರಿದಿರುವುದರ ದುಷ್ಪರಿಣಾಮಗಳನ್ನು ತಗ್ಗಿಸಲು ಈ ಉಪಕ್ರಮವು ಬಹಳ ದೂರ ಸಾಗಲಿದೆ. ನಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಈ ಪರೀಕ್ಷೆಗಳು ಬಹುಮುಖ್ಯವಾಗಿವೆ. ಪರೀಕ್ಷೆಗಳು ಸುರಕ್ಷಿತ ರೀತಿಯಲ್ಲಿ ನಡೆಯಲು ನಾವು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತೇವೆ,'' ಎಂದು ಹೇಳಿದ್ದಾರೆ.

ಎಂಬಸಿ ಗ್ರೂಪ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದಿತ್ಯ ವಿರ್ವಾನಿ ಮಾತನಾಡಿ, ''ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಆರೋಗ್ಯ ಮತ್ತು ಸುರಕ್ಷತೆಯನ್ನು ಉತ್ತೇಜಿಸಲು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕೆಲಸ ಮಾಡುವ ವಿಷಯದಲ್ಲಿ ಎಂಬಸಿ ಗ್ರೂಪ್‍ಗೆ ಸುದೀರ್ಘ ಇತಿಹಾಸವಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಭಯಪಡಬೇಕಾಗಿಲ್ಲ ಎಂಬುದನ್ನು ಖಾತರಿಪಡಿಸಲು ನಾವು ಬಯಸಿದ್ದೇವೆ. ಎರಡನೇ ವರ್ಷವೂ ಶಿಕ್ಷಣ ಇಲಾಖೆಯ ಪ್ರಯತ್ನಗಳಿಗೆ ನಾವು ಬೆಂಬಲ ನೀಡುತ್ತಿದ್ದೇವೆ. ಹೀಗಾಗಿ ವಿದ್ಯಾರ್ಥಿಗಳು ನಿರಾಂತಕವಾಗಿ ಪರೀಕ್ಷೆ ಬರೆಯಬಹುದು. ಈ ಸಂಕಷ್ಟದ ಸಮಯದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ನಮ್ಮ ಬೆಂಬಲವನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಈ ಮಹತ್ವದ ಶೈಕ್ಷಣಿಕ ಮೈಲುಗಲ್ಲಿನಲ್ಲಿ ಈ ಎಲ್ಲ ಪ್ರಯತ್ನಗಳು ಅಗತ್ಯ ಪ್ರೇರಣೆ ನೀಡಲಿವೆ ಎಂದು ನಾವು ಭಾವಿಸುತ್ತೇವೆ,'' ಎಂದು ಹೇಳಿದ್ದಾರೆ.
ಕಳೆದ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಲ್ಲಿ ಎಂಬಸಿ ಗ್ರೂಪ್ ಮತ್ತು ಕಾರ್ಪೊರೇಟ್‍ಗಳ ಒಕ್ಕೂಟವು ಸ್ಯಾನಿಟೈಸಟರ್ಸ್ ದೇಣಿಗೆ ನೀಡುವುದಕ್ಕೆ ಕೈಜೋಡಿಸಿದ್ದವು. ತನ್ನ ಒಟ್ಟಾರೆ ಕಾರ್ಪೊರೇಟ್ ಸಂಪರ್ಕ ಕಾರ್ಯಕ್ರಮದ ಭಾಗವಾಗಿ, ಎಂಬಸಿ ಗ್ರೂಪ್, 59 ಯೋಜನೆಗಳಲ್ಲಿ 34 ಕಾರ್ಪೊರೇಟ್‍ಗಳೊಂದಿಗೆ ಪಾಲುದಾರಿಕೆ ಹೊಂದಿದೆ.
ಕಳೆದ 9 ವರ್ಷಗಳಲ್ಲಿ ಎಂಬಸಿ ಗ್ರೂಪ್, ಕರ್ನಾಟಕದ 150ಕ್ಕೂ ಹೆಚ್ಚು ಸರ್ಕಾರಿ ಮತ್ತು ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ನೆರವು ನೀಡುತ್ತ ಬಂದಿದೆ. ಪಿಡುಗಿನ ಸಮಯದಲ್ಲಿ ಈ ಸಹಾಯವನ್ನು ವಿಸ್ತರಿಸಬಹುದಾದ ಮಾರ್ಗಗಳನ್ನು ಗುರುತಿಸಲು ಎಂಬಸಿ ಗ್ರೂಪ್ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿತ್ತು.












Click it and Unblock the Notifications