ಎಲೆಕ್ಟ್ರಾನಿಕ್ ಮೇಲ್ಸೇತುವೆ ಅಪಘಾತ ಪ್ರಕರಣ: ಆರೋಪಿ ನಿತಿನ್‌ಗೆ ಜಾಮೀನು
ಬೆಂಗಳೂರು, ಸೆ. 30: "ನಾನು ಕಾರನ್ನು ತುಂಬಾ ವೇಗವಾಗಿ ಚಾಲನೆ ಮಾಡುತ್ತಿದ್ದೆ. ಅಲ್ಲಿಗೆ ಬಂದಾಗ ನನಗೆ ಏನಾಯಿತೋ ಗೊತ್ತಿಲ್ಲ. ಸದ್ದು ಕೇಳಿಸಿದ್ದು ಅಷ್ಟೇ, ನಾನು ಪ್ರಜ್ಞೆ ಕಳೆದುಕೊಂಡೆ. ರಸ್ತೆ ಬಿಟ್ಟು ಪಕ್ಕಕ್ಕೆ ನಾನು ಯಾಕೆ ಕಾರು ತಿರುಗಿಸಿದೆ ಎಂಬುದು ನನಗೆ ಗೊತ್ತಿಲ್ಲ" !
ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಬಳಿ ಕಾರು ಡಿಕ್ಕಿ ಹೊಡೆದು ಇಬ್ಬರ ಜೀವ ತೆಗೆದ ಕಾರು ಚಾಲಕ ನಿತೇಶ್ ಪೊಲೀಸರಿಗೆ ನೀಡಿರುವ ಹೇಳಿಕೆ ಇದು. ಕಾರಿನಲ್ಲಿದ್ದ ನಿತೇಶ್ ಗೂ ಬೆನ್ನು ಮೂಳೆ ಮುರಿದಿದೆ. ಕಾಲುಗಳಿಗೆ ಪೆಟ್ಟಾಗಿದ್ದು, ಎದೆ, ಹಿಪ್ಸ್ ಗೂ ತೀವ್ರತರ ಪೆಟ್ಟಾಗಿದೆ. ಈವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಓಡಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿ ನಿತೇಶ್ ಹೇಳಿಕೆ ಹಾಗೂ ವೈದ್ಯಕೀಯ ದಾಖಲೆ ಆಧರಿಸಿ ಪೊಲೀಸ್ ಠಾಣೆಯಿಂದಲೇ ಜಾಮೀನು ಮಂಜೂರು ಮಾಡಲಾಗಿದೆ. ಆತ ಎದ್ದು ಓಡಾಡುವ ಪರಿಸ್ಥಿತಿಯಲ್ಲಿ ಇಲ್ಲದ ಕಾರಣ ಆಸ್ಪತ್ರೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರೇ ಭೇಟಿ ನೀಡಿ ಹೇಳಿಕೆ ಪಡೆದಿದ್ದಾರೆ.
ಆಯಾಸದಿಂದ ನಿದ್ದೆ ಮಾಡಿದ್ದ ಗುಮಾನಿ:
ಡ್ರಗ್ ಸೇವನೆ ಕುರಿತ ಸಂಶಯ : ಇನ್ನು ಅತಿ ವೇಗವಾಗಿ ಕಾರು ಚಾಲನೆ ಮಾಡಿ ಇಬ್ಬರ ಜೀವ ತೆಗೆದ ನಿತೇಶ್ ಕ್ರಿಕೆಟ್ ಆಟವಾಡಿ ಮನೆಗೆ ವಾಪಸು ಆಗುತ್ತಿದ್ದ. ಆಯಾಸದಿಂದ ಮೈ ಮರೆತು ಕಾರು ಡಿಕ್ಕಿ ಹೊಡೆದನೇ ? ಅಥವಾ ಮಾದಕ ಪದಾರ್ಥ ಸೇವನೆ ಮಾಡಿದ್ದೇನೆ ? ಇಲ್ಲವೇ ಕುಡಿದು ವಾಹನ ಚಾಲನೆ ಮಾಡುತ್ತಿದ್ದನೇ? ಎಂಬುದರ ಮೂಲ ಪತ್ತೆ ಮಾಡಲು ಸಂಚಾರ ಪೊಲೀಸ್ ತನಿಖಾಧಿಕಾರಿಗಳು ಮುಂದಾಗಿದ್ದಾರೆ. ನಿರ್ಲಕ್ಷ್ ಚಾಲನೆ ಮಾಡಿ ಇಬ್ಬರ ಜೀವ ತೆಗೆದ ನಿತೇಶ್ ಆಸ್ಪತ್ರೆಯಲ್ಲಿಯೇ ಬಂಧನಕ್ಕೆ ಒಳಗಾಗಿ ಠಾಣಾ ಜಾಮೀನು ಮೇಲೆ ಬಿಡುಗಡೆಯಾಗಿದ್ದಾನೆ. ಅಪಘಾತ ಸಂಬಂಧ ಎಲ್ಲ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ:
ಸೆ. 14 ರಂದು ರಾತ್ರಿ 9.20 ರ ಸುಮಾರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಎಲ್‌ವೇಟೆಡ್ ಮೇಲ್ಸೇತುವೆ ಮೇಲೆ ನಿಂತಿದ್ದ ಬುಲೆಟ್ ವಾಹನಕ್ಕೆ ಅತಿವೇಗದಿಂದ ಬಂದ ಕಾರು ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ವ್ಯಕ್ತಿಗಳು ಕೆಳಗೆ ಬಿದ್ದು ಸಾವನ್ನಪ್ಪಿದ್ದರು. ತಮಿಳುನಾಡು ಮೂಲದ, ಜೆಪಿ ನಗರದ ನಿವಾಸಿ ಪ್ರೀತಂ ಕುಮಾರ್ (30) ಹಾಗೂ ಚೆನ್ನೈ ಮೂಲದ ಕೃತಿಕಾ ರಾಮನ್ (28)ಮೃತಪಟ್ಟವರು. ಜೆಪಿನಗರದ ನಿವಾಸಿ ಪ್ರೀತಂ ಕುಮಾರ್ ಸರ್ಜಾಪುರ ರಸ್ತೆಯಲ್ಲಿರುವ ನೊವೋಪೇ ಎಂಬ ಕಂಪನಿಯಲ್ಲಿ ಕ್ವಾಲಿಟಿ ಕಂಟ್ರೋಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೃತಿಕಾ ರಾಮನ್ ಮಹದೇವಪುರದಲ್ಲಿರುವ ಕಾಯಿನ್ ಸ್ವಿಚ್ ಎಂಬ ಕಂಪನಿಯಲ್ಲಿ ಟೀಮ್ ಲೀಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿರ್ಲಕ್ಷ ಚಾಲನೆ ಮಾಡಿದ ಕಾರು ಚಾಲಕ ನಿತಿನ್ , ಬೊಮ್ಮಸಂದ್ರದ ತಿರುಪಾಳ್ಯದ ನಿವಾಸಿಯಾಗಿದ್ದು ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮಾಡುತ್ತಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿತ್ತು.

ಇಬ್ಬರು ಮುಗ್ಧ ಜೀವಗಳನ್ನು ಬಲಿ ಪಡೆದ ಎಲೆಕ್ಟ್ರಾನಿಕ್ ಸಿಟ ಫ್ಲೈ ಓವರ್ ಅಪಘಾತ ಪ್ರಕರಣಕ್ಕೆ ಕಾರಿನ ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆ ಕಾರಣ ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಅವರು ಹೇಳಿಕೆ ನೀಡಿದ್ದರು. ಘಟನೆಗೆ ಸಂಬಂಧಿಸಿದ ಸಿಸಿಟಿವಿ ಕ್ಯಾಮರಾ ವಿಡಿಯೋ ಕೂಡ ಬಿಡುಗಡೆ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.
ಪೆಟ್ರೋಲ್ ಖಾಲಿಯಾಗಿದ್ದೇ ಅವಘಡಕ್ಕೆ ಕಾರಣ ?:
ಐದು ವರ್ಷದಿಂದ ಸ್ನೇಹಿತರಾಗಿದ್ದ ಪ್ರೀತಂಕುಮಾರ್ ಮತ್ತು ಕೃತಿಕಾ ರಾಮನ್ ಕೆಲಸದ ನಿಮಿತ್ತ ಅತ್ತಿಬೆಲೆ ಕಡೆ ತೆರಳಿದ್ದರು. ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಮೇಲ್ಸೇತುವೆ ಮಾರ್ಗವಾಗಿ ಬುಲೆಟ್ ವಾಹನದಲ್ಲಿ ತೆರಳುತ್ತಿದ್ದರು. ಪೆಟ್ರೋಲ್ ಖಾಲಿಯಾಗಿ ಬೈಕ್ ನಿಂತು ಹೋಗಿತ್ತು. ಈ ವೇಳೆ ವಿರುದ್ಧ ದಿಕ್ಕಿನಲ್ಲಿ ಬೈಕ್ ನ್ನು ತಿರುಗಿಸಿ ತಳ್ಳಿಕೊಂಡು ಹೋಗುತ್ತಿದ್ದರು. ಸುಸ್ತಾದ ಹಿನ್ನೆಲೆಯಲ್ಲಿ ಸಿಂಗಸಂದ್ರ ಲೇ. ಬೇ. ಸಮೀಪ ನಿಲ್ಲಿಸಿಕೊಂಡಿದ್ದರು. ಅತಿ ವೇಗವಾಗಿ ಬಂದ ಬಲೆನೋ ಕಾರು ಪ್ರೀತಂಕುಮಾರ್ ನಿಂತಿದ್ದ ಬುಲೆಟ್ ಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಪ್ರೀತಂಕುಮಾರ್ ಮತ್ತು ಕೃತಿಕಾ ರಾಮನ್ ಐವತ್ತು ಅಡಿ ಮೇಲಿನಿಂದ ಕೆಳಗೆ ಹಾರಿ ಬಿದ್ದಿದ್ದರು. ಈ ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು.












Click it and Unblock the Notifications