ಪ್ರಧಾನಿ ಮೋದಿ ರೋಡ್ ಶೋ ಮಾಡಿದ್ದ ರಸ್ತೆಗೆ ಸಗಣಿ ನೀರು!
ಮೈಸೂರು: ಬಿಜೆಪಿ ಕರ್ನಾಟಕದಲ್ಲಿ ಸೋಲು ಕಂಡ ಬಳಿಕ ಹಲವು ವಿಚಾರಗಳು ಗಮನ ಸೆಳೆಯುತ್ತಿವೆ. ಆ ಪೈಕಿ ಪ್ರಧಾನಿ ಮೋದಿ ಮಾಡಿದ್ದ ರೋಡ್ ಶೋ ವಿಚಾರ ಕೂಡ ಮುನ್ನೆಲೆಗೆ ಬಂದಿದೆ. ಈಗ ಸಿದ್ದರಾಮಯ್ಯ ಫ್ಯಾನ್ಸ್ ಮೈಸೂರಲ್ಲಿ ಪ್ರಧಾನಿ ಮೋದಿ ರೋಡ್ ಶೋ ಮಾಡಿದ್ದ ರಸ್ತೆಯನ್ನ ಗೋ ಮೂತ್ರ & ಸಗಣಿ ನೀರು ಹಾಕಿ ಸ್ವಚ್ಛಗೊಳಿಸಿದ್ದಾರೆ. ಹಾಗಾದ್ರೆ ಸಿದ್ದು ಫ್ಯಾನ್ಸ್ ಹೀಗೆ ಮಾಡಿದ್ದು ಏಕೆ? ತಿಳಿಯೋಣ ಬನ್ನಿ.
ಅಷ್ಟಕ್ಕೂ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ರಾಜಧಾನಿ ಬೆಂಗಳೂರು ಸೇರಿ ಹಲವೆಡೆ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದರು. ಕರ್ನಾಟಕದಲ್ಲಿ ಈ ಬಾರಿ ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೆ ಬರಬೇಕು ಎಂಬ ಲೆಕ್ಕಾಚಾರ ದೆಹಲಿಯ ಬಿಜೆಪಿ ನಾಯಕರದ್ದು, ಆದರೆ ಫಲಿತಾಂಶ ಬೇರೆಯೇ ಆಗಿತ್ತು. ಆಡಳಿತ ವಿರೋಧಿ ಅಲೆ ನಡುವೆ ಬಿಜೆಪಿ ಸರ್ಕಾರ ಹೀನಾಯ ಸೋಲು ಅನುಭವಿಸಿತ್ತು. ಈ ನಡುವೆ ಪ್ರಧಾನಿ ಮೈಸೂರಲ್ಲಿ ರೋಡ್ ಶೋ ಮಾಡಿದ್ದ ರಸ್ತೆ ಸ್ವಚ್ಛಗೊಳಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿ ಕಂಸಾಳೆ ರವಿ ಗೋಮೂತ್ರ ಹಾಗೂ ಸಗಣಿ ನೀರನ್ನು ಹಾಕಿ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ್ದ ಮೈಸೂರಿನ ರಸ್ತೆಯನ್ನ ಸ್ವಚ್ಛಗೊಳಿಸಿದ್ದಾರೆ. ಪಿಎಂ ರೋಡ್ ಶೋ ಮಾಡಿದ್ದ ಮೈಸೂರಿನ ಸಯ್ಯಾಜಿ ರಸ್ತೆಗೆ ಕಾಂಗ್ರೆಸ್ ಕಾರ್ಯಕರ್ತರು ಸಗಣಿ ಮತ್ತು ಗೋ ಮೂತ್ರ ಹಾಗೂ ನೀರು ಹಾಕಿ ಸ್ವಚ್ಛ ಮಾಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗುವ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ರಸ್ತೆಯನ್ನ ಸ್ವಚ್ಛಗೊಳಿಸುವ ಫೋಟೋ ವೈರಲ್ ಆಗುತ್ತಿದೆ.
ರಸ್ತೆ ಕ್ಲೀನ್ ಮಾಡಿದ್ದು ಯಾಕೆ?
ಅಂದಹಾಗೆ ಚುನಾವಣೆಗೆ ಮೊದಲು ಮೈಸೂರಿನ ರಾಜಮಾರ್ಗದಲ್ಲಿ ಮೋದಿ ಭರ್ಜರಿ ರೋಡ್ ಶೋ ನಡೆಸಿದ್ದರು. ಇದೇ ರಸ್ತೆಯಲ್ಲಿ ಈಗ ಮೈಸೂರು ಕಾಂಗ್ರೆಸ್ ಮುಖಂಡರು ಸಗಣಿ ನೀರು ಹಾಕಿ ಸ್ವಚ್ಛಗೊಳಿಸಿ ಬಿಜೆಪಿಯನ್ನ ಈ ಮೂಲಕ ವ್ಯಂಗ್ಯ ಮಾಡಿದ್ದಾರೆ. ಆದರೆ ತಾವು ಈ ರಸ್ತೆಯನ್ನ ಕ್ಲೀನ್ ಮಾಡಿದ್ದು ಯಾಕೆ? ಎಂಬ ಪ್ರಶ್ನೆಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಉತ್ತರ ನೀಡಿದ್ದಾರೆ. ಹಾಗಾದ್ರೆ ಮೋದಿ ರೋಡ್ ಶೋ ನಡೆಸಿದ್ದ ರಸ್ತೆಯನ್ನ ಸ್ವಚ್ಛಗೊಳಿಸಿದ್ದು ಯಾಕೆ? ಆ ಬಗ್ಗೆ ಮೈಸೂರಿನ ಕಾಂಗ್ರೆಸ್ ನಾಯಕರ ರಿಯಾಕ್ಷನ್ ತಿಳಿಯೋಣ ಬನ್ನಿ.
ಬಿಜೆಪಿ ನಾಯಕರಿಂದ ಅಪಮಾನ?
ಚುನಾವಣೆಗೂ ಮುನ್ನ ಮೈಸೂರಿನ ರಾಜ ಮಾರ್ಗದಲ್ಲಿ ಭರ್ಜರಿ ರೋಡ್ ಶೋ ಮೋದಿ ನಡೆಸಿದ್ದರು. ಅಂಬಾರಿ ಹಾದು ಹೋಗುವ ರಾಜ ಮಾರ್ಗದಲ್ಲಿ ಮೋದಿ ರೋಡ್ ಶೋ ಮಾಡಿದ್ದೆ ದೊಡ್ಡ ತಪ್ಪು. ಇದು ರಾಜ ಮನೆತನಕ್ಕೆ ಮಾಡಿದ ಅಪಮಾನ. ಅಂಬಾರಿ ಬಿಟ್ಟರೆ ಇನ್ಯಾವುದೇ ಮೆರವಣಿಗೆ ಮಾಡಿರಲಿಲ್ಲ. ಆದರೆ ಹಿಂದುತ್ವದ ಹೆಸರೇಳುವ ಬಿಜೆಪಿಯವರು ನಾಡಹಬ್ಬಕ್ಕೆ ಅಪಮಾನ ಆಗುವ ಹಾಗೇ ರೋಡ್ ಶೋ ಮಾಡಿದ್ದಾರೆ. ಹೀಗಾಗಿ ರಸ್ತೆಯನ್ನ ನಾವು ಸ್ವಚ್ಛಗೊಳಿಸುತ್ತಿದ್ದೇವೆ ಎಂದಿದ್ದಾರೆ.

ಅಲ್ಲದೆ ಬಿಜೆಪಿ ಹೀಗೆ ಮಾಡಿದ್ದಕ್ಕೆ ಮೈಸೂರು ಸೇರಿ ರಾಜ್ಯ ಉದ್ದಗಲಕ್ಕೂ ಧೂಳಿಪಟವಾಗಿದೆ. ಹೀಗಾಗಿ ರಸ್ತೆಗೆ ಆಗಿರುವ ಕೊಳೆ ತೊಳೆಯಲು ಸಗಣಿ ನೀರು ಹಾಕಿ ಸ್ವಚ್ಛ ಮಾಡುತ್ತಿದ್ದೇವೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಕಂಸಾಳೆ ರವಿ ಟೀಕಿಸಿದರು. ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ರಸ್ತೆಯನ್ನ ಕ್ಲೀನ್ ಮಾಡುತ್ತಿರುವ ಫೋಟೋ ಈಗ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಜೊತೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮುನಿಸು ಇನ್ನಷ್ಟು ದೊಡ್ಡದಾಗುವ ಮುನ್ಸೂಚನೆಯನ್ನೂ ಕೊಟ್ಟಂತಿದೆ.












Click it and Unblock the Notifications