ಖರ್ಗೆಗೆ ಸಿಎಂ ಆಫರ್ ಕೊಟ್ಟ ಡಿ.ಕೆ.ಶಿವಕುಮಾರ್?
ನವದೆಹಲಿ: ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು, 135 ಸ್ಥಾನಗಳೊಂದಿಗೆ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲು ಸಜ್ಜಾಗಿದೆ. ಆದರೂ ಸಿಎಂ ಆಯ್ಕೆಯೇ ಕಗ್ಗಂಟಾಗಿದ್ದು, ಡಿ.ಕೆ.ಶಿವಕುಮಾರ್ & ಸಿದ್ದರಾಮಯ್ಯ ನಡುವೆ ಫೈಟ್ ಶುರುವಾಗಿದೆ. ಇದೇ ಹೊತ್ತಲ್ಲಿ ಹೊಸ ಬಾಂಬ್ ಬಿದ್ದಂತಾಗಿದ್ದು, ಡಿಕೆಶಿ & ಸಿದ್ದು ಬಿಟ್ಟು ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಪಟ್ಟ ಒಲಿಯುತ್ತಾ? ಎಂಬ ಅನುಮಾನ ದಟ್ಟವಾಗಿದೆ.
ಹೌದು, ರಾಷ್ಟ್ರ ರಾಜಧಾನಿ ದೆಹಲಿ ಈಗ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಸಂಧಾನ ಕೇಂದ್ರವಾಗಿ ಬದಲಾಗಿದೆ. ಕಾಂಗ್ರೆಸ್ ವರಿಷ್ಠರ ಪಡೆಯೇ ಪರಿಸ್ಥಿತಿ ನಿಭಾಯಿಸಲು ಪರದಾಡುತ್ತಿದ್ದು, ಸಿದ್ದರಾಮಯ್ಯ ಪರವಾಗಿ ರಾಹುಲ್ ಗಾಂಧಿ ಬ್ಯಾಟ್ ಬೀಸುತ್ತಿದ್ದಾರೆ. ಮತ್ತೊಂದ್ಕಡೆ ಡಿಕೆಶಿ ಪರ ಖರ್ಗೆ ಅವರಿಗೆ ಒಲವು ಇದೆ ಎನ್ನಲಾಗಿದೆ. ಆದ್ರೆ ಈ ತಿಕ್ಕಾಟದ ಮಧ್ಯೆ ಡಿ.ಕೆ.ಶಿವಕುಮಾರ್ ಇದೀಗ ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಫರ್ ಕೊಟ್ಟಿದ್ದಾರೆ ಎಂಬ ಮಾತು ಸಂಚಲನ ಸೃಷ್ಟಿಸಿದೆ. ಆ ಬಗ್ಗೆ ಇಲ್ಲಿ ಮಾಹಿತಿ ತಿಳಿಯೋಣ.

ನನಗೆ ಸಿಕ್ಕಿಲ್ಲ ಅಂದ್ರೆ ಸಿದ್ದುಗು ಬೇಡ?
ಈ ಬಾರಿ ಸಿಎಂ ಆಗಲೇಬೇಕೆಂಬ ನಿರ್ಧಾರದಲ್ಲಿ ತೊಡೆತಟ್ಟಿ ನಿಂತಿರುವ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಎದುರು ಡಿಮ್ಯಾಂಡ್ ಇಟ್ಟಿದ್ದಾರೆ. ಆದರೆ ಹೈಕಮಾಂಡ್ ಡಿಕೆಶಿಗೆ ಪಟ್ಟ ಕಟ್ಟಲು ಒಪ್ಪುತ್ತಿಲ್ಲ. ಈ ಸ್ಥಿತಿಯಲ್ಲಿ ಇನ್ನಷ್ಟು ಜಿದ್ದಾಜಿದ್ದಿ ಏರ್ಪಟ್ಟಿದ್ದು, ಡಿಕೆಶಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೊಸ ಆಫರ್ ಕೊಟ್ಟಿದ್ದಾರೆ ಎನ್ನಲಾಗಿದೆ. ಅದೇನೆಂದರೆ ನನಗೆ ಸಿಎಂ ಸ್ಥಾನ ಸಿಕ್ಕಿಲ್ಲ ಅಂದ್ರೆ ಸಿದ್ದರಾಮಯ್ಯ ಅವರಿಗೂ ಬೇಡ, ನಮ್ಮಿಬರ ಬದಲಾಗಿ ನೀವೇ ಸಿಎಂ ಆಗಿ ಎಂದು ಖರ್ಗೆಗೆ ಹೇಳಿದ್ದಾರಂತೆ ಡಿಕೆಶಿ. ಈ ವದಂತಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಗೆದ್ದರೂ ನೆಮ್ಮದಿ ಸಿಗುತ್ತಿಲ್ವಾ ಕಾಂಗ್ರೆಸ್‌ಗೆ?
ಏನೇ ಹೇಳಿ 135 ಸ್ಥಾನದಲ್ಲಿ ಗೆಲುವು ಸಾಧಿಸೋದು ಕಷ್ಟದ ಕೆಲಸ, ಆದ್ರೆ 135 ಸ್ಥಾನ ಗೆದ್ರೂ ಈಗ ಕಾಂಗ್ರೆಸ್ ಪಕ್ಷದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಸಿಎಂ ಪಟ್ಟಕ್ಕಾಗಿ ನಡೆಯುತ್ತಿರುವ ತಿಕ್ಕಾಟದಲ್ಲಿ ಎಲ್ಲಿ ಬಣ ರಾಜಕೀಯ ಶುರುವಾಗುತ್ತಾ? ಎಂಬ ಅನುಮಾನ ದಟ್ಟವಾಗಿದೆ. ಈ ನಡುವೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿದ್ದ ಕೆಲವು ಮಾಜಿ ಸಚಿವರು ಟ್ವೀಟ್ ಮೂಲಕ ಕಾಂಗ್ರೆಸ್ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಸಿದ್ದು ವಿರುದ್ಧ ಹೀಗೆ ತಿರುಗೇಟು ನೀಡುವ ಪ್ರಯತ್ನಗಳು ಸಾಗಿವೆ. ಇಷ್ಟೆಲ್ಲ ಘರ್ಷಣೆ ಮಧ್ಯೆ ಸಿಎಂ ಅಭ್ಯರ್ಥಿ ಯಾರು ಎಂಬುದನ್ನ ಫೈನಲ್ ಮಾಡಲು ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ತಿಲ್ಲ.
ಸಿದ್ದರಾಮಯ್ಯ ಆಯ್ಕೆ ಬಹುತೇಕ ಫೈನಲ್?
ಮತ್ತೊಂದ್ಕಡೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಸಿದ್ದು ಸಿಎಂ ಆಗುವ ಬಗ್ಗೆ ಒಪ್ಪಿಗೆ ಇದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಡಿ.ಕೆ.ಶಿವಕುಮಾರ್ ಬಿಲ್‌ಕುಲ್ ಒಪ್ಪುತ್ತಿಲ್ಲ. ಚುನಾವಣೆಯಲ್ಲಿ ಪಕ್ಷ ಗೆಲ್ಲಲು ನಾನು ರಣತಂತ್ರ ರೂಪಿಸಿದ್ದೆ, ಹಾಗೇ ಪಕ್ಷದ ಗೆಲುವಿಗೆ ಹಗಲು-ರಾತ್ರಿ ದುಡಿದಿದ್ದೇನೆ. ಇಷ್ಟೆಲ್ಲಾ ಒತ್ತಡಗಳ ನಡುವೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಪಕ್ಷವನ್ನ ಗೆಲ್ಲಿಸಿ ತಂದಿರುವೆ, ಹೀಗಾಗಿ ನನಗೆ ಸಿಎಂ ಸ್ಥಾನ ಬೇಕು ಎನ್ನುತ್ತಿದ್ದಾರಂತೆ. ಆದರೆ ಸಿದ್ದರಾಮಯ್ಯ ಆಯ್ಕೆ ಬಹುತೇಕ ಫೈನಲ್? ಎಂಬ ಮಾತು ಓಡಾಡುತ್ತಿದೆ.
ಒಟ್ನಲ್ಲಿ ಕೆಪಿಸಿಸಿ ಅಧ್ಯಕ್ಷರಾದವರಿಗೆ ಸಿಎಂ ಸ್ಥಾನ ಕೊಡುವುದು ಕಾಂಗ್ರೆಸ್ ವಾಡಿಕೆ. ಆದ್ರೆ ಈ ಬಾರಿ ಎಲ್ಲವೂ ಉಲ್ಟಾ ಆಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಪಡೆ ರಣತಂತ್ರ ಹೆಣೆಯುತ್ತಿದೆ. ಹೀಗಾಗಿ ಈ ಬಾರಿ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದರೆ ಒಳ್ಳೆಯದಲ್ವಾ ಎಂಬ ಆಲೋಚನೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯದ್ದು. ಆದರೆ ಪರಿಸ್ಥಿತಿ ತೀರಾ ಕಗ್ಗಂಟಿನ ಕಡೆಗೆ ಚಲಿಸುತ್ತಿದ್ದು ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕೆಲವೇ ಕ್ಷಣದಲ್ಲಿ ಗೊತ್ತಾಗಲಿದೆ.












Click it and Unblock the Notifications