ಜಯನಗರದ ಚುನಾವಣಾ ವ್ಯಾಜ್ಯ: ಬಿಜೆಪಿ ಶಾಸಕ ರಾಮಮೂರ್ತಿಗೆ ಸಮನ್ಸ್
ಬೆಂಗಳೂರು, ಆಗಸ್ಟ್ 25: 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ದಿನದಂದು ಹೆಚ್ಚು ಸುದ್ದಿಯಾಗಿದ್ದು ಬೆಂಗಳೂರು ನಗರದ ಜಯನಗರ ಕ್ಷೇತ್ರ. ಚುನಾವಣೆಯಲ್ಲಿ 827 ಅಂಚೆ ಮತಗಳನ್ನು ಮರು ಎಣಿಕೆ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಕರ್ನಾಟಕ ಹೈಕೋರ್ಟ್‌ಗೆ ಸಹ ಅರ್ಜಿ ಸಲ್ಲಿಕೆಯಾಗಿದೆ.
ಅಂಚೆ ಮತಗಳನ್ನು ಮರು ಏಣಿಕೆ ಮಾಡುವಂತೆ ಕೋರಿ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ಸಂಬಂಧ ಹೈಕೋರ್ಟ್ ಸಂಬಂಧಪಟ್ಟ ತಹಶೀಲ್ದಾರ್ ಅಥವಾ ವಿಧಾನಸಭೆ ಸಚಿವಾಲಯದಿಂದ ಜಯನಗರದ ಬಿಜೆಪಿ ಶಾಸಕ ಸಿ. ಕೆ. ರಾಮಮೂರ್ತಿಗೆ ಸಮನ್ಸ್ ಜಾರಿಗೊಳಿಸುವಂತೆ ಆದೇಶಿಸಿದೆ.

ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸೌಮ್ಯ ರೆಡ್ಡಿ ಅಂಚೆ ಮತಗಳ ಮರು ಎಣಿಕೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯು ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಅರ್ಜಿದಾರರ ಪರ ವಕೀಲರ ವಾದ ಮಂಡನೆ ಬಳಿಕ ಆಗಸ್ಟ್ 1ರಂದು ಎಲ್ಲಾ ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ, ಬಿಜೆಪಿಯ ಚುನಾಯಿತ ಅಭ್ಯರ್ಥಿ (ಹಾಲಿ ಶಾಸಕ) ಸಿ. ಕೆ. ರಾಮಮೂರ್ತಿ ಸೇರಿ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸಮನ್ಸ್ ಸ್ವೀಕರಿಸಿಲ್ಲ ಎಂದರು.
ಅದಕ್ಕೆ ನ್ಯಾಯಪೀಠ, ಸಿ. ಕೆ. ರಾಮಮೂರ್ತಿಗೆ ಮತ್ತೊಮ್ಮೆ ಸಮನ್ಸ್ ಜಾರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿತು.
ಏನಿದು ಅಂಚೆ ಮತ ವಿವಾದ?; ಜಯನಗರ ವಿಧಾನಸಭಾ ಕ್ಷೇತ್ರಕ್ಕೆ 2023ರ ಮೇ 10ಕ್ಕೆ ಚುನಾವಣೆ ನಡೆದು ಮೇ 13ರಂದು ಮತ ಎಣಿಕೆ ನಡೆಯಿತು. ಈ ಕ್ಷೇತ್ರದಲ್ಲಿ ಒಟ್ಟು 827 ಅಂಚೆ ಮತಗಳು ಚಲಾವಣೆಯಾಗಿದ್ದವು. ಈ ಪೈಕಿ 198 ಮತಗಳನ್ನು ತಿರಸ್ಕೃತಗೊಳಿಸಿ 629 ಮತಗಳನ್ನು ಮಾತ್ರ ಪರಿಗಣಿಸಲಾಗಿತ್ತು.
ಅದರಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 164 ಮತ್ತು ಬಿಜೆಪಿಗೆ ಅಭ್ಯರ್ಥಿಗೆ 415 ಮತಗಳು ಬಂದಿದ್ದವು. ಮತ ಎಣಿಕೆಯ ಕೊನೆಯ 16ನೇ ಸುತ್ತಿನ ಬಳಿಕ ಬಿಜೆಪಿ ಅಭ್ಯರ್ಥಿ 57,297 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ 57,591 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ 294 ಮತಗಳಿಂದ ಮುನ್ನಡೆ ಸಾಧಿಸಿದ್ದರು.
ಆದರೆ, ತಿರಸ್ಕೃತ ಅಂಚೆ ಮತಗಳನ್ನು ಮರುಪರಿಶೀಲಿಸಲು ಚುನಾವಣಾ ವೀಕ್ಷಕರು ಸೂಚಿಸಿದರು. ಅದರಂತೆ ತಿರಸ್ಕೃತ ಅಂಚೆ ಮತಗಳ ಮರು ಪರಿಶೀಲನೆ ನಡೆಯಿತು. ಮಧ್ಯಾಹ್ನ 3.45ರಿಂದ ರಾತ್ರಿ 8.45ರವರೆಗೆ ಹಲವು ಸುತ್ತು ತಿರಸ್ಕೃತ ಮತಗಳ ಮರುಪರಿಶೀಲನೆ ನಡೆಯಿತು. ಇದರಿಂದಾಗಿ ಫಲಿತಾಂಶದಲ್ಲಿ ಏರುಪೇರಾಯಿತು. ಅಂತಿಮವಾಗಿ ಬಿಜೆಪಿ ಅಭ್ಯರ್ಥಿಯನ್ನು ಚುನಾಯಿತ ಎಂದು ಘೋಷಿಸಲಾಯಿತು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅಂಚೆ ಮತಗಳ ಎಣಿಕೆಯ ಪ್ರತಿ ಸುತ್ತಿನ ವಿಡಿಯೋ ಚಿತ್ರೀಕರಣದ ದಾಖಲೆಗಳನ್ನು ಪರಿಶೀಲಿಸಬೇಕು. ಎಲ್ಲಾ 827 ಅಂಚೆ ಮತಗಳ ಮರು ಎಣಿಕೆಗೆ ಆದೇಶಿಸಬೇಕು. ಅಸಿಂಧು ಮತಗಳನ್ನು ಪಡೆದು ಚುನಾಯಿತಗೊಂಡಿರುವ ಬಿಜೆಪಿ ಅಭ್ಯರ್ಥಿಯ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಯನ್ನು ಘೋಷಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.












Click it and Unblock the Notifications