ಬೆಂಗಳೂರಿನಲ್ಲಿ ಈ ಕಾರಣಗಳಿಂದ ಮತ್ತೆ ಸೃಷ್ಟಿಯಾದ ಟ್ರಾಫಿಕ್ ಸಮಸ್ಯೆ: ಸವಾರರಿಗೆ ಕಿರಿಕಿರಿ
ಬೆಂಗಳೂರು, ಏಪ್ರಿಲ್ 06: ರಾಜ್ಯದಲ್ಲಿ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆ ಹಾಗೂ ಮಳೆಯ ಕಾರಣದಿಂದಾಗಿ ಬೆಂಗಳೂರಿನಲ್ಲಿ ಮತ್ತೆ ಸಂಚಾರ ದಟ್ಟಣೆ ಶುರುವಾಯಿತೆ? ಎಂಬ ಪ್ರಶ್ನೆ ಕಾಡುತ್ತಿದೆ. ವಾಹನ ಸವಾರರು ಈ ಹಿಂದಿಗಿಂತಲೂ ಇನ್ನಷ್ಟು ಕಿರಿಕಿರಿ ಅನುಭವಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕರ್ನಾಟಕ ಸಾರ್ವತ್ರಿಕ ಚುನಾವಣೆ ದಿನಾಂಕ ಘೊಷಣೆಯಾದಾಗಿನಿಂದ ನೀತಿ ಸಂಹಿತಿ ಜಾರಿಯಾಗಿದ್ದು, ಚುನಾವಣಾಧಿಕಾರಿಗಳು ಅಗತ್ಯ ಬಿಗಿ ಕ್ರಮ ಕೈಗೊಂಡಿದ್ದಾರೆ ಇದರಿಂದ ಸುಗಮ ರಸ್ತೆ ಸಂಚಾರ ತುಸು ಕಠಿಣವಾಗಲು ಶುರುವಾಗಿದೆ.

ವೈಟ್‌ಫೀಲ್ಡ್, ಮಾರತ್ತಹಳ್ಳಿ, ಕಾಡುಬೀಸನಹಳ್ಳಿ, ಮೈಸೂರು ರಸ್ತೆ, ಕೆಆರ್ ಪುರಂ, ಹೆಬ್ಬಾಳ, ಹೊಸೂರು ಇನ್ನಿತರ ಸಂಚಾರ ದಟ್ಟಣೆಯ ಪ್ರದೇಶಗಳಲ್ಲಿ ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರು ಜಾರಿಗೆ ತಂದ ಹಲವು ಕ್ರಮಗಳಿಂದ ಟ್ರಾಫಿಕ್ ತುಸು ಕಡಿಮೆಯ ಆಗಿತ್ತು.
ಆದರೆ ಚುನಾವಣೆ ಹಿತ ದೃಷ್ಟಿಯಿಂದ, ಅಕ್ರಮ ಪತ್ತೆಗೆ ಚೆಕ್ ಪೋಸ್ಟ್ ತೆರೆಯಲಾಗಿದೆ. ಕೆಲವು ದಿನಗಳಿಂದ ಆಗಾಗ ಮಳೆ ಬಂದು ಹೋಗುತ್ತಿದೆ. ಇವುಗಳಿಂದಾಗಿ ಸಂಚಾರ ದಟ್ಟಣೆ ಕಡಿಮೆಯಾಗಿದ್ದ ಖಷಿ ಇಲ್ಲದಾಗಿದೆ. ಮತ್ತದೇ ಮುಖ್ಯ ರಸ್ತೆಗಳಲ್ಲಿ ಎಂದಿನಂತೆ ವಾಹನ ಸವಾರರು ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.
ಮಾರತಹಳ್ಳಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಮ್
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕೋರಮಂಗಲದಿಂದ ಮಾರತಳ್ಳಿಗೆ ತೆರಳಲು ಸುಮಾರು ಒಂದು ಗಂಟೆ ಬೇಕಾಗುತ್ತಿತ್ತು. ಆದರೆ ಏಪ್ರಿಲ್ 5ರಂದು ಬುಧವಾರ ಬೆಳಿಗ್ಗೆ ಮಾರತಳ್ಳಿಗೆ ಹೋಗಲು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹಿಡಿಯಿತು. ಮಾರತಹಳ್ಳಿ ಜಂಕ್ಷನ್ ನಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ ಸಂಚಾರ ದಟ್ಟಣೆ ಸೃಷ್ಟಿಯಾಗಿದೆ ಎಂದು ಆಟೋರಿಕ್ಷಾ ಚಾಲಕರೊಬ್ಬರು ಮಾಹಿತಿ ನೀಡಿದರು.

ಸಂಚಾರ ವಿಭಾಗದ ವಿಶೇಷ ಆಯುಕ್ತರು ಬಂದಾಗಿನಿಂದ ನಗರದ ಟ್ರಾಫಿಕ್‌ಗೆ ಒಂದಷ್ಟು ಕ್ರಮ ಕೈಗೊಂಡಿದ್ದರು. ಹೀಗಾಗಿ ಕುಮಾರಸ್ವಾಮಿ ಲೇಔಟ್, ಗೊರಗುಂಟೆಪಾಳ್ಯ, ಸಾರಕ್ಕಿ ಮತ್ತು ಬನಶಂಕರಿ ಬಸ್ ಟರ್ಮಿನಲ್ ಅನ್ನು ಸಂಚಾರ ಪೊಲೀಸರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಆದರೆ, ಕಾಡುಬೀಸನಹಳ್ಳಿ, ಸಿಲ್ಕ್ ಬೋರ್ಡ್, ಕೆಆರ್ ಪುರಂ, ಹೆಬ್ಬಾಳ ಮೇಲ್ಸೇತುವೆಯಲ್ಲಿ ಪರಿಸ್ಥಿತಿ ಸುಧಾರಣೆ ಆಗಿಲ್ಲ. ಮಾರತಳ್ಳಿ ಜಂಕ್ಷನ್ ನಲ್ಲೂ ಸಾಕಷ್ಟು ಸಮಸ್ಯೆ ಇದೆ ಎಂದು ತಿಳಿದು ಬಂದಿದೆ.
ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚಾರ ನಿರ್ವಹಣೆ ಸಾಧ್ಯವಾಗಿದೆ. ಆದರೆ, ಮಾರತಹಳ್ಳಿ ಕಡೆಗೆ ಹೋಗುವ ವಾಹನ ಸವಾರರು ಸರ್ವಿಸ್ ರಸ್ತೆ ಪ್ರವೇಶಿಸಿ ಮೇಲ್ಸೇತುವೆ ಮೂಲಕ ಎಡ ತಿರುವು ಪಡೆಯಬೇಕಿದೆ. ಇಲ್ಲಿನ ಸಂಚಾರ ಸಲುಭವಾಗಿರದೆ ಸಾಕಷ್ಟು ಗೊಂದಲಮಯವಾಗಿದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.
ಮಾರತಹಳ್ಳಿ ಕಡೆಗೆ ತೆರಳುವ ವಾಹನ ಸವಾರರು ಎಡಗಡೆಯಿಂದ ಸರ್ವಿಸ್ ರಸ್ತೆಗೆ ತೆರಳುವಂತೆ ಫಲಕಗಳನ್ನು ಹಾಕಿದರೆ ಉತ್ತಮ ಎಂಬ ಮಾತುಗಳು ಪ್ರಯಾಣಿಕರಿಂದ ಕೇಳಿ ಬಂದಿವೆ.
ನಗರದಲ್ಲಿ 100ಕ್ಕೂ ಹೆಚ್ಚು ಚುನಾವಣಾ ಚೆಕ್‌ಪೋಸ್ಟ್
ಈ ಕುರಿತು ಪ್ರತಿಕ್ರಿಯಸಿರುವ ಬೆಂಗಳೂರು ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಎಂ.ಎ.ಸಲೀಂ ಅವರು, ಸಂಚಾರ ಪೊಲೀಸರು ನಗರದ ಪ್ರವೇಶ ಮತ್ತು ನಿರ್ಗಮನ ಸ್ಥಳಗಳ ಮೇಲೆ ವಿಶೇಷ ಗಮನ ಹರಿಸುವ ಮೂಲಕ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಶ್ರಮಿಸುತ್ತಿದ್ದಾರೆ. ಕೆಲವೆಡೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಚುನಾವಣೆ ಹಿತದೃಷ್ಟಿಯಿಂದ ಬೆಂಗಳೂರಿನಲ್ಲಿ 100 ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ಚುನಾವಣಾಧಿಕಾರಿಗಳು ತೆರೆದಿದ್ದಾರೆ. ಅಲ್ಲಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ. ಇದರಿಂದ ಸಂಚಾರ ದಟ್ಟಣೆಯಲ್ಲಿ ಸ್ವಲ್ಪ ಹೆಚ್ಚಳ ಆಗಿರುವ ಸಾಧ್ಯತೆ ಇದೆ. ಜೊತೆಗೆ ಈ ವಾರದ ನಿತ್ಯ ಸಂಜೆ ಮಳೆ ಬಂದಿದೆ. ಇದರಿಂದಲೂ ತುಸು ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿರಬಹುದು ಎಂದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಕಾರಣದಿಂದ ಎಲ್ಲ ವಿಧದ ವಾಹನಗಳನ್ನು ಅಧಿಕಾರಿಗಳು ತಡೆದು ನಿಲ್ಲಿಸಿ ಅಗತ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಇದು ಸಹ ಸುಗಮ ಸಂಚಾರಕ್ಕೆ ತುಸು ಹಿನ್ನಡೆ ಉಂಟು ಮಾಡಿರಬಹುದು. ಬೆಂಗಳೂರು ಟ್ರಾಫಿಕ್ ಪೊಲೀಸರೂ ಇದೇ ತಪಾಸಣೆ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಅಗತ್ಯವಿದ್ದಕಡೆ ಸಂಚಾರ ದಟ್ಟಣೆ ನಿರ್ವಹಿಸಲು ಕಷ್ಟಸಾಧ್ಯಾವಾಗಿದೆ ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications