Ejipura Flyover: ಈಜಿಪುರ ಫ್ಲೈಓವರ್ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ? ಇಲ್ಲಿದೆ ಅಪ್ಡೇಟ್
ಬೆಂಗಳೂರಿನ ಈಜಿಪುರ ಫ್ಲೈಓವರ್ ಪೂರ್ಣಗೊಳಿಸಿ ಎನ್ನುವುದು ಈ ಭಾಗದ ಜನರ ಬಹುವರ್ಷಗಳ ಬೇಡಿಕೆ. ವರ್ಷಗಳು ಉರುಳುತ್ತಿದ್ದರೂ ಈ ಫ್ಲೈಓವರ್ ಕೆಲಸ ಮುಗಿಯುತ್ತಿಲ್ಲ, ವಾಹನ ಸವಾರರಿಗೆ ಪ್ರತಿದಿನವೂ ಗೋಳಾಟ ತಪ್ಪುತ್ತಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ನಾಗರಿಕರು ಆಕ್ರೋಶ ಹೊರಹಾಕುತ್ತಿದ್ದರೂ ಸಮಸ್ಯೆ ಎಂದಿನಂತೆಯೇ ಇದೆ. ಈ ಫ್ಲೈಓವರ್ ರೆಡಿಯಾಗೋದನ್ನ ನಾವು ನೋಡ್ತೀವಾ? ಎಂದು ಕನಸು ಕಂಡಿರುವವರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಖುಷಿಯ ವಿಚಾರವೊಂದನ್ನು ತಿಳಿಸಿದ್ದಾರೆ.
ಈಜಿಪುರ ಫ್ಲೈಓವರ್ ಕಾಮಗಾರಿ ಪ್ರಗತಿ ಕುರಿತು ಬಿಟಿಎಂ ಲೇಔಟ್ ಶಾಸಕರೂ ಆಗಿರುವ ಸಚಿವ ರಾಮಲಿಂಗಾರೆಡ್ಡಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸುಮಾರು 2.5 ಕಿಲೋಮೀಟರ್ ಉದ್ದದ ಈ ಈಜಿಪುರ ಮೇಲ್ಸೇತುವೆಯ 250ಕ್ಕೂ ಹೆಚ್ಚು ಪ್ರಿಕಾಸ್ಟ್ ಭಾಗಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಕೂಡ ಪೂರ್ಣಗೊಳ್ಳುವ ಹಂತದಲ್ಲಿದೆ. ಸದ್ಯಕ್ಕೆ ಈ ಯೋಜನೆಯು ವೇಗ ಪಡೆದುಕೊಂಡಿದ್ದು, ಶೇಕಡಾ 50 ರಷ್ಟು ಕೆಲಸ ಈಗಾಗಲೇ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.

ಫ್ಲೈಓವರ್ ಕಾಮಗಾರಿಗಾಗಿ ಒಟ್ಟು 726 ಕಾಂಕ್ರೀಟ್ ಸ್ಲ್ಯಾಬ್‌ಗಳಲ್ಲಿ 291 ಸ್ಲ್ಯಾಬ್‌ಗಳನ್ನು ನಿರ್ಮಿಸಲಾಗಿದೆ, ಬಾಕಿ ಇನ್ನೂ 220 ಸ್ಲ್ಯಾಬ್‌ಗಳು ಕೂಡ ಸಿದ್ಧವಾಗಿವೆ. ಅವುಗಳನ್ನು ಸರಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯನ್ನು ವೇಗವಾಗಿ ಪೂರ್ಣಗೊಳಿಸಬೇಕು ಎಂಬ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗಿದೆ. ಇದನ್ನು ಬಿಬಿಎಂಪಿ ಮುಖ್ಯ ಇಂಜಿನಿಯರ್ ರಾಘವೇಂದ್ರ ಪ್ರಸಾದ್ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ವಿವರಿಸಿದ್ದಾರೆ.
ಗುಣಮಟ್ಟ ಮತ್ತು ನಿಯಂತ್ರಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳನ್ನು ಒಳಗೊಂಡ ಹೊಸ ತಂಡವು ಈ ಯೋಜನೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಕಾಮಗಾರಿಯನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿಯೂ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಈ ಯೋಜನೆಯ ಪ್ರಗತಿಯನ್ನು ಕಣ್ಗಾವಲು ಮಾಡಲು ಕ್ಯಾಮೆರಾಗಳನ್ನು ಕೂಡ ಅಳವಡಿಸಲಾಗಿದೆ. ಈಗಾಗಲೇ ನಿರ್ಮಿಸಲಾದ ಸ್ಲ್ಯಾಬ್‌ಗಳನ್ನು ಎತ್ತುವುದು, ನಿರ್ಮಿಸುವುದರ ಜೊತೆಗೆ, ಎಂಜಿನಿಯರ್‌ಗಳು ಡಾಂಬರು ಮತ್ತು ಪಾದಚಾರಿ ಮಾರ್ಗದ ಕೆಲಸವನ್ನು ಕೂಡ ಶುರು ಮಾಡಿದ್ದಾರೆ. ಫ್ಲೈಓವರ್ ನಿರ್ಮಾಣದ ಜೊತೆ ಜೊತೆಗೆ ಈ ಕೆಲಸಗಳನ್ನೂ ಪೂರ್ಣಗೊಳಿಸಲಾಗುತ್ತಿದೆ. ಭೂಸ್ವಾಧೀನ ಮುಗಿದ ನಂತರ ಡಿಸೆಂಬರ್ ವೇಳೆಗೆ ಈ ಯೋಜನೆ ಸಿದ್ಧವಾಗಲಿದೆ ಎಂದು ಹೇಳಲಾಗುತ್ತಿದೆ.

ಇಲ್ಲಿ ದೊಡ್ಡ ಸಮಸ್ಯೆಯಾಗಿದ್ದ ಭೂಸ್ವಾಧೀನದ ಪ್ರಕ್ರಿಯೆಯನ್ನು ಪರಿಹರಿಸಲಾಗಿದೆ. ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮತ್ತು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಕೂಡ ಈ ಯೋಜನೆಗೆ ಅಗತ್ಯವಿರುವ ಭೂಮಿ ನೀಡಲು ಒಪ್ಪಿದೆ ಎನ್ನಲಾಗಿದೆ. ಸೇಂಟ್ ಜಾನ್ಸ್ ಆಸ್ಪತ್ರೆ ರಸ್ತೆಯಿಂದ ಸರ್ಜಾಪುರದವರೆಗೆ ಸುಮಾರು ಆರು ಸಾವಿರ ಚದರ ಮೀಟರ್ ವಿಸ್ತೀರ್ಣವನ್ನು ಪಿಯರ್‌ಗಳು ಮತ್ತು ಕಂಬಗಳನ್ನು ನಿರ್ಮಿಸಲು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಇಲ್ಲಿನ ಅಧಿಕಾರಿಗಳು ವಿವರಿಸಿದ್ದಾರೆ.
ಕೇಂದ್ರೀಯ ಸದನದ ಬಲಭಾಗದಲ್ಲಿರುವ ಈ ಪ್ರದೇಶದಲ್ಲಿ 917 ಚದರ ಮೀಟರ್ ವಿಸ್ತೀರ್ಣವನ್ನು ಕೂಡ ಸ್ವಾಧೀನಪಡಿಸಿಕೊಳ್ಳಲಾಗುವುದು. ಇದಕ್ಕಾಗಿ ಆಸ್ಪತ್ರೆ ಅಧಿಕಾರಿಗಳು ಪರಿಹಾರವನ್ನು ಕೇಳಿದ್ದಾರೆ. ಮಡಿವಾಳದಲ್ಲೂ 623 ಚದರ ಮೀಟರ್ ವಿಸ್ತೀರ್ಣದ ನಾಲ್ಕು ಆಸ್ತಿಗಳು ಮತ್ತು ಈಜಿಪುರ ಬಳಿ 986 ಚದರ ಮೀಟರ್ ವಿಸ್ತೀರ್ಣದ 32 ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟಾರೆ ಹಲವು ವರ್ಷಗಳಿಂದ ಈಡೇರದ ಈ ಫ್ಲೈಓವರ್ ಕನಸು ಈ ವರ್ಷವಾದರೂ ನನಸಾಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ..












Click it and Unblock the Notifications