Ejipura Flyover: 3ನೇ ಬಾರಿಗೆ ಈಜಿಪುರ-ಕೇಂದ್ರಿಯ ಸದನ ಮೇಲ್ಸೇತುವೆ ಟೆಂಡರ್ ರದ್ದು, ಕಾರಣ ಇಲ್ಲಿದೆ
2017 ರಲ್ಲಿ, ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಸಂಸ್ಥೆಗೆ ಡಿಸೆಂಬರ್ 2019ರೊಳಗೆ ಈಜಿಪುರ - ಕೇಂದ್ರಿಯ ಸದನ ಮೇಲ್ಸೇತುವೆ ಕಾಮಗಾರಿ ಮುಗಿಸುವಂತೆ ಟೆಂಡರ್ ನೀಡಲಾಗಿತ್ತು.
ಬೆಂಗಳೂರು, ಫೆಬ್ರವರಿ. 23: ಸಿಲಿಕಾನ್ ಸಿಟಿಯ ಬಹು ಬೇಡಿಕೆಯ ಈಜಿಪುರ - ಕೇಂದ್ರಿಯ ಸದನ ಮೇಲ್ಸೇತುವೆ ಕಾಮಗಾರಿ ಮುಗಿದು ಟ್ರಾಪಿಕ್ ಸಮಸ್ಯೆ ಪರಿಹಾರವಾಗುವುದು ಇನ್ನೂ ದೂರದ ಮಾತೆ ಆಗಿದೆ. ಏಕೆಂದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೂರನೇ ಬಾರಿಗೆ ಈಜಿಪುರ - ಕೆಂದ್ರಿಯ ಸದನ ಫ್ಲೈಓವರ್ ಟೆಂಡರ್ ಅನ್ನು ರದ್ದುಗೊಳಿಸಿದೆ.
ಈ ವರ್ಷದ ಜನವರಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು 144 ಕೋಟಿ ರೂಪಾಯಿ ಮೌಲ್ಯದ ಟೆಂಡರ್‌ಗೆ ಬಿಬಿಎಂಪಿ ಬಿಡ್‌ಗಳನ್ನು ಆಹ್ವಾನಿಸಿತ್ತು. ಆದರೆ, ವೆಚ್ಚದ ಅಂದಾಜಿನ ಮೇಲೆ ಫೆಬ್ರವರಿ 17 ರಂದು ನಾಗರಿಕ ಸಂಸ್ಥೆ ಟೆಂಡರ್ ಅನ್ನು ರದ್ದುಗೊಳಿಸಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಹಣಕಾಸಿನ ಅಂದಾಜು ವೆಚ್ಚ ಹೆಚ್ಚಾಗುವ ಹಿನ್ನೆಲೆ ಟೆಂಡರ್ ರದ್ದು ಮಾಡಲಾಗಿದೆ.

"ಏಕೈಕ ಬಿಡ್ಡರ್ ಆಗಿದ್ದ ಬಿಎಸ್‌ಸಿಪೊಎಲ್( BSCPL) ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ 205 ಕೋಟಿ ರೂಪಾಯಿಗೆ ಬಿಡ್ ಮಾಡಿತ್ತು . ಅದು ನಮ್ಮ ಅಂದಾಜಿಗಿಂತ ಹೆಚ್ಚು. ಆದ್ದರಿಂದ ನಮಗೆ ಹಣಕಾಸಿನ ಅನುಮೋದನೆ ಸಿಗಲಿಲ್ಲ. ಈಗ ನಾವು ಖಾಸಗಿ ಸಲಹಾ ಮಂಡಳಿ ಸಹಾಯದಿಂದ ಬೆಲೆ ಅಂದಾಜು ಪರಿಶೀಲಿಸುತ್ತೇವೆ. ನಮ್ಮ ವೆಚ್ಚದ ಅಂದಾಜು ಸಂಸ್ಥೆಯು ಕೇಳಿದ್ದಕ್ಕಿಂತ ತೀರಾ ಕಡಿಮೆ ಇದೆಯೇ ಎಂದು ವಿಶ್ಲೇಷಣೆ ಮಾಡಲು ನಮಗೆ ಸಹಾಯ ಮಾಡುತ್ತದೆ. ವಿಶ್ಲೇಷಣೆ ಮುಗಿದ ನಂತರ, ನಾವು ಹೊಸ ಟೆಂಡರ್ ಕರೆಯುತ್ತೇವೆ " ಎಂದು ಹೆಸರೆಳಲು ಇಚ್ಚಿಸದ ಬಿಬಿಎಂಪಿ ಎಂಜಿನಿಯರ್ ಒಬ್ಬರನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
ಹಣದ ದುರುಪಯೋಗ ಮತ್ತು ನಾಲ್ಕು ಪಥದ ಫ್ಲೈಓವರ್ ಅನ್ನು ನಿರ್ಮಿಸುವಲ್ಲಿ ವಿಳಂಬವಾದ ಆರೋಪದ ಮೇಲೆ, ಫೆಬ್ರವರಿ 2022 ರಲ್ಲಿ ಕರ್ನಾಟಕ ಹೈಕೋರ್ಟ್ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಿಸಲು ನಾಗರಿಕ ಸಂಸ್ಥೆಗೆ ನಿರ್ದೇಶನ ನೀಡಿದೆ. ಹೀಗಾಗಿ ಬಿಬಿಎಂಪಿ ಸಂಸ್ಥೆಗೆ ನೀಡಿದ್ದ ಟೆಂಡರ್ ಅನ್ನು ರದ್ದುಗೊಳಿಸಿತ್ತು. ಬಳಿಕ ಆಗಸ್ಟ್ 2022 ರಲ್ಲಿ, ಬಿಬಿಎಂಪಿ ಕೆಲವು ಕಾರಣಗಳಿಂದ ಮತ್ತೊಂದು ಟೆಂಡರ್ ರದ್ದುಗೊಳಿಸಿತು. ಈ ವರ್ಷದ ಜನವರಿಯಲ್ಲಿ ಬಿಬಿಎಂಪಿ, ಮೂರನೇ ಬಾರಿಗೆ, ಫ್ಲೈಓವರ್ ಯೋಜನೆಯನ್ನು ಮುಗಿಸಲು ಟೆಂಡರ್ ಆಹ್ವಾನಿಸಿತ್ತು. ಅದನ್ನು ಈಗ ರದ್ದು ಮಾಡಿದೆ.
2017 ರಲ್ಲಿ, ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಸಂಸ್ಥೆಗೆ ಡಿಸೆಂಬರ್ 2019ರೊಳಗೆ ಕಾಮಗಾರಿ ಮುಗಿಸುವಂತೆ ಟೆಂಡರ್ ನೀಡಲಾಗಿತ್ತು. ಆದರೆ, 2022 ರಲ್ಲಿ ಕೇವಲ 32% ಕೆಲಸಗಳು ಪೂರ್ಣಗೊಂಡಿವೆ. ಇದು ಸ್ಥಳೀಯ ನಿವಾಸಿಗಳ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಇತ್ತೀಚೆಗೆ ಈಜಿಪುರ ಜಂಕ್ಷನ್‌ನ ವಿವಿಧ ಹಂತಗಳಲ್ಲಿ ನಿಂತ ಪ್ರತಿಭಟನಾಕಾರರು ಕೈಗಳಲ್ಲಿ 'ರಸ್ತೆ ಇಲ್ಲ, ಮತ ಇಲ್ಲ', 'ನಮಗೆ ರಸ್ತೆ ಬೇಕು', 'ಮೇಲ್ಸೇತುವೆ ಬೇಕು' ಎಂಬ ಭಿತ್ತಿಪತ್ರಗಳನ್ನು ಹಿಡಿದು, ಸರ್ಕಾರದ ವಿಳಂಬ ನೀತಿಗೆ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದರು.

ಫೆಬ್ರವರಿ 18 ರಂದು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು 100 ಅಡಿ ರಿಂಗ್ ರಸ್ತೆಯಲ್ಲಿರುವ ಸೋನಿ ವರ್ಲ್ಡ್ ಜಂಕ್ಷನ್‌ನಲ್ಲಿ ಈಜಿಪುರ - ಕೆಂದ್ರಿಯ ಸದನ ಫ್ಲೈಓವರ್ ವಿಳಂಬದ ವಿರುದ್ಧ ಪ್ರತಿಭಟನೆ ನಡೆಸಿದ್ದರು.












Click it and Unblock the Notifications