• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿಗೂ ಬಿತ್ತು ಆರ್ಥಿಕ ಹಿಂಜರಿತದ ಪೆಟ್ಟು; ಮಕಾಡೆ ಮಗುಚಿದ ಕೈಗಾರಿಕೆಗಳು

|

ಬೆಂಗಳೂರು, ಅಕ್ಟೋಬರ್ 17: ಗಾಯದ ಮೇಲೆ ಬರೆ ಎಳೆದರು ಎಂಬ ಮಾತಿದೆ. ಆ ಮಾತಿಗೆ ತಕ್ಕಂತೆ ಆರ್ಥಿಕ ಹಿಂಜರಿತದ ಬಿಸಿ ದೊಡ್ಡ ಕೈಗಾರಿಕೆಗಳು ಮಾತ್ರವಲ್ಲ, ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳಿಗೂ ತಾಗುತ್ತಿದೆ. ಬೆಂಗಳೂರಿನ ಹಲವು ಸಂಸ್ಥೆಗಳು ಒಂದೋ ತಮ್ಮ ಸಿಬ್ಬಂದಿಯನ್ನು ಉದ್ಯೋಗದಿಂದ ತೆಗೆಯುತ್ತಿದೆ ಅಥವಾ ಈಗಿನ ಸಂಬಳಕ್ಕಿಂತ ಮೂವತ್ತು ಪರ್ಸೆಂಟ್ ಕಡಿಮೆ ಪಡೆಯುವ ಹಾಗಿದ್ದರೆ ಮುಂದುವರಿಯಿರಿ ಎನ್ನುತ್ತಿವೆ.

ಈಗಿನ ಸನ್ನಿವೇಶದಿಂದ ತೊಂದರೆಗೆ ಈಡಾದ ನೌಕರರು ರಾಜ್ಯ ಕಾರ್ಮಿಕ ಇಲಾಖೆ ಮೊರೆ ಹೋಗಿದ್ದು, ತಮ್ಮ ಉದ್ಯೋಗ ಹಾಗೂ ಸಂಬಳವನ್ನು ಮುಂದುವರಿಸಲು ಕಂಪೆನಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

'ಮ.ಮೋ.ಸಿಂಗ್- ರಘುರಾಮ್ ರಾಜನ್ ಕಾಲದಲ್ಲಿ ಬ್ಯಾಂಕ್ ಗಳ ಸ್ಥಿತಿ ಕೆಟ್ಟದಾಗಿತ್ತು'

ಕಾರ್ಮಿಕ ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ, ಇಂಥ 'ನ್ಯಾಯಸಮ್ಮತ ಅಲ್ಲದ ಪದ್ಧತಿ' ನಮ್ಮ ಗಮನಕ್ಕೂ ಬಂದಿದೆ. ಅದರಲ್ಲೂ ಕೆಲವು ಕಂಪೆನಿಗಳಲ್ಲಿ ವೇತನ ಕಡಿತ ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ತನಿಖೆಗೆ ಆದೇಶ ಮಾಡಿದ್ದೇವೆ ಎಂದಿದ್ದಾರೆ. "ಮಾಲೀಕರು ಹಾಗೂ ಸಿಬ್ಬಂದಿ ಜತೆ ಚರ್ಚೆ ನಡೆಸಿ, ವಾಸ್ತವವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ" ಎಂದು ಹೇಳಿದ್ದಾರೆ.

ಅಟೋಮೋಟಿವ್, ಟೆಕ್ಸ್ ಟೈಲ್ಸ್ ಹಾಗೂ ಉತ್ಪಾದನಾ ವಲಯಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದಿದೆ. ಇನ್ನು ಪೀಣ್ಯದ ಕೈಗಾರಿಕೆ ಪ್ರದೇಶದ ಎಷ್ಟೋ ಕೈಗಾರಿಕೆಗಳಲ್ಲಿ ಒಂದು ಪಾಳಿಯ ಕೆಲಸ ಕೂಡ ಸಿಗುತ್ತಿಲ್ಲ. ಹಲವು ಕಾರ್ಮಿಕರಿಗೆ ಕೆಲಸವೇ ಇಲ್ಲ. ಆದರೆ ಸಂಬಳ ಅಂತೂ ಪಾವತಿ ಮಾಡಲೇ ಬೇಕಾಗುತ್ತದೆ.

ಆಟೋಮೋಟಿವ್ ಉತ್ಪಾದನೆ ಸಂಸ್ಥೆಯೊಂದರಲ್ಲಿ ಸಾವಿರ ಸಿಬ್ಬಂದಿಗೆ ಕೆಲಸ ಬಿಡಲು ಹೇಳಲಾಗಿದೆ. ಇನ್ನೊಂದು ಸಂಸ್ಥೆಯಲ್ಲೂ ಅದೇ ಸ್ಥಿತಿ ಇದೆ. ಕೈಗಾರಿಕೆಗಳು ಈ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ಕಾರ್ಮಿಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಕಾರ್ಮಿಕ ಇಲಾಖೆಯ ಮೂಲಗಳು ಮಾಧ್ಯಮವೊಂದಕ್ಕೆ ತಿಳಿಸಿವೆ.

IMFನಿಂದ 2019ನೇ ಸಾಲಿನ ಭಾರತ ಜಿಡಿಪಿ ಅಂದಾಜು 6.1 ಪರ್ಸೆಂಟ್ ಗೆ ಇಳಿಕೆ

ಪೀಣ್ಯ ಇಂಡಸ್ಟ್ರೀಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಮೈಲಾದ್ರಿ ರೆಡ್ಡಿ ಮಾಧ್ಯಮವೊಂದರ ಜತೆ ಮಾತನಾಡಿ, ಪೀಣ್ಯದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳಿವೆ. ಅದರಲ್ಲಿ ಕನಿಷ್ಠ ನಲವತ್ತು- ಐವತ್ತು ಪರ್ಸೆಂಟ್ ಕೈಗಾರಿಕೆಗಳ ಮೇಲೆ ಪ್ರಭಾವ ಆಗಿದೆ. ಒಂದೋ ಅವರಿಗೆ ಆರ್ಡರ್ ಸಿಗ್ತಿಲ್ಲ ಅಥವಾ ಹಣ ಪಾವತಿ ಆಗ್ತಿಲ್ಲ. ಆರ್ಡರ್ ಇಲ್ಲದಿದ್ದರೆ ಕೆಲಸವೂ ಇಲ್ಲ. ಈ ಕೈಗಾರಿಕೆಗಳೆಲ್ಲ ತಲಾ ಎಂಟು ಗಂಟೆಯಂತೆ ಮೂರು ಶಿಫ್ಟ್ (ಪಾಳಿ) ಮಾಡುವಂಥವು ಎಂದಿದ್ದಾರೆ.

ಈಗಿನ ಸ್ಥಿತಿಯಲ್ಲಿ ಒಂದು ಶಿಫ್ಟ್ ಕೆಲದ ಕೂಡ ಆಗುತ್ತಿಲ್ಲ. ಆರ್ಡರ್ ಇಲ್ಲದೆ ಕೆಲಸ ಇಲ್ಲ. ಅಪಾರ ಸಂಖ್ಯೆಯ ಜನರು ಈ ಕೈಗಾರಿಕೆಗಳ ಮೇಲೆ ಅವಲಂಬಿತರಾಗಿದ್ದಾರೆ. ಸದ್ಯಕ್ಕೆ ಯಾವುದೇ ಕೈಗಾರಿಕೆಗಳು ಮುಚ್ಚುತ್ತಿಲ್ಲ. ಆದರೆ ತೀರಾ ಕಷ್ಟದಿಂದ ಸಂಬಳ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಪೀಣ್ಯ ಕೈಗಾರಿಕೆಗಳ ಮತ್ತೊಂದು ಮೂಲ ಹೇಳುವ ಪ್ರಕಾರ, ಇದು ನೇರವಾಗಿ ಕೈಗಾರಿಕೆಗಳನ್ನು ಮುಚ್ಚುವುದು ಎನ್ನುತ್ತಿಲ್ಲ. ಆದರೆ ಪ್ರತಿ ವರ್ಷ ಆಯುಧಪೂಜೆ ಅಥವಾ ದೀಪಾವಳಿಯಲ್ಲಿ ಕೈಗಾರಿಕೆಗಳಿಂದ ಬೋನಸ್ ಅಥವಾ ಉಡುಗೊರೆಗಳನ್ನು ಕಾರ್ಮಿಕರಿಗೆ ನೀಡುತ್ತಿದ್ದರು. ಇನ್ನು ರಜಾ ದೊರೆಯುವುದು ದೂರದ ಮಾತಾಯಿತು. ಈ ಸಮಯದಲ್ಲಿ ಸಿಕ್ಕಾಪಟ್ಟೆ ಕೆಲಸ ಇರುತ್ತಿತ್ತು. ಆದರೆ ಈ ಸಲ ಬೋನಸ್ ಇಲ್ಲ. ಜತೆಗೆ ಒಂದೆರಡು ತಿಂಗಳು ಬಿಟ್ಟು ಬನ್ನಿ ಎಂದು ಕಾರ್ಮಿಕರಿಗೆ ಹೇಳುತ್ತಿರುವುದಾಗಿ ತಿಳಿಸಲಾಗಿದೆ.

English summary
Due to economy slowdown huge impact on Bengaluru industries. Here is the detail report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X