Bengaluru Rain: ಅಪಾರ್ಟ್‌ಮೆಂಟ್ ನಿವಾಸಿಗಳನ್ನ ಟ್ರಾಕ್ಟರ್‌ನಲ್ಲಿ ಡ್ರಾಪ್ ಮಾಡಿಸಿದ ಮಳೆರಾಯ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯಿಡೀ ಭಾರಿ ಮಳೆ ಸುರಿದು ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ನಗರದಾದ್ಯಂತ ವರುಣಾರ್ಭಟಕ್ಕೆ ನಿವಾಸಿಗಳು ನಲುಗಿದ್ದು, ಅಪಾರ್ಟ್‌ಮೆಂಟ್ ನಿವಾಸಿಗಳು ಬಯಸಿದ್ದ ಲೇಕ್‌ವ್ಯೂ ಬೆಳಗಾಗುವಷ್ಟರಲ್ಲಿ ತನ್ನ ಬಾಗಿಲ ಮುಂದೆಯೇ ಪ್ರತ್ಯಕ್ಷವಾಗಿದೆ.
ಧಾರಾಕಾರ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ಗಳು ಜಲಾವೃತಗೊಂಡಿವೆ. ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ವಾಹನಗಳೆಲ್ಲ ಮುಳುಗಡೆಯಾಗಿವೆ. ಬೆಂಗಳೂರಿನ ಹಲವು ಅಪಾರ್ಟ್‌ಮೆಂಟ್‌ಗಳು ಕೆರೆಗಳ ಆಸುಪಾಸಿನಲ್ಲೇ ಇರುವುದರಿಂದ ಇದನ್ನು ಲೇಕ್‌ವ್ಯೂ ಹೆಸರಲ್ಲಿ ಗ್ರಾಹಕರನ್ನು ಸೆಳೆಯುತ್ತಾರೆ.

ಇದನ್ನು ಆಸೆಪಟ್ಟು ಅಪಾರ್ಟ್‌ಮೆಂಟ್ ಖರೀದಿಸಿದವರಿಗೆ ಮಳೆ ಆಗಾಗ ಸುನಾಮಿಯ ಫೀಲ್ ಅನ್ನೇ ತರಿಸುತ್ತಿದೆ. ಬಾಲ್ಕನಿಯಿಂದ ನಿಂತಾಗ ಕಾಣುತ್ತಿದ್ದ ಲೇಕ್‌ವ್ಯೂ ಈಗ ಮಳೆ ಬಂದರೆ, ಮನೆಬಾಗಿಲಿನವರೆಗೆ ಬರುತ್ತಿದೆ. ಯಲಹಂಕ ಬಳಿಯ ಬಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲೂ ಇದೇ ಕಥೆ ವರದಿಯಾಗಿದೆ.
ಯಲಹಂಕದ ಸಿಗ್ನಲ್ ಬಳಿ ಇರುವ ಕೇಂದ್ರೀಯ ವಿಹಾರ ನಿವಾಸಿಗಳ ಪಾಡು ಹೇಳತೀರದಾಗಿದೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಅಪಾರ್ಟ್‌ಮೆಂಟ್ ಆವರಣವೆಲ್ಲ ಸಂಪೂರ್ಣವಾಗಿ ಜಲಾವೃತವಾಗಿದೆ. ಹೀಗಾಗಿ ಅಲ್ಲಿದ್ದ ವಾಹನಗಳು ಕೂಡ ನೀರಿನಲ್ಲಿ ಮುಳುಗಿವೆ. ಹೊರಗಿನಿಂದಲೂ ಯಾವುದೇ ವಾಹನ ಒಳಗೆ ಹೋಗಲಾರದ ಸ್ಥಿತಿ ಒಂದೆಡೆಯಾದರೆ, ಒಳಗಿರುವವರು ಹೊರಗೆ ಬರಲಾಗದ ಫಜೀತಿ ವೀಕೆಂಡ್ ದಿನವೇ ವಕ್ಕರಿಸಿದೆ.
ಕೆಲವರು ಅಪಾರ್ಟ್‌ಮೆಂಟ್‌ನಿಂದ ಹೊರಬರಲು, ಒಳಗೆ ಹೋಗಲು ನಾನಾ ಕಸರತ್ತು ಮಾಡಿದ್ದಾರೆ. ಕೊನೆಗೆ ಅಲ್ಲಿ ಕಾರ್ಯಾಚರಣೆಗೆ ಬಂದಿದ್ದ ಟ್ರ್ಯಾಕ್ಟರ್‌ನಲ್ಲೇ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಡ್ರಾಪ್ ಕೊಟ್ಟಿರುವ ಪ್ರಸಂಗ ನಡೆದಿದೆ. ಐಷಾರಾಮಿ ಕಾರುಗಳು, ಸ್ವಂತ ವಾಹನಗಳಿದ್ದರೂ ಮಳೆ ಸೃಷ್ಟಿಸಿರುವ ಅವಾಂತರಕ್ಕೆ ಟ್ರ್ಯಾಕ್ಟರ್‌ನಲ್ಲಿ ಡ್ರಾಪ್ ಪಡೆಯುವ ಸ್ಥಿತಿ ಬಂದೊದಗಿದೆ.

ಇದಕ್ಕೆ ಸಂಬಂಧಿಸಿದ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವೃದ್ಧರು, ಮಕ್ಕಳು ಸೇರಿದಂತೆ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಕುಟುಂಬಗಳು ಟ್ರಾಕ್ಟರ್ ಹತ್ತಿ ಹೊರಗೆ ಬಂದಿಳಿದಿದ್ದಾರೆ. ಮಳೆಗೆ ಹಿಡಿಶಾಪ ಹಾಕುವ ಜೊತೆಗೆ ಇಂತಹ ದುಸ್ಥಿತಿಗೆ ಕಾರಣವಾದ ಬಿಲ್ಡರ್‌ಗಳನ್ನು ಕೂಡ ಬಾಯಿತುಂಬ ಬೈದುಕೊಂಡಿದ್ದಾರೆ.
ರಾಜಕಾಲುವೆಗಳು ಒತ್ತುವರಿಯಾಗಿರುವ ಹಲವೆಡೆ ಇದೇ ರೀತಿಯ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗಿದ್ದು, ಮಳೆ ಬಂದಾಗಲೆಲ್ಲ ಈ ಪರದಾಟದಿಂದ ನಗರವಾಸಿಗಳು ಬೇಸತ್ತಿದ್ದಾರೆ. ಒಟ್ಟಾರೆ ನಿನ್ನೆ ಕೇವಲ ಒಂದೆರಡು ಗಂಟೆ ಸುರಿದ ಮಳೆಗೆ ಸಿಲಿಕಾನ್ ಸಿಟಿ ಮಂದಿ ಶಾಕ್‌ಗೆ ಒಳಗಾಗಿದ್ದಾರೆ. ಇಂದು ಮಧ್ಯಾಹ್ನವಾದರೂ ಅಪಾರ್ಟ್‌ಮೆಂಟ್‌ಗಳ ಬಳಿ ನೀರು ನಿಂತೇ ಇದೆ. ಕೆಲವೆಡೆ ನಿಂತ ನೀರನ್ನು ಪಂಪ್ ಮೂಲಕ ತೆರವು ಮಾಡುವ ಕೆಲಸ ಕೂಡ ನಡೆಯುತ್ತಿದೆ. ಮಳೆಯಿಂದಾಗಿ ಸಿಟಿ ಮಂದಿಗೆ ವೀಕೆಂಡ್ ಮೂಡ್ ಹಾಳಾಗಿದೆ.

ಮತ್ತೊಂದೆಡೆ ನಿನ್ನೆ ಸುರಿದ ಮಳೆಯಿಂದ ನಲುಗಿರುವ ಬಹುತೇಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಅಂದ್ರೆ ಇದೇನಾ? ಎಂದು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ.ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ, ಬ್ರ್ಯಾಂಡ್ ಬೆಂಗಳೂರು ಎನ್ನುವುದು ಕೇವಲ ಘೋಷಣೆಗೆ ಸೀಮಿತ. ನಾವು ಪರದಾಡುವುದು ತಪ್ಪುತ್ತಿಲ್ಲ. ಇದಕ್ಕಾಗಿ ಧನ್ಯವಾದ ಎಂದು ವ್ಯಂಗ್ಯವಾಗಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ.












Click it and Unblock the Notifications