Bengaluru 2nd Airport: ಈ ಕಾರಣಕ್ಕೆ ನೆಲಮಂಗಲ ಬಳಿ ಬೆಂಗಳೂರು ಎರಡನೇ ಏರ್‌ಪೋರ್ಟ್ ನಿರ್ಮಾಣ ಡೌಟ್
ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಮೂರು ಸ್ಥಳಗಳನ್ನು ಅಂತಿಮಗೊಳಿಸಿ ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿದೆ. ಈ ಪೈಕಿ ನೆಲಮಂಗಲದ ಕುಣಿಗಲ್ ಸಮೀಪ ಒಂದು ಜಾಗ ನಿಗದಿಯಾಗಿದೆ. ಮತ್ತೆರಡು ಸ್ಥಳಗಳು ಕನಕಪುರ ರಸ್ತೆಯಲ್ಲಿ ಫಿಕ್ಸ್ ಆಗಿವೆ. ಆದರೆ, ನೆಲಮಂಗಲ ಬಳಿ ಗುರುತಿಸಲಾದ ಜಾಗದಲ್ಲಿ ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕೆ ಹಲವು ತೊಡಕುಗಳಿವೆ. ಹಾಗಾಗಿ ಇಲ್ಲಿ ಏರ್‌ಪೋರ್ಟ್ ಬರುವುದು ಅನುಮಾನ ಎಂದೂ ಹೇಳಲಾಗುತ್ತಿದೆ. ಇದಕ್ಕೆ ಕಾರಣಗಳೇನು ಗೊತ್ತಾ?
ಬೆಂಗಳೂರು ಎರಡನೇ ಏರ್‌ಪೋರ್ಟ್‌ಗಾಗಿ ನೆಲಮಂಗಲ-ಹಾಸನ ಹೆದ್ದಾರಿ ಜಂಕ್ಷನ್‌ನಿಂದ ಸುಮಾರು 10 ಕಿ.ಮೀ ದೂರದಲ್ಲಿ ಒಂದು ಸ್ಥಳ ಗುರುತಿಸಲಾಗಿದೆ. ಕನಕಪುರ ರಸ್ತೆ ಹಾಗೂ ನೈಸ್ ರಸ್ತೆ ಜಂಕ್ಷನ್‌ನಿಂದ 10 ಕಿ.ಮೀ ದೂರದಲ್ಲಿ ಇನ್ನೆರಡು ಸ್ಥಳ ಗುರುತಿಸಲಾಗಿದೆ. ಈ ಪೈಕಿ ನೆಲಮಂಗಲ ಬಳಿಯ ಸ್ಥಳವನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೊದಲಿಗೆ ಹಾಸನ ರಸ್ತೆ ಸಮೀಪದಲ್ಲೇ ನಿರ್ಮಿಸಬೇಕು ಎಂದು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಅದು ದೇವನಹಳ್ಳಿಗೆ ಶಿಫ್ಟ್ ಆಗಿತ್ತು.

ಹಾಗಾಗಿ ಈಗಲೂ ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕೆ ಹಾಸನ ಹೆದ್ದಾರಿ ಬಳಿಯೇ ಒಂದು ಜಾಗವನ್ನು ಗುರುತಿಸಲಾಗಿದೆ ಆದರೂ ಇಲ್ಲಿ ಏರ್‌ಪೋರ್ಟ್ ನಿರ್ಮಾಣಕ್ಕೆ ಹಲವು ಸಮಸ್ಯೆಗಳೂ ಇವೆ. ಈಗಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇದೆ. ಈಗ ನೆಲಮಂಗಲ ಬಳಿ ಮತ್ತೊಂದು ಏರ್‌ಪೋರ್ಟ್ ನಿರ್ಮಾಣವಾದರೆ ಅಕ್ಕಪಕ್ಕದಲ್ಲೇ ಎರಡು ಏರ್‌ಪೋರ್ಟ್ ಇರಲಿದೆ. ವಿಮಾನಗಳ ಹಾರಾಟದ ದೃಷ್ಟಿಯಿಂದ ಇದು ಭಾರಿ ಸಮಸ್ಯೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಟ್ರಾಫಿಕ್ ಜಾಮ್ ಕೂಡ ಹೆಚ್ಚು
ನೆಲಮಂಗಲ-ಹಾಸನ ಹೆದ್ದಾರಿಯು ಬೆಂಗಳೂರಿನ ಹೆಬ್ಬಾಗಿಲು ಎಂದೇ ಕರೆಯಲಾಗುತ್ತದೆ. ಏಕೆಂದರೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಬರುವ ಜನರು ಈ ಮಾರ್ಗವಾಗಿ ಬಂದು ನೆಲಮಂಗಲ ಮೂಲಕವೇ ಬೆಂಗಳೂರು ಪ್ರವೇಶಿಸುತ್ತಾರೆ. ಹಾಗಾಗಿ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕೂಡ ಅಧಿಕವಾಗಿರುತ್ತದೆ. ಒಂದು ವೇಳೆ ನೆಲಮಂಗಲ ಬಳಿಯೇ ಮತ್ತೊಂದು ಏರ್‌ಪೋರ್ಟ್ ನಿರ್ಮಾಣವಾದ್ರೆ ತುಮಕೂರು ರಸ್ತೆಯಲ್ಲಿ ಭಾರಿ ವಾಹನ ದಟ್ಟಣೆಯಾಗಲಿದೆ. ಈ ಕಾರಣದಿಂದಲೂ ನೆಲಮಂಗಲ ಬಳಿ ಎರಡನೇ ಏರ್‌ಪೋರ್ಟ್ ನಿರ್ಮಾಣ ಅನುಮಾನ ಎನ್ನಲಾಗುತ್ತಿದೆ.

ಎರಡನೇ ಏರ್‌ಪೋರ್ಟ್ ಬಗ್ಗೆ ಮಾಹಿತಿ ನೀಡಿರುವ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ನೆಲಮಂಗಲ-ಕುಣಿಗಲ್ ರಸ್ತೆ ಮತ್ತು ಕನಕಪುರ ರಸ್ತೆಯಲ್ಲಿ ಎರಡು ಸ್ಥಳಗಳನ್ನು ಗುರುತಿಸಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ. ಈ ಎರಡೂ ರಸ್ತೆಗಳು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಸಮೀಪವೇ ಇವೆ. ಹಾಗೂ ಹೆದ್ದಾರಿಗಳಿಗೆ ಹೊಂದಿಕೊಂಡಿವೆ. ಜೊತೆಗೆ ಈಗಾಗಲೇ ಇರುವ ಮೆಟ್ರೊ ನಿಲ್ದಾಣಗಳ ಸಮೀಪವೇ ಈ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ವಿವರಿಸಿದ್ದಾರೆ.
ನೆಲಮಂಗಲ ಬಳಿ ಏರ್‌ಪೋರ್ಟ್ ನಿರ್ಮಾಣಕ್ಕೆ ಹಲವು ತೊಡಕುಗಳಿರುವುದರಿಂದ ಇದನ್ನು ಆಯ್ಕೆಯಾಗಿ ಇಟ್ಟುಕೊಳ್ಳಲಾಗಿದೆ. ಬಹುತೇಕ ಕನಕಪುರ ರಸ್ತೆಯಲ್ಲಿ ಗುರುತಿಸಿದ ಎರಡು ಜಾಗಗಳಲ್ಲಿ ಒಂದನ್ನು ಅಂತಿಮಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಕನಕಪುರ ರಸ್ತೆಯು ಏರ್‌ಪೋರ್ಟ್ ನಿರ್ಮಾಣವಾದ್ರೆ ಕೆಂಪೇಗೌಡ ಏರ್‌ಪೋರ್ಟ್‌ಗೆ ತದ್ವಿರುದ್ಧ ದಿಕ್ಕಿನಲ್ಲಿ ಇರಲಿದೆ. ಆದರೆ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಯಾವ ಜಾಗ ಸೂಚಿಸುತ್ತದೆಯೋ ಅಲ್ಲಿಯೇ ಎರಡನೇ ಏರ್‌ಪೋರ್ಟ್ ಬರಲಿದೆ.












Click it and Unblock the Notifications