Property Value: "ಈ ದಾಖಲೆ ಇದ್ದರೆ ನಿಮ್ಮ ಆಸ್ತಿ ಮೌಲ್ಯ ಹೆಚ್ಚಾಗುತ್ತೆ, ಭೂಮಿ ಮಾರಬೇಡಿ" ಎಂದ ಡಿಕೆ ಸುರೇಶ್
ನಿಮ್ಮ ಬಳಿ ಈ ದಾಖಲೆ ಇದ್ದರೆ ನಿಮ್ಮ ಆಸ್ತಿ ಮೌಲ್ಯ ದುಪ್ಪಟ್ಟಾಗುತ್ತದೆ ಎಂದು ಮಹತ್ವದ ವಿಚಾರವೊಂದನ್ನು ಕಾಂಗ್ರೆಸ್ ಮಾಜಿ ಸಂಸದ, ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಮುಂದಿನ ಒಂದು ವರ್ಷದಲ್ಲಿ 10 ಸಾವಿರ ಬಡವರಿಗೆ ನಿವೇಶನ ಹಂಚುವ ಕೆಲಸ ಮಾಡಲಾಗುವುದು. ಕೇವಲ ಕನಕಪುರದಲ್ಲಿ ಮಾತ್ರವಲ್ಲದೇ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿಯೂ ನಿವೇಶನ ಹಂಚಿಕೆ ಮಾಡಲಾಗುವುದು. ನಾನು ಬಗರ್ ಹುಕುಂ ಸಮಿತಿ ಅಧ್ಯಕ್ಷನಾಗಿದ್ದು ನಿಮಗೆ ಮುಂದಿನ ದಿನಗಳಲ್ಲಿ ಈ ಭೂಮಿಯನ್ನು ವಿತರಣೆ ಮಾಡುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕನಕಪುರದ ಕೋಡಿಹಳ್ಳಿ ಹೋಬಳಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಡಿ.ಕೆ.ಸುರೇಶ್ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಪೋಡಿಮುಕ್ತ ಗ್ರಾಮಗಳನ್ನಾಗಿ ಮಾಡುವುದು ನಮ್ಮ ಧ್ಯೇಯ. ಇದಕ್ಕಾಗಿ ಹೊಸ ಪಿ ನಂಬರ್‌ಗಳನ್ನು ಮರುಸರ್ವೆ ನಡೆಸಿ ನೀಡಲಾಗುತ್ತಿದೆ. ಉಯ್ಯಂಬಳ್ಳಿ ಹೋಬಳಿಯಲ್ಲಿ ಹೊಸದಾಗಿ ಸರ್ವೆ ನಡೆಸಿ ದಾಖಲೆಗಳನ್ನು ಮರು ವಿತರಣೆ ಮಾಡಲಾಗುತ್ತಿದೆ. ಇಡೀ ಕ್ಷೇತ್ರದಾದ್ಯಂತ ಜನರಿಗೆ ಉಚಿತವಾಗಿ ಕಂದಾಯ ದಾಖಲೆಗಳನ್ನು ನೀಡಲು ನಾವು ವ್ಯವಸ್ಥೆ ಮಾಡಿದ್ದೇವೆ. ಪಹಣಿ ಖಾತೆಯನ್ನು ಒಟ್ಟಿಗೆ ನೀಡಲಾಗುವುದು ಎಂದಿದ್ದಾರೆ.

ಬ್ರೋಕರ್‌ಗಳಿಗೆ ಭೂಮಿ ಕೊಡಬೇಡಿ!
ನಿಮ್ಮ ಆಸ್ತಿ ಸಂಖ್ಯೆಗಳಿಗೆ ನೀಡುವ ನೂತನ ʼಪಿʼ ನಂಬರ್‌ನಿಂದ ಆಸ್ತಿ ಮೌಲ್ಯವು ಹೆಚ್ಚಾಗಲಿದೆ. 25ರಿಂದ 50 ಲಕ್ಷ ರೂಪಾಯಿವರೆಗೆ ಆಸ್ತಿಯ ಮೌಲ್ಯ ಹೆಚ್ಚಾಗಲಿದೆ. ನೂತನ ನಂಬರ್ ಬಂದ ತಕ್ಷಣ ದಲ್ಲಾಳಿಗಳು ಭೂಮಿ ನೀಡಿ ಎಂದು ನಿಮ್ಮ ಬಳಿ ಬರುತ್ತಾರೆ. ಯಾವುದೇ ಕಾರಣಕ್ಕೂ ಜನ ತಮ್ಮ ಭೂಮಿ ಕಳೆದುಕೊಳ್ಳಬಾರದು. ಇದಕ್ಕೆ ಡಿ.ಕೆ.ಶಿವಕುಮಾರ್ ಭೂಮಿ ಮಾರಾಟ ಮಾಡಬೇಡಿ ಎಂದು ಕಳೆದ 25 ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ ಎಂದು ಕಿವಿಮಾತು ಹೇಳಿದ್ದಾರೆ.
ನಿಮ್ಮ ಆಸ್ತಿಗಳು ಡಿಜೀಟಲೀಕರಣವಾಗಬೇಕು ಎಂದು ಡಿಸಿಎಂ ಅವರು ಸೂಕ್ತ ಆದೇಶ ನೀಡಿದ್ದಾರೆ. ನಿಮ್ಮ ಆಸ್ತಿಗಳ ವಿವರಗಳು, ದಾಖಲೆಗಳು ಬೆರಳ ತುದಿಯಲ್ಲಿ ಸಿಗಲಿದೆ. ನಮಗೆ ಅರಿವಿಲ್ಲದೇ ನಾವು ಒಂದಷ್ಟು ತಪ್ಪುಗಳನ್ನು ಮಾಡುತ್ತೇವೆ. ಆ ತಪ್ಪುಗಳನ್ನು ತಿದ್ದಿಕೊಂಡು ನಾವು ನಿಮ್ಮ ಮನೆಮಕ್ಕಳಂತೆ ಕೆಲಸ ಮಾಡುತ್ತೇವೆ" ಎಂದರು.
ನಿಮ್ಮ ಭೂದಾಖಲೆಗಳನ್ನು ಈ ಮೊದಲು ಸರ್ಕಾರಿ ಕಚೇರಿಯಲ್ಲಿ ನೀಡಲು ಸತಾಯಿಸುತ್ತಿದ್ದರು. ಈಗ 250 ಗ್ರಾಮಗಳಲ್ಲಿ 175 ಗ್ರಾಮಗಳ ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ 25 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗಲಿದೆ. ಇ-ಸ್ವತ್ತು ನಿಮಗೆ ನೀಡಲಾಗುತ್ತಿದೆ. ಪಕ್ಕದಲ್ಲಿನ ಮಾರಸಂದ್ರ ಗ್ರಾಮವನ್ನು ಉಪಗ್ರಾಮ ಎಂದು ಘೋಷಣೆ ಮಾಡಿ, ಅಲ್ಲಿನ ಜನರಿಗೂ ದಾಖಲೆಗಳನ್ನು ನೀಡಲಾಗುತ್ತಿದೆ. ಇದು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿರುವ ಕ್ರಾಂತಿ ಎಂದು ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಹೆಸರು ಬದಲಿಸಿದ್ದು ಈ ಕಾರಣಕ್ಕೆ
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲಾಗಿದೆ. ಆದರೆ ಇದಕ್ಕೆ ಭಾರಿ ವಿರೋಧವೂ ವ್ಯಕ್ತವಾಗಿತ್ತು. ರಿಯಲ್ ಎಸ್ಟೇಟ್ ದಂಧೆ ನಡೆಸುವ ಉದ್ದೇಶದಿಂದ ಜಿಲ್ಲೆಯ ಹೆಸರು ಬದಲಾವಣೆ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಕೂಡ ಆರೋಪ ಮಾಡಿದ್ದರು. ಇದಕ್ಕೆ ಸ್ಥಳೀಯರಿಂದಲೂ ತುಸು ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಕೊನೆಗೂ ರಾಮನಗರ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಬದಲಾಗಿದೆ. ಇದರ ಹಿಂದಿನ ನಿಜವಾದ ಉದ್ದೇಶ ಏನು ಎಂದು ಕಾಂಗ್ರೆಸ್ ಮಾಜಿ ಸಂಸದ, ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಬಹಿರಂಗಪಡಿಸಿದ್ದಾರೆ.
ನಾವು ಮೊದಲಿನಿಂದಲೂ ಬೆಂಗಳೂರು ಜನ. ಇದಕ್ಕೆ ಯಾರೇ ವಿರೋಧ ಮಾಡಿದರೂ ಡಿ.ಕೆ.ಶಿವಕುಮಾರ್ ಅವರು ಸಾಧಿಸಿದರು. ನಾವು ರಾಮನಗರ ಜಿಲ್ಲಾ ಕೇಂದ್ರದ ಹೆಸರನ್ನು ಬದಲಾವಣೆ ಮಾಡಿಲ್ಲ. ನಾವೆಲ್ಲರೂ ಬೆಂಗಳೂರಿಗೆ ಸೇರಿದವರು ಎನ್ನುವ ಉದ್ದೇಶಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ್ದೇವೆ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಈ ಬದಲಾವಣೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯವರು ಎಂದರೆ ನಿಮ್ಮನ್ನು ನೋಡುವ ದೃಷ್ಟಿಕೋನವೇ ಬದಲಾಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.











Click it and Unblock the Notifications