ಮಾಧ್ಯಮದಲ್ಲಿ ವೈಯಕ್ತಿಕ ಹಿತಾಸಕ್ತಿ ಬೇಡ : ಸಿದ್ದರಾಮಯ್ಯ
ಬೆಂಗಳೂರು, ಫೆ. 25 : ಪತ್ರಿಕೆಗಳಾಗಲಿ, ಟಿವಿ ಚಾನಲ್‌ಗಳಾಗಲಿ ಸ್ವಹಿತಾಸಕ್ತಿಯನ್ನು ಬದಿಗಿಟ್ಟು, ಸಮಾಜದ ಹಿತಾಸಕ್ತಿಯಿಂದ ದುಡಿಯಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಮಾಧ್ಯಮ ಸಾಮಾಜಿಕ ಕಳಕಳಿ ಇರುವ ಅತ್ಯಂತ ವಸ್ತುನಿಷ್ಠ ವರದಿಗಳನ್ನು ಪ್ರಕಟಿಸಿ ಸಮಾಜದ ಬೆಳವಣಿಗೆಗೆ ಕಾರಣವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮ ಮಿತ್ರರಿಗೆ ಕರೆ ನೀಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ, ಫೆ.24ರಂದು ಸಂಜೆ ಆಯೋಜಿಸಲಾಗಿದ್ದ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ವಿತರಿಸುವ ಮುನ್ನ ಪತ್ರಕರ್ತರನ್ನು ಉದ್ದೇಶಿಸಿ ತಮ್ಮ ಅನಿಸಿಕೆಗಳನ್ನು ನಿರ್ಭಿಡೆಯಾಗಿ ಹಂಚಿಕೊಂಡರು. ನಂತರ 2012 ಮತ್ತು 2013ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳನ್ನು ಪತ್ರಿಕೋದ್ಯಮದಲ್ಲಿ ಅವಿರತವಾಗಿ ದುಡಿಯುತ್ತಿರುವ ಪತ್ರಕರ್ತರಿಗೆ ವಿತರಿಸಿದರು. [ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ] [ಚಿತ್ರಪಟ]

ಅತಿರಂಜಿತ ಸುದ್ದಿ ಪ್ರಸಾರ ಬೇಡ ಎಂದ ಸಿದ್ದರಾಮಯ್ಯ
"ಮಾಧ್ಯಮದಲ್ಲಿ ಸ್ಪರ್ಧೆ ಜಾಸ್ತಿಯಾಗುತ್ತಿದೆ. ಇದರಿಂದಾಗಿ ಟಿವಿ ಚಾನಲ್‌ಗಳು ಇಂದು ಸಣ್ಣ ಸುದ್ದಿಯನ್ನೇ ಅತಿರಂಜಿತ ಮಾಡಿ ಭಾರೀ ದೊಡ್ಡ ಸುದ್ದಿ ಎಂದು ಬಿಂಬಿಸುತ್ತ ಇಡೀ ದಿನ ಬಿತ್ತರಿಸುತ್ತಿವೆ. ಅದರ ಅವಶ್ಯಕತೆಯೇ ಇರುವುದಿಲ್ಲ. ಗಂಡಹೆಂಡಿರ ಜಗಳದಂಥ ವಿಷಯಗಳನ್ನು ಕೂಡ ಭಾರೀ ಪ್ರಮುಖ ಸುದ್ದಿ ಎಂಬಂತೆ ಪ್ರಸಾರ ಮಾಡುತ್ತಿವೆ. ಇದರಿಂದ ಸಮಾಜಕ್ಕೆ, ಮಾಧ್ಯಮಕ್ಕೆ ಮತ್ತು ಆ ದಂಪತಿಗಳಿಗೂ ಉಪಯೋಗವಾಗುವುದಿಲ್ಲ" ಎಂದು ಅವರು ಟಿವಿ ಚಾನಲ್ಲುಗಳ ಕಿವಿ ಹಿಂಡಿದರು.

ನಾನೇನು ಪತ್ರಕರ್ತರಿಗೆ ಪಾಠ ಮಾಡಲು ಇಲ್ಲಿ ಬಂದಿಲ್ಲ
"ಅಮೆರಿಕಾದ 3ನೇ ಅಧ್ಯಕ್ಷ ಥಾಮಸ್ ಜೆಫರ್ಸನ್ ಹೇಳಿದ್ದರು. ವೃತ್ತಪತ್ರಿಕೆ ಇಲ್ಲದ ಸರಕಾರ ಮತ್ತು ಸರಕಾರವಿಲ್ಲದ ವೃತ್ತಪತ್ರಿಕೆಗಳ ಆಯ್ಕೆ ಬಂದಾಗ ಎರಡನೇಯದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದರು. ಪತ್ರಿಕೆಗಳು ಇಂದು ಸಮಾಜಕ್ಕೆ ಅಷ್ಟು ಪ್ರಮುಖವಾಗಿವೆ. ಇದು ಕೂಡ ನಿಮಗೆ ತಿಳಿದ ವಿಷಯವೆ. ನಾನೇನು ಪತ್ರಕರ್ತರಿಗೆ ಪಾಠ ಮಾಡಲು ಇಲ್ಲಿ ಬಂದಿಲ್ಲ" ಎಂದು ಅವರು ಮುಗುಮ್ಮಾಗಿ ನುಡಿದರು.

ಮಾಧ್ಯಮ ವ್ಯಕ್ತಿಯ ಚಾರಿತ್ರ್ಯವಧೆ ಕೈಬಿಡಬೇಕು
"ಮಾಧ್ಯಮಗಳು ವ್ಯಕ್ತಿಯ ಚಾರಿತ್ರ್ಯವಧೆಯನ್ನು ಕೈಬಿಡಬೇಕು. ಸುದ್ದಿ ಪ್ರಕಟಿಸುವ ಮುನ್ನ ಚಾರಿತ್ರ್ಯವಧೆಗೊಳಗಾಗುತ್ತಿರುವ ವ್ಯಕ್ತಿಯ ಅನಿಸಿಕೆಗಳನ್ನು ಕೂಡ ತೆಗೆದುಕೊಳ್ಳಬೇಕು. ಪತ್ರಕರ್ತರು ತನಿಖಾ ಪತ್ರಿಕೋದ್ಯಮದ ನಿಮಯಗಳನ್ನು ಪಾಲಿಸಬೇಕು. ಸುದ್ದಿಯ ಸತ್ಯಾಸತ್ಯತೆ ಅರಿದು ವರದಿ ಮಾಡುವುದನ್ನು ಕಲಿಯಬೇಕು. ಆಗ ಮಾತ್ರ ಸಮಾಜದ ಮೇಲೆ ಪರಿಣಾಮ ಬೀರಲು ಸಾಧ್ಯ" ಎಂದಾಗ ಕೆಲ ಪತ್ರಕರ್ತರು ಅವರ ಮಾತಿಗೆ ತಲೆದೂಗುತ್ತಿದ್ದರು.

ಜನಪ್ರಿಯ ಜನಾನುರಾಗಿ ಮುಖ್ಯಮಂತ್ರಿ : ಪೊನ್ನಪ್ಪ
ಸಿದ್ದರಾಮಯ್ಯ ಅವರ ಭಾಷಣಕ್ಕೆ ಮೊದಲು ಮಾಧ್ಯಮ ಅಕಾಡೆಮಿ ಅಧ್ಯಕ್ಷ ಪೊನ್ನಪ್ಪ ಅವರು, ಜನಪ್ರಿಯ ಮತ್ತು ಜನಾನುರಾಗಿ ಮುಖ್ಯಮಂತ್ರಿಗಳ ಸಹಕಾರದಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡಲು ಸಾಧ್ಯವಾಯಿತು. ಮಾಧ್ಯಮ ಅಕಾಡೆಮಿಗಾಗಿ ಸಿದ್ದರಾಮಯ್ಯ ಅವರು ಸಾಕಷ್ಟು ಹಣಕಾಸಿನ ಸಹಾಯ ಕೂಡ ಮಾಡಿದ್ದಾರೆ. ಬೆಂಗಳೂರು ಮಾತ್ರವಲ್ಲ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಕೂಡ ಅಕಾಡೆಮಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿತ್ತು ಎಂದು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ಪತ್ರಕರ್ತರಿಗೆ ಆರೋಗ್ಯ ವಿಮೆ ಮಾಡಿದ್ದಕ್ಕಾಗಿ ಧನ್ಯವಾದ
ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್ ಅವರು, ಹಗಲಿರುಳೂ ಸಮಾಜದ ಒಳಿತಿಗಾಗಿ ದುಡಿಯುತ್ತಿರುವ 6 ಸಾವಿರಕ್ಕೂ ಹೆಚ್ಚು ಪತ್ರಕರ್ತರಿಗೆ ಆರೋಗ್ಯ ವಿಮೆ ಮಾಡಿಸಬೇಕೆಂದು ಪ್ರಸ್ತಾವನೆ ಇಟ್ಟಾಗ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಕ್ಕೆ ಅಭಿನಂದನೆ ಮತ್ತು ಧನ್ಯವಾದಗಳನ್ನು ಅರ್ಪಿಸಿದರು. ಇದಕ್ಕಾಗಿ ಸಹಕಾರ ನೀಡಿದ ವಾರ್ತಾ ಮತ್ತು ಮೂಲ ಸಂಪನ್ಮೂಲ ಹಾಗಿ ವಕ್ಫ್ ಸಚಿವ ರೋಶನ್ ಬೇಗ್ ಅವರನ್ನೂ ನೆನೆದರು.

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಜೊತೆ ಶಾಮಸುಂದರ
ಒನ್ಇಂಡಿಯಾ ಕನ್ನಡ ಸಂಪಾದಕ ಎಸ್.ಕೆ. ಶಾಮಸುಂದರ ಅವರಿಗೆ 2013ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ಹಲವಾರು ಹಿರಿಯ ಮತ್ತು ಕಿರಿಯ ಪತ್ರಕರ್ತರಿಗೂ, ಜಿಲ್ಲಾಮಟ್ಟದಲ್ಲಿ ಸಾಧನೆ ಮಾಡಿದ ಸಂಸ್ಥೆಗಳಿಗೂ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬ್ಯಾಂಕ್ವೆಟ್ ಹಾಲ್ ತುಂಬ ಪ್ರಶಸ್ತಿ ವಿಜೇತರ ಸಂಬಂಧಿಕರೇ ತುಂಬಿದ್ದರು. ಎಲ್ಲರೂ ತಮ್ಮ ಬಂಧುವಿನ ಫೋಟೋಗಳನ್ನು ಕ್ಲಿಕ್ಕಿಸುವುದರಲ್ಲಿ ಮಗ್ನರಾಗಿದ್ದರು.

ಗಣ್ಯಾತಿಗಣ್ಯರಿಗೆ ಸನ್ಮಾನ ನೋಡಲು ಸಾಧ್ಯವೇ ಆಗಲಿಲ್ಲ
ಸನ್ಮಾನ ನಡೆಯುತ್ತಿದ್ದಾಗ ವೇದಿಕೆಯ ಮುಂದೆ ಫೋಟೋಗ್ರಫರ್ ಮತ್ತು ವಿಡಿಯೋಗ್ರಫರುಗಳೇ ಜಮಾಯಿಸಿದ್ದರಿಂದ ಮೊದಲ ಸಾಲಿನಲ್ಲಿ ಕುಳಿತ ಗಣ್ಯಾತಿಗಣ್ಯರಿಗೆ ಸನ್ಮಾನ ನೋಡಲು ಸಾಧ್ಯವೇ ಆಗಲಿಲ್ಲ. ಗಣ್ಯರ ಸಾಲಿನಲ್ಲಿ ಕನ್ನಡಪ್ರಭದ ಮಾಜಿ ಸಂಪಾದಕ ಕೆ. ಸತ್ಯನಾರಾಯಣ, ಪತ್ರಿಕೋದ್ಯಮಿ ಸಂಧ್ಯಾ ಪೈ, ಮೀಸೆ ರಂಗಣ್ಣ ಮುಂತಾದವರು ಕುಳಿತಿದ್ದರು. "ಅಯ್ಯೋ ಕಾರ್ಯಕ್ರಮ ಒಂಚೂರು ನೋಡಲಾಗಲಿಲ್ಲ" ಎಂದು ಹಿರಿಯ ಪತ್ರಿಕೋದ್ಯಮಿಯೊಬ್ಬರು ನಗುನಗುತ್ತಲೇ ಬೇಸರ ವ್ಯಕ್ತಪಡಿಸಿದರು.












Click it and Unblock the Notifications