ಯಲಹಂಕ ಸುತ್ತ-ಮುತ್ತ ಕಸ ಸುರಿದರೆ ಕ್ರಿಮಿನಲ್ ಕೇಸ್
ಬೆಂಗಳೂರು, ಫೆ. 13 : ಯಲಹಂಕ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಸಿದ್ಧವಾಗುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲೆಂದರಲ್ಲಿ ಕಸ, ಪ್ರಾಣಿಜನ್ಯ ತ್ಯಾಜ್ಯ ಮತ್ತು ಕಸದ ರಾಶಿಗೆ ಬೆಂಕಿ ಹಚ್ಚಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಫೆಬ್ರವರಿ 18 ರಿಂದ 22ರವರೆಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. ಆದ್ದರಿಂದ, ಈ ಭಾಗದ ತೆರೆದ ಪ್ರದೇಶದಲ್ಲಿ ಕಸ ಹಾಕಬಾರದು ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಸ ಹಾಕುವವರ ವಿರುದ್ಧ ಮಾಹಿತಿ ನೀಡುವಂತೆಯೂ ಜನರಿಗೆ ಮನವಿ ಮಾಡಿದ್ದಾರೆ. [ಯಲಹಂಕದಲ್ಲಿ ಯುದ್ಧ ವಿಮಾನಗಳ ಶಕ್ತಿ ಪ್ರದರ್ಶನ]

ವೈಮಾನಿಕ ಪ್ರದರ್ಶನ ನಡೆಯುವ ಪ್ರದೇಶದ ಸುತ್ತಮುತ್ತ ಸರ್ಕಾರಿ ಭೂಮಿಯಲ್ಲಿ ಕಸ ಹಾಗೂ ಪ್ರಾಣಿಜನ್ಯ ತ್ಯಾಜ್ಯ ಸುರಿಯಲಾಗುತ್ತಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಹದ್ದು ಮತ್ತು ಇತರ ಹಕ್ಕಿಗಳ ಹಾರಾಟ ಹೆಚ್ಚಾಗಿದೆ. ಇದರಿಂದ ಪ್ರದರ್ಶನದ ವೇಳೆ ಅಪಘಾತವಾಗಬಹುದು ಎಂದು ಕಸ ಸುರಿಯದಂತೆ ಮನವಿ ಮಾಡಲಾಗಿದೆ. [ಪ್ರಧಾನಿ ಮೋದಿ ಯುದ್ಧ ವಿಮಾನ ಏರೋದಿಲ್ವೇ?]
ಮಾಂಸ ಮಾರಾಟ ಮಾಡುವ ಅಂಗಡಿಯವರು ಪ್ರಾಣಿಜನ್ಯ ತ್ಯಾಜ್ಯವನ್ನು ಆಯಾ ಘಟಕದಲ್ಲೇ ವಿಲೇವಾರಿ ಮಾಡಿಕೊಳ್ಳಬೇಕು. ಸಾರ್ವಜನಿಕ ಸ್ಥಳ, ಕೆರೆ, ಸರ್ಕಾರಿ ಜಮೀನು, ರಸ್ತೆಯ ಅಕ್ಕಪಕ್ಕದಲ್ಲಿ ಸುರಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ತಹಶೀಲ್ದಾರ್ ಹೇಳಿದ್ದಾರೆ.
ಏರ್ ಶೋ ಪ್ರದೇಶದ ಸುತ್ತ-ಮುತ್ತ ಜನರು ಬೇಲಿ, ಮುಳ್ಳುಗಿಡಗಳು ಮತ್ತಿತರ ವಸ್ತುಗಳಿಗೆ ಬೆಂಕಿ ಹಚ್ಚಿ ಸುಡುವುದರಿಂದ ವಿಮಾನ ಹಾರಾಟಕ್ಕೆ ಅಡ್ಡಿಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಂತಹ ಕೃತ್ಯಗಳನ್ನು ಮಾಡಬಾರದು ಎಂದು ತಿಳಿಸಲಾಗಿದೆ.
ಕಸ ಸುರಿಯುವವರು ಕಂಡು ಬಂದರೆ ಜನರು ಮಾಹಿತಿ ನೀಡಲು ದೂರವಾಣಿ ಸಂಖ್ಯೆ. ಬೆಂಗಳೂರು ನಗರ ಜಿಲ್ಲಾಧಿಕಾರಿ 94489 94024, ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ 94487 15244, ಬೆಂಗಳೂರು ಉತ್ತರ (ಹೆಚ್ಚುವರಿ) ತಹಶೀಲ್ದಾರ್ 96201 02106.












Click it and Unblock the Notifications