• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ನ್ಯಾಯ ಕೇಳಲು ಕಚೇರಿಗೆ ಹೋದ ರೈತನ ಮೇಲೆ ಉರಿದು ಬಿದ್ದ ಅಧಿಕಾರಿ

|

ಬೆಂಗಳೂರು, ನವೆಂಬರ್ 18: ನ್ಯಾಯ ಎಲ್ಲರಿಗೂ ಒಂದೇ, ಕಾನೂನಿನ ಮುಂದೆ ಎಲ್ಲರೂ ಸಮಾನರು; ಹೀಗಂತ ಸಂವಿಧಾನ ಹೇಳುತ್ತದೆ. ಆದರೆ ಇದೇ ವ್ಯವಸ್ಥೆಯಲ್ಲಿ ನ್ಯಾಯ ಕೇಳಿಕೊಂಡು ಸಾಮಾನ್ಯ ರೈತನೊಬ್ಬ ನ್ಯಾಯದಾನದ ಪ್ರಭಾವಿ ಹಿನ್ನೆಲೆಯುಳ್ಳ ಕುಟುಂಬದ ಎದುರು ಹೋರಾಟಕ್ಕೆ ಇಳಿದರೆ ಏನಾಗುತ್ತೆ? ಆತನನ್ನು ಸುದೀರ್ಘ ಕಾನೂನು ಹೋರಾಟ, ಗೆಲುವುಗಳ ನಂತರವೂ ನಮ್ಮ ಸರಕಾರಿ ವ್ಯವಸ್ಥೆ ಹೇಗೆ ನಡೆಸಿಕೊಳ್ಳುತ್ತದೆ? ಉತ್ತರ ಬೇಕಾದರೆ ನೀವು ಬೆಂಗಳೂರಿನಿಂದ 50 ಕಿ. ಮೀ ದೂರದಲ್ಲಿರುವ ದೊಡ್ಡಬಳ್ಳಾಪುರ ಜಿಲ್ಲೆಯ ರಾಂಪುರ ಎಂಬ ಹಳ್ಳಿಗೆ ಬರಬೇಕು ಮತ್ತು ಅಲ್ಲಿ ರೈತಾಪಿ ನಡೆಸುತ್ತಿರುವ ಆರ್‌. ಟಿ. ರಮೇಶ್ ಎಂಬುವವರ ಕತೆಯನ್ನು ಕೇಳಬೇಕು.

   ವಿಡಿಯೋ: ನ್ಯಾಯ ಕೇಳಲು ಕಚೇರಿಗೆ ಹೋದ ರೈತನ ಮೇಲೆ ಉರಿದು ಬಿದ್ದ ಅಧಿಕಾರಿ | Oneindia Kannada

   ಕೆಲವು ದಿನಗಳ ಹಿಂದೆ ರಮೇಶ್ ನಡೆಸಿಕೊಂಡು ಬಂದ ಭೂ ವ್ಯಾಜ್ಯವೊಂದರಲ್ಲಿ ನಡೆದ ಗಮನಾರ್ಹ ಪ್ರಗತಿಯ ಕುರಿತು ಮಾತನಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ವಿಭಾಗಾಧಿಕಾರಿ ಮುಂದೆ ಹೋಗಿದ್ದಾರೆ. ರಮೇಶ್ ಕಚೇರಿಗೆ ಕಾಲಿಡುತ್ತಲೆ ಅಧಿಕಾರಿ ಹೊರಗೆ ಹೊರಡಲು ಮುಂದಾಗಿರುತ್ತಾರೆ. ಕೊನೆಗೆ ಕಚೇರಿಯ ಕಾರಿಡಾರ್‌ನಲ್ಲಿಯೇ ರಮೇಶ್ ಮತ್ತು ಅಧಿಕಾರಿ ಅರುಳ್ ಕುಮಾರ್ ನಡುವೆ ಜೋರು ಜೋರು ಮಾತುಕತೆ ನಡೆದಿದೆ. ಇದರಿಂದ ಕಸಿವಿಸಿಗೊಂಡ ಅಧಿಕಾರಿ ಮತ್ತೆ ಚೇಂಬರ್‌ಗೆ ಕರೆಸಿಕೊಳ್ಳುತ್ತಾರೆ. ಸುಮಾರು 7 ನಿಮಿಷಗಳಿರುವ ವಿಡಿಯೋದಲ್ಲಿ ಅಧಿಕಾರಿಯ ಅಸಡ್ಡೆ, ಧರ್ಪ ಢಾಳಾಗಿ ದಾಖಲಾಗಿದೆ. ಸರಕಾರದ ಕಚೇರಿಗಳು, ಅಧಿಕಾರಿಗಳು ಯಾಕಿಷ್ಟು ಕರ್ತವ್ಯ ಮರೆತಿದ್ದಾರೆ? ಕನಿಷ್ಟ ಸೌಜನ್ಯ ಕಳೆದುಕೊಂಡಿದ್ದಾರೆ? ಇವಕ್ಕೆಲ್ಲಾ ಉತ್ತರ ಹುಡುಕುವ ಮುಂಚೆ, ಕೆಳಗಿರುವ ವಿಡಿಯೋವನ್ನು ನೋಡಿ...

   ಏಳು ವರ್ಷಗಳ ಹಿಂದಿನ ಪ್ರಕರಣ:

   ಅಧಿಕಾರಿ ಹೀಗೆ ನಡೆದುಕೊಳ್ಳುವುದಕ್ಕೆ ಒಂದು ಕಾರಣವಿದೆ. ಏಳು ವರ್ಷಗಳ ಹಿಂದೆ ರಾಂಪುರದಲ್ಲಿ ಬಂದ ಗಾಯತ್ರಿ ದತ್ತು ಎಂಬುವವರು ಜಮೀನೊಂದನ್ನು ಖರೀದಿ ಮಾಡುತ್ತಾರೆ. ಗಾಯತ್ರಿ ದತ್ತು ದೇಶದ ಸುಪ್ರಿಂ ಕೋರ್ಟ್‌ನ ಮುಖ್ಯನಾಯಮೂರ್ತಿಗಳಾಗಿದ್ದ, ಹಲವಾರು ಜನಪ್ರಿಯ ನ್ಯಾಯದಾನ ಪ್ರಕರಣಗಳಲ್ಲಿ ಕೇಂದ್ರಬಿಂದುಗಳಾಗಿದ್ದ ಎಲ್‌. ಎಲ್. ದತ್ತು ಅವರ ಧರ್ಮಪತ್ನಿ. ಗ್ರಾಮೀಣ ಪರಿಸರದಲ್ಲಿ ಹೇಗೆ ಎಲ್ಲಾ ಸಣ್ಣ ಭೂ ವ್ಯಾಜ್ಯಗಳು ಶುರುವಾಗುತ್ತವೆಯೋ ಹಾಗೆಯೇ ಇದೂ ಕೂಡ ಆರಂಭವಾಯಿತು. ಅದೀಗ ಈ ಹಂತಕ್ಕೆ ಬಂದು ನಿಂತಿದೆ.

   ಇದನ್ನು ರಮೇಶ್ ವಿವರಿಸುವುದು ಹೀಗೆ; "ಒಬ್ಬ ರೈತನಾಗಿ ನನಗೆ ಆಗಿರುವ ಅನ್ಯಾಯ ಸರಿ ಪಡಿಸಿಕೊಳ್ಳಲು ಏಳು ವರ್ಷದಿಂದ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ನನ್ನ ವಾದವಾನ್ನು ನಾನೇ ಮಂಡಿಸುತ್ತಿದ್ದೇನೆ. ನನಗೆ ದಕ್ಕಬೇಕಾದ ಜಮೀನಿಗಾಗಿ ಕಚೇರಿಗಳನ್ನು ಅಲೆಯುತ್ತಿದ್ದೇನೆ. ಇತ್ತೀಚೆಗೆ ಭೂ ಮಾಪನ ಮತ್ತು ಸರ್ವೆ ಇಲಾಖೆಯ ಆಯುಕ್ತರು ನೀಡಿರುವ ಆದೇಶವನ್ನು ಜಾರಿ ಮಾಡಿದರೆ ನನಗೆ ಸದ್ಯಕ್ಕೆ ನ್ಯಾಯ ಸಿಕ್ಕಂತಾಗುತ್ತದೆ. ಅದನ್ನು ಕೇಳಿಸಿಕೊಳ್ಳಲು ಅಧಿಕಾರಿ ತಯಾರಿರಲಿಲ್ಲ.''

   ರಮೇಶ್ ತಮ್ಮ ಸುದೀರ್ಘ ಕಾನೂನು ಹೋರಾಟದ ಕಾರಣಕ್ಕೆ ನಿಯಮಾವಳಿಗಳನ್ನು ನಿಖರವಾಗಿ ವಿವರಿಸುತ್ತಾರೆ. "ಭೂ ಕಂದಾಯ ಕಾಯ್ದೆ ಪ್ರಕಾರ ಯಾವುದೇ ಭೂಮಿ ಪೋಡಿ ಮಾಡಬೇಕಾದರೆ ಕಲಂ ನಂ. 3 ಮತ್ತು ಕಲಂ ನಂ 9 ಹೊಂದಿಸಿಯೇ ಪೋಡಿ ಮಾಡಬೇಕು. ಆದರೆ, ಇಲ್ಲಿ ಪ್ರಭಾವಿಗಳು ಜಮೀನು ಖರೀದಿಸಿರುವ ಕಾರಣಕ್ಕೆ ಅವರಿಗೆ ಅನುಕೂಲ ಮಾಡಿಕೊಡಲಿಕ್ಕೆ ಕಾನೂನು ಗಾಳಿಗೆ ತೂರಲಾಗಿದೆ. ಇದರಿಂದ ನನಗೆ ಅನ್ಯಾಯ ಮಾಡಿದ್ದಾರೆ. ಇದಿಷ್ಟನ್ನು ಕೇಳಲು ಉಪ ವಿಭಾಗಾಧಿಕಾರಿ ಕಚೇರಿಗೆ ಹೋದರೆ ಅವರ ನಡವಳಿಕೆ ಹೇಗಿದೆ ನೀವೇ ನೋಡಿ,'' ಎಂದು ವಿಡಿಯೋ ಮುಂದಿಡುತ್ತಾರೆ ರಮೇಶ್.

   ಭೂ ವಿವಾದ ಏನು?

   ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯಲ್ಲಿರುವುದು ಈ ವಿವಾದದ ಕೇಂದ್ರ ರಾಂಪುರ ಎಂಬ ಗ್ರಾಮ ಮತ್ತು ಇಲ್ಲಿನ ದೊಡ್ಡ ಎಂಬುವರಿಗೆ ಸೇರಿದ 6. 10 ಎಕರೆ ಜಮೀನು. ಈ ಭೂಮಿಗೆ ಸೇರಿದಂತೆ 26 ಗುಂಟೆ ಖರಾಬು ಇತ್ತು. ಕರಾಬು ಕೇವಲ ಅನುಭವಕ್ಕೆ ಮಾತ್ರ ಸೀಮಿತ, ಅದನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ 1944ರಲ್ಲಿ ಗಂಗಯಯ್ಯ ಎಂಬುವರಿಗೆ 3 ಎಕರೆಯನ್ನಷ್ಟೆ ದೊಡ್ಡ ಮಾರಾಟ ಮಾಡಿದ್ದರು. 1966ರಲ್ಲಿ ಮುನಿಯಪ್ಪ ಎಂಬುವರು 2 ಎಕರೆ ಖರೀದಿಸಿದ್ದರು. ಉಳಿದ 1 ಎಕರೆ 10 ಗುಂಟೆ ಚೌಡಯ್ಯ ಎಂಬುವರಿಗೆ 1967 ರಲ್ಲಿ ಮಾರಾಟವಾಗಿತ್ತು. ಆದರಿಲ್ಲಿ 1 ಎಕರೆ 10 ಗುಂಟೆ ಬದಲಿಗೆ ಖರಾಬು 26 ಗುಂಟೆ ಸೇರಿ 1 ಎಕರೆ 36 ಗುಂಟೆ ಮಾರಾಟ ಮಾಡಿದ್ದರು. ಇದೇ ಭೂಮಿಯನ್ನು ಮುಂದೆ ಕೆ.ಆರ್. ಜಯರಾಮ್ ಎಂಬುವರು ಖರೀದಿಸಿದರು, ಅದರ ಮಾರಾಟ ಅಷ್ಟಕ್ಕೆ ನಿಲ್ಲದೆ, 2013 ರಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎಚ್. ಎಲ್‌. ದತ್ತು ಅವರ ಪತ್ನಿ ಗಾಯಿತ್ರಿ ದತ್ತು ಅವರು ಖರೀದಿಸಿದ್ದರು. ಮತ್ತು, ಅದು ಕಾನೂನು ವಿವಾದಕ್ಕೆ ಸಿಲುಕಿಕೊಂಡಿತು.

   ಇದೇ ಭೂ ವಾಜ್ಯಕ್ಕೆ ಸಂಬಂಧಿಸಿದಂತೆ ರಮೇಶ್ ಅವರು ಭೂ ಮಾಪನ ಮತ್ತು ಸರ್ವೆ ಇಲಾಖೆ ಆಯುಕ್ತರ ನ್ಯಾಯಾಲಯದಲ್ಲಿ ಹೂಡಿದ್ದ ದಾವೆ ವಿಚಾರಣೆ ಇತ್ತೀಚೆಗೆ ಮುಗಿದಿದೆ. ಆಯುಕ್ತ ಮನೀಷ್ ಮುದ್ಗಿಲ್ ಅವರು, ಗಾಯತ್ರಿ ದತ್ತು ಅವರಿಗೆ ಸೇರಿದ್ದ ಎರಡು ಎಕರೆ ಎರಡು ಗುಂಟೆ ಪೈಕಿ ಆರು ಗುಂಟೆ ವಜಾ ಮಾಡಿ ಆದೇಶ ಮಾಡಿದ್ದಾರೆ. ಕಡಿತಗೊಳಿಸಿದ್ದ ಆರು ಗುಂಟೆಯನ್ನು ರಮೇಶ್ ಮತ್ತು ಲಕ್ಷ್ಮಣ್ ಎಂಬುವರಿಗೆ ವಾಪಸು ನೀಡಬೇಕಿತ್ತು. ಆದರೆ, ಇತ್ತೀಚಿನ ಆದೇಶವನ್ನು ಉಪ ವಿಭಾಗಾಧಿಕಾರಿಗಳು ಅನುಷ್ಠಾನ ಮಾಡುವಲ್ಲಿ ಮತ್ತೆ ಪ್ರಮಾದ ಎಸಗುತ್ತಿದ್ದಾರೆ ಎಂದು ರೈತ ರಮೇಶ್ ಆರೋಪ ಮಾಡುತ್ತಿದ್ದಾರೆ. ಮತ್ತದಕ್ಕೆ ವಿಡಿಯೋ ಸಾಕ್ಷ್ಯ ಮುಂದಿಡುತ್ತಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಜನಸಾಮಾನ್ಯರಿಗೆ ತಮ್ಮ ಕೆಲಸ ಆಗಬೇಕಿದೆ. ಅದಕ್ಕಿಂತ ಮೊದಲು ಕನಿಷ್ಟ ಗೌರವ ಸಿಗಬೇಕಿದೆ. ಇದನ್ನು ಸರಕಾರ ಖಾತರಿಪಡಿಸಬೇಕಿದೆ.

   English summary
   A former from Doddaballapura Sets out a video showing arrogance by an Assistant commissioner at his office. which is the fresh evidence for gauging Karnataka bureaucratic missionary .
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X