5 ಪಾಲಿಕೆಯಾಗಿ ಬಿಬಿಎಂಪಿ ವಿಂಗಡಣೆ; ಗ್ರಾಮಾಂತರ ಭಾಗಗಳು ಇದರ ವ್ಯಾಪ್ತಿಗೆ ಬರುತ್ತವೆಯೇ?: ಇಲ್ಲಿದೆ ಉತ್ತರ
ಬೆಂಗಳೂರು, ಜುಲೈ 22: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಅಡಿಯಲ್ಲಿ ಗ್ರೇಟರ್ ಬೆಂಗಳೂರು ಪ್ರದೇಶಗಳು 5 ನಗರ ಪಾಲಿಕೆಯನ್ನಾಗಿ ವಿಭಜಿಸಿ ರಾಜ್ಯ ಸರ್ಕಾರ, ಶನಿವಾರ ರಾಜ್ಯಪತ್ರದಲ್ಲಿ ಪ್ರಕಡಿಸಿದೆ. ಈ ಇದರ ನಡುವೆ ಬಿಬಿಎಂಪಿಯನ್ನು ಐದು ಪಾಲಿಕೆಯಾಗಿ ವಿಂಗಡಿಸುವ ಬಗ್ಗೆ ಬಿಜೆಪಿ ಹೋರಾಟ ನಡೆಸುವುದರ ಬಗ್ಗೆ ಮಾಜಿ ಸಂಸದ ಡಿ ಕೆ ಸುರೇಶ್ ಪ್ರತಿಕ್ರಿಯಿಸಿದ್ದು, ಪರ ವಿರೋಧ ಚರ್ಚೆ ಇದ್ದೇ ಇರುತ್ತದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಲಿದೆ ಎಂದರು.
ಗ್ರಾಮಾಂತರ ಭಾಗಗಳು ಇದರ ವ್ಯಾಪ್ತಿಗೆ ಬರುತ್ತಿವೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಗರೀಕರಣ ವೇಗವಾಗಿ ಆಗುತ್ತಿರುವುದರಿಂದ ಎಲ್ಲರಿಗೂ ಮೂಲಭೂತ ಸೌಕರ್ಯ ಒದಗಿಸಬೇಕು. ನನ್ನ ಕ್ಷೇತ್ರ ಭಾಗದ ಅನೇಕ ಪ್ರದೇಶಗಳಲ್ಲಿ ಇದು ಹಳ್ಳಿಯೇ, ಪಂಚಾಯ್ತಿಯೇ ಎಂದು ಗೊಂದಲವಾಗುತ್ತದೆ. ಇಂತಹ ಪ್ರದೇಶಗಳಲ್ಲಿ ನಾಗರೀಕರು ಹೆಚ್ಚಿನ ಮೂಲಭೂತ ಸೌಕರ್ಯ ಕೇಳುತ್ತಾರೆ. ಆದರೆ ಗ್ರಾಮ ಪಂಚಾಯ್ತಿಯಿಂದ ಇದನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದೆ. ಹೀಗಾಗಿ ಆಡಳಿತ ನಡೆಸಬೇಕಾದರೆ ಒಬ್ಬ ಆಯುಕ್ತರಿಂದ ಎಲ್ಲವೂ ಸಾಧ್ಯವಿಲ್ಲ. ಉತ್ತಮ ಆಡಳಿತ ನೀಡಬೇಕು ಎಂದು ಸರ್ಕಾರ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲವು ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.

ಡಿಸಿಎಂ ಹಾಗೂ ಸಿಎಂ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿ, ಅವರು ಹೋಗಬಾರದೇ? ಪಕ್ಷದ ನಾಯಕರ ಜೊತೆ ಪಕ್ಷದ ಸಂಘಟನೆ ಸೇರಿದಂತೆ ಅನೇಕ ವಿಚಾರಗಳ ಜೊತೆ ಚರ್ಚೆ ಮಾಡಲಿದ್ದಾರೆ. ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯಕ್ಕೆ ಬರಬೇಕಾದ ಅನುದಾನ, ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಹೋಗುವುದು ಹೊಸತೇನಲ್ಲ" ಎಂದು ತಿಳಿಸಿದರು.
ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದಾಗಿದೆ. ನಿನ್ನೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮಹತ್ವದ್ದಾಗಿದೆ. ಇ.ಡಿ ಸಂಸ್ಥೆ ಹಸ್ತಕ್ಷೇಪ, ಕಾರ್ಯವೈಖರಿ ಹಾಗೂ ಎಲ್ಲೆ ಮೀರಿ ವರ್ತನೆ ಮಾಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಇದೇ ಮೊದಲಲ್ಲ. ಕಳೆದ ಎರಡು ವರ್ಷಗಳಿಂದ ಸುಪ್ರೀಂ ಕೋರ್ಟ್ ಈ ವಿಚಾರವಾಗಿ ಚಾಟಿ ಬೀಸುತ್ತಲೇ ಇದೆ. ಇ.ಡಿ. ಸಂಸ್ಥೆ ರಾಜಕೀಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ.
ಕಳೆದ ವಾರ ಮದ್ರಾಸ್ ಹೈಕೋರ್ಟ್ ಕೂಡ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ರಾಜಕೀಯ ಪ್ರೇರಿತ ದಾಳಿ ಮಾಡಿ ವಿರೋಧ ಪಕ್ಷಗಳನ್ನು ಬಗ್ಗುಬಡಿಯಲು ಕೇಂದ್ರ ಸರ್ಕಾರ ಇ.ಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿಯಾದರೂ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಬಿಟ್ಟು, ಅಭಿವೃದ್ಧಿ ರಾಜಕಾರಣ ಮಾಡಲಿ. ದೇಶದ ಅಭಿವೃದ್ಧಿ, ಯುವಕರ ಭವಿಷ್ಯ ನಿರ್ಮಾಣ ಮಾಡುವ ಬಗ್ಗೆ, ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಚಿಂತನೆ ಮಾಡಲಿ ಎಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ಇ.ಡಿಯಿಂದ ರಾಜಕೀಯ ನಾಯಕರುಗಳಿಗೆ ಡ್ಯಾಮೇಜ್ ಆಗುತ್ತಿದೆಯೇ ಎಂದು ಕೇಳಿದಾಗ, "ರಾಜಕೀಯದಲ್ಲಿ ಎಲ್ಲವನ್ನು ಸಹಿಸಲು ಸಿದ್ಧರಾಗಿರುತ್ತಾರೆ. ಕೆಲವರು ಇದನ್ನು ಅಸ್ತ್ರವಾಗಿ ಬಳಸಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಸದೆಬಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಷಡ್ಯಂತ್ರ ಆಗಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನ್ಯಾಯಕ್ಕೆ ಗೌರವ ಸಿಕ್ಕಂತಾಗಿದೆ ಎಂದು ಭಾವಿಸುತ್ತೇನೆ" ಎಂದು ತಿಳಿಸಿದರು.
ನನ್ನ ಮೇಲಿನ ಪ್ರಕರಣವೇ ರಾಜಕೀಯ ಷಡ್ಯಂತ್ರಕ್ಕೆ ಸಾಕ್ಷಿ ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಕುರಿತಯ ಮಾತನಾಡಿ, ನಮ್ಮ ಮೇಲಿನ ಇ.ಡಿ ಪ್ರಕರಣ ವಜಾವಾಗಿದ್ದರೂ ಸಿಬಿಐಗೆ ಪತ್ರ ಬರೆಯುವುದು, ಸಿಬಿಐ ಆದಾಯ ತೆರಿಗೆಗೆ ಪತ್ರ ಬರೆಯುವುದು ಹೀಗೆ ಪ್ರತಿ ಹಂತದಲ್ಲೂ ಯಾವುದಾದರೂ ಪ್ರಕರಣದ ಸುಳಿಯಲ್ಲಿ ಸಿಲುಕಿಸಿ ಸದೆಬಡಿಯುವ ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಇಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿಲ್ಲ. ಸರಿ, ತಪ್ಪು ತೀರ್ಮಾನ ಮಾಡಲು ತನಿಖೆ ನಡೆಯುತ್ತಿಲ್ಲ. ಎಲ್ಲಾದರೂ ಒಂದು ಕಡೆ ತಪ್ಪಿಸಿಕೊಂಡರೆ, ಮತ್ತೊಂದು ಕಡೆ ಸಿಲುಕಿಸುವ ಪ್ರವೃತ್ತಿ ಬೆಳೆಸಿಕೊಂಡು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.












Click it and Unblock the Notifications