Bengaluru 2nd Airport: 2ನೇ ವಿಮಾನ ನಿಲ್ದಾಣದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್
ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿದ ಬಳಿಕ ಘೋಷಣೆ ಮಾಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್ ತಿಳಿಸಿದ್ದರು. ಇದೀಗ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎರಡನೇ ವಿಮಾನ ನಿಲ್ದಾಣ ಸ್ಥಳ ಆಯ್ಕೆ ಪ್ರಕ್ರಿಯೆ ಬಗ್ಗೆ ಮಾತನಾಡಿದ್ದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾಂತ್ರಿಕ ಅವಶ್ಯಕತೆಗಳ ಆಧಾರದ ಮೇಲೆ ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು. ತುಮಕೂರು, ಬಿಡದಿ, ನೆಲಮಂಗಲ ಅಥವಾ ಬೇರೆ ಯಾವುದೇ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದು ನಾವು ನಿರ್ಧರಿಸಲು ಆಗಲ್ಲ ಅದನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದ್ದಾರೆ.

ಇಂತಿಷ್ಟು ವರ್ಷಗಳ ಕಾಲ 100 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬಾರದು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ನಡುವೆ ಒಪ್ಪಂದವಿದ್ದು, ಅದನ್ನು ಕೂಡ ಚರ್ಚೆ ಮಾಡಿ ಬಳಿಕ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಸಚಿವ ಎಂ.ಬಿ ಪಾಟೀಲ್ ಅವರ ನೇತೃತ್ವದಲ್ಲಿ ಸಂಬಂಧಪಟ್ಟ ಇಲಾಖೆಗಳು ಕಾರ್ಯಸಾಧ್ಯತೆಯ ಬಗ್ಗೆ ಪರಿಶೀಲನೆ ಮಾಡುತ್ತಿವೆ. ಎಂಬಿ ಪಾಟೀಲ್ ಮತ್ತು ಅಧಿಕಾರಿಗಳು ನನ್ನ ಮತ್ತ ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸುತ್ತಾರೆ. ಬಳಿಕ ಅದನ್ನು ಸಂಪುಟದ ಮುಂದೆ ಇಡಲಾಗುವುದು, ಅದಾದ ಬಳಿಕ ಕೇಂದ್ರದಿಂದ ಅನುಮೋದನೆ ಪಡೆದು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ನನ್ನ ಊರಿನ ಸಮೀಪವೇ ವಿಮಾನ ನಿಲ್ದಾಣ ಬರಬೇಕು ಎನ್ನುವ ಆಸೆ ನನಗೆ ಇದ್ದ ಮಾತ್ರಕ್ಕೆ ಹಾಗೆ ಮಾಡಲು ಆಗಲ್ಲ. ಹತ್ತಿರದಲ್ಲಿ ಬೆಟ್ಟಗಳು ಇರಬಾರದು, ಹಾರುವ ವಲಯ ಇರಬೇಕು ಎನ್ನುವುದು ಸೇರಿದಂತೆ ಹಲವು ನಿಬಂಧನೆಗಳಿವೆ, ತಾಂತ್ರಿಕವಾಗಿ ಕೂಡ ಎಲ್ಲವೂ ಸರಿಯಾಗಿರಬೇಕು ಎಂದು ಹೇಳಿದರು.
ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಕುರಿತಂತೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಅಭಿವೃದ್ಧಿಯನ್ನು ಮಾತ್ರ ಮಾನದಂಡವನ್ನಾಗಿ ಪರಿಗಣಿಸಿ, ಬೆಂಗಳೂರು ಬೆಳವಣಿಗೆಗೆ ಸಹಾಯವಾಗುವಂತೆ ಸ್ಥಳ ಆಯ್ಕೆ ಮಾಡಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದರು. ನೆಲಮಂಗಲ, ಬಿಡದಿ ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ ಎಂದು ವರದಿಯಾಗಿದ್ದು, ಸಿಎಂ ಸಿದ್ದರಾಮಯ್ಯನವರೇ ಈ ಬಗ್ಗೆ ಅಂತಿಮ ನಿರ್ಧಾರ ಮಾಡಲಿದ್ದಾರೆ ಎನ್ನಲಾಗಿದೆ.












Click it and Unblock the Notifications