ಅತೃಪ್ತ ಶಾಸಕ ಮಿತ್ರರಿಗೆ ಡಿ.ಕೆ.ಶಿವಕುಮಾರ್ ವಿನಮ್ರ ಮನವಿ
Recommended Video
ಬೆಂಗಳೂರು, ಜುಲೈ 19: ಸರ್ಕಾರದ ಮೇಲೆ ಅತೃಪ್ತಿ ಪ್ರಕಟಿಸಿ ಮುಂಬೈನಲ್ಲಿ ನೆಲೆಸಿರುವ ಶಾಸಕರಿಗೆ ಡಿ.ಕೆ.ಶಿವಕುಮಾರ್ ಅವರು ಸಂದೇಶ ನೀಡಿದ್ದು, 'ನಿಮ್ಮನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ, ಅವರ ತಂತ್ರಕ್ಕೆ ಬಲಿಯಾಗಬೇಡಿ' ಎಂದಿದ್ದಾರೆ.
ನಿನ್ನೆ ರಾತ್ರಿ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಅತೃಪ್ತ ಶಾಸಕ ಮಿತ್ರರನ್ನು ಬಿಜೆಪಿ ಮಂಗ ಮಾಡುತ್ತಿದೆ, ಅವರು ಯಾಮಾರಬಾರದು' ಎಂದು ಹೇಳಿದರು.
ಬಿಜೆಪಿ ಶಾಸಕರು ಮಾತನಾಡಿಕೊಳ್ಳುತ್ತಿದ್ದಾರೆ, ನಿಮ್ಮನ್ನು ಅವರು ಮಂತ್ರಿ ಮಾಡುವುದಿಲ್ಲ ಎಂದ ಡಿ.ಕೆ.ಶಿವಕುಮಾರ್ ಅವರು, ಅತೃಪ್ತ ಶಾಸಕರು ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಅತೃಪ್ತ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅವರು ಅಂಗೀಕಾರ ಮಾಡಿಲ್ಲ, ಅತೃಪ್ತರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ, ಬಿಜೆಪಿಯು ಅತೃಪ್ತರ ಭವಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ರಾಜ್ಯಪಾಲರು ಸಿಎಂ ಅವರಿಗೆ ಬರೆದಿರುವ ಪತ್ರದ ಕೆಲವು ಭಾಗ ಓದಿ ಹೇಳಿದ ಅವರು, ' ರಾಜೀನಾಮೆ ನೀಡಿರುವ ಶಾಸಕರು ಇನ್ನೂ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಉಳಿದಿದ್ದಾರೆ. ಆದರೆ ರಾಜ್ಯಪಾಲರು ಸರ್ಕಾರಕ್ಕೆ ಬಹುಮತವಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ' ರಾಜ್ಯಪಾಲರೇ ಪಕ್ಷಾಂತರ ಮಾಡಲು ಬೆಂಬಲ ನೀಡಿದಂತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಾಧುಸ್ವಾಮಿ ಅವರು ವಿಧಾನಸಭೆಯಲ್ಲಿ ಮಾತನಾಡುತ್ತಾ ಉಲ್ಲೇಖಿಸಿದ ವಿಚಾರವನ್ನು ಪ್ರಸ್ತಾಪಿಸಿದ ಡಿ.ಕೆ.ಶಿವಕುಮಾರ್, 'ಸುಪ್ರೀಂಕೋರ್ಟ್ ಬಿಜೆಪಿಗೆ ಸಹಾಯ ಮಾಡುತ್ತಿದೆ' ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ, ಮಾಧುಸ್ವಾಮಿ ಅವರ ಮಾತುಗಳಿಂದ ಬಿಜೆಪಿಯು ಸುಪ್ರೀಂಕೋರ್ಟ್ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಡಿಕೆಶಿ ಆರೋಪಿಸಿದರು.
ಸುಪ್ರೀಂಕೋರ್ಟ್ ನ್ಯಾಯಯುತವಾಗಿ ಕಾರ್ಯಕಲಾಪ ಮಾಡುತ್ತಿದೆ, ಅದು ಸ್ವತಂತ್ರ್ಯ ಸಂಸ್ಥೆಯಾಗಿದೆ. ಆದರೆ ಅದರ ಹೆಸರನ್ನು ಬಿಜೆಪಿಯು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಸ್ವತಃ ಸುಪ್ರೀಂಕೋರ್ಟ್ ಕಡಿವಾಣ ಹಾಕಬೇಕು ಎಂದು ಡಿ.ಕೆ.ಶಿವಕುಮಾರ್ ಒತ್ತಾಯ ಮಾಡಿದರು.












Click it and Unblock the Notifications